ಹಿರೇಕೆರೂರು: ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.ತಾಲೂಕಿನ ಹಂಸಭಾವಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಭೂಮಿಪೂಜೆ ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಅವರು ಈ ಭಾಗದ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಉತ್ತಮ ಚಿಕಿತ್ಸೆ ದೊರೆಯುವಂತೆ ಈ ನೂತನ ಕಟ್ಟಡ 3.20 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಜನರ ಆರೋಗ್ಯ ಸೇವೆಗಳನ್ನು ಮತ್ತಷ್ಟು ಬಲಪಡಿಸುವುದರಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಯಾವುದೇ ಔಷಧಿಗಳ ಕೊರತೆ ಆಗದ ಹಾಗೆ ವೈದ್ಯರು ನಿಭಾಯಿಸಬೇಕು. ಒಂದು ವೇಳೆ ಔಷಧಿ ಕೊರತೆ ಬಂದಲ್ಲಿ (ಎಬಿ-ಎಆರ್‌ಕೆ) ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಔಷಧಿಯನ್ನು ಕೊಡಬೇಕು ಎಂದು ಸಲಹೆ ನೀಡಿದರು. ಗ್ರಾಮಸ್ಥರು ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಶಾಸಕರಿಗೆ ಪ್ರಸ್ತಾವನೆ ಪತ್ರ ನೀಡಿದರು. ಅದಕ್ಕೆ ಶಾಸಕ ಬಣಕಾರ ಅವರು ಪ್ರತಿಕ್ರಿಯಿಸಿ ಸರ್ಕಾರದ ಮಟ್ಟದಲ್ಲಿ ಈಗಾಗಲೇ ಈ ಸಂಬಂಧ ಪ್ರಸ್ತಾವನೆ ಮಾಡಿದ್ದೇನೆ. ವೈದ್ಯರ ಕೊರತೆ ಹಾಗೂ ಆಸ್ಪತ್ರೆಯ ಸಿಬ್ಬಂದಿಯನ್ನು ಆದಷ್ಟು ಬೇಗ ತುಂಬುವಲ್ಲಿ ಸಂಬಂಧಿತ ಇಲಾಖೆಗೆ ತಿಳಿಸಿ ಸೇವೆ ಒದಗಿಸಲು ಕ್ರಮ ಕೈಗೊಳಲಾಗುವುದು ಎಂದರು.ಈ ವೇಳೆ ಗ್ಯಾರಂಟಿ ಯೋಜನೆ ಅಧ್ಯಕ್ಷ ಮಲ್ಲಿಕಾರ್ಜುನ ಬುರಡಿಕಟ್ಟಿ, ಹಾಲು ಒಕ್ಕೂಟ್ಟದ ಜಿಲ್ಲಾ ಉಪಾಧ್ಯಕ್ಷ ಉಜ್ಜನಗೌಡ ಮಾವಿನತೋಪ, ತಾಲೂಕು ಆರೋಗ್ಯಾಧಿಕಾರಿ ಡಾ. ಜಡ್.ಆರ್. ಮಕಾಂದರ, ಡಾ. ಆರೋಗ್ಯ ಅಧಿಕಾರಿ ಚೇತನಕುಮಾರ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಮಡಿವಾಳರ, ಷಣ್ಮುಖಯ್ಯ ಮಳೆಮಠ, ಮೃತ್ಯುಂಜಯ ಬಾಸೂರ, ಮಂಜುನಾಥ ಮುರಡಕ್ಕನವರ, ಉಳಿವೆಪ್ಪಾ ಹುಚಗೊಂಡರ, ಮುನೇಶಗೌಡ ಪಾಟೀಲ ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು.