ಸಾರಾಂಶ
ಕನ್ನಡಪ್ರಭ ವಾರ್ತೆ ವಿಧಾನಸಭೆ
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಕಾಂಗ್ರೆಸ್ ನಾಯಕ, ಸದಸ್ಯರ ನೇಮಕ ಹಾಗೂ ಗೌರವ ಧನ ನೀಡುತ್ತಿರುವ ಸರ್ಕಾರದ ಕ್ರಮಕ್ಕೆ ಪ್ರತಿಪಕ್ಷಗಳ ತೀವ್ರ ಆಕ್ಷೇಪ ಹಾಗೂ ಆಡಳಿತ ಪಕ್ಷ ಸದಸ್ಯರ ಬಲವಾದ ಸಮರ್ಥನೆಯಿಂದಾಗಿ ಮಂಗಳವಾರದ ಇಡೀ ದಿನದ ಕಲಾಪ ಗದ್ದಲಕ್ಕೆ ಬಲಿಯಾಯಿತು.ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್ ಎಂ.ಟಿ.ಕೃಷ್ಣಪ್ಪ ಅವರು ಪ್ರಸ್ತಾಪಿಸಿದ ಈ ವಿಚಾರಕ್ಕೆ ಪ್ರತಿಪಕ್ಷದ ಬಹುತೇಕ ಎಲ್ಲ ಸದಸ್ಯರು ಒಕ್ಕೊರಲ ಬೆಂಬಲ ನೀಡಿ ಸರ್ಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು ಸರ್ಕಾರದ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರಿಂದ ತೀವ್ರ ವಾಗ್ವಾದ, ಗದ್ದಲದಿಂದಾಗಿ ಸದನವನ್ನು ಮೂರು ಬಾರಿ ಮುಂದೂಡಬೇಕಾದ ಸ್ಥಿತಿ ನಿರ್ಮಾಣವಾಯಿತು.
ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಹೊಂದಾಣಿಕೆ ಮೂಡಿಸಲು ಸ್ಪೀಕರ್ ಯು.ಟಿ.ಖಾದರ್ ಸದನ ಮುಂದೂಡಿ ಸಂಧಾನ ಸಭೆ ನಡೆಸಿದರೆ, ಅಲ್ಲೂ ವಾಗ್ವಾದ ನಡೆದಿದ್ದರಿಂದ ಸಭೆಯೇ ವಿಫಲವಾಯ್ತು. ಅಂತಿಮವಾಗಿ ಸದನ ಮರು ಸಮಾವೇಶಗೊಂಡಾಗ ಸರ್ಕಾರ ತನ್ನ ನೀತಿಯನ್ನು ಬಲವಾಗಿ ಸಮರ್ಥಿಸಿಕೊಂಡು, ಪ್ರತಿಪಕ್ಷಗಳ ಆಗ್ರಹದಂತೆ ಶಾಸಕರಿಗೂ ಸಮಿತಿಯಲ್ಲಿ ಅವಕಾಶ ಕೊಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವ ಭರವಸೆ ಮಾತ್ರ ನೀಡಿತು. ಇದಕ್ಕೆ ಪ್ರತಿಪಕ್ಷ ಒಪ್ಪದೆ ಸದನದ ಬಾವಿಗಿಳಿದು ಮತ್ತೆ ಪ್ರತಿಭಟನೆ ಆರಂಭಿಸಿದ್ದರಿಂದ ಇಡೀ ದಿನ ಪ್ರಶ್ನೋತ್ತರದ ಕೆಲ ಪ್ರಶ್ನೆಗಳು ಹಾಗೂ ಒಂದು ವಿಧೇಯಕ ಮಾತ್ರ ಮಂಡನೆ ಸಾಧ್ಯವಾಯ್ತು. ಅಂತಿಮವಾಗಿ ಸ್ಪೀಕರ್ ಅವರು ಸದನವನ್ನು ಬುಧವಾರಕ್ಕೆ ಮುಂದೂಡಿದರು.ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಎಂ.ಟಿ.ಕೃಷ್ಣಪ್ಪ ಅವರು ಗ್ಯಾರಂಟಿ ಸಮಿತಿಗಳಿಗೆ ಕಾಂಗ್ರೆಸ್ಸಿಗರನ್ನು ನೇಮಿಸಲು ಯಾವ ನಿಯಮಾವಳಿಯಲ್ಲಿ ಅವಕಾಶವಿದೆ ಎಂದು ಪ್ರಶ್ನಿಸಿದರು. ಕೂಡಲೇ ಇದಕ್ಕೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿ ಬಿಜೆಪಿ ಸದಸ್ಯರು ಬೆಂಬಲಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಆರಂಭಿಸಿದರು.
ಈ ಸಂದರ್ಭದಲ್ಲಿ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ, ವಾಗ್ವಾದ ಆರಂಭಗೊಂಡಿತು. ಒಂದು ಹಂತದಲ್ಲಿ ಈ ನೇಮಕ ಸಮರ್ಥಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿ ನಮ್ಮನ್ನು ಅಧಿಕಾರಕ್ಕೆ ತಂದ ಕಾರ್ಯಕರ್ತರಿಗೆ ಹುದ್ದೆ ನೀಡುವ ಹಕ್ಕು ನಮಗಿದೆ. ಅದನ್ನು ನಿಮ್ಮಿಂದ ಸಹಿಸಲಾಗುತ್ತಿಲ್ಲವಲ್ಲ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕುರಿತ ಯಾವುದೇ ನಿರ್ಧಾರ ಈಗಲೇ ತಿಳಿಸಲಾಗದು. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ ನಿರ್ಧಾರ ಪ್ರಕಟಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.ಶಾಸಕರೇ ಸುಪ್ರೀಂ:
ಇದರಿಂದ ಮತ್ತಷ್ಟು ಸಿಟ್ಟಾದ ಬಿಜೆಪಿ-ಜೆಡಿಎಸ್ ಶಾಸಕರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಕಾರ್ಯಕರ್ತರನ್ನು ನೇಮಿಸಿ, ಸರ್ಕಾರದಿಂದ ಗೌರವಧನ ನೀಡುವುದು ಕಾನೂನು ಬಾಹಿರ ಕ್ರಮ. ತಾಲೂಕುಗಳಲ್ಲಿ ಆಯಾ ಶಾಸಕರೇ ಸುಪ್ರೀಂ. ಹೀಗಾಗಿ ಸಮಿತಿಗಳಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡಬೇಕು. ನಿಮ್ಮ ಕಾರ್ಯಕರ್ತರನ್ನು ಬೇಕಾದರೆ ಸದಸ್ಯರನ್ನಾಗಿ ನೇಮಿಸಿ ಎಂದರು.ವಿರೋಧ ಪಕ್ಷದ ಶಾಸಕರ ಈ ಆಗ್ರಹಕ್ಕೆ ಸರ್ಕಾರ ಒಪ್ಪದೇ, ಸಚಿವ ಸಂಪುಟ ಸಭೆಯಲ್ಲಿಯೇ ನಿರ್ಧರಿಸಲಾಗುವುದು. ಅಲ್ಲಿಯವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿತು. ಇದರಿಂದ ಗದ್ದಲ ಮತ್ತಷ್ಟು ಹೆಚ್ಚಾಗಿ, ವಿರೋಧ ಪಕ್ಷದ ಶಾಸಕರೆಲ್ಲರೂ ಪ್ರತಿಭಟನೆ ಮುಂದುವರಿಸಿದರು. ಹೀಗಾಗಿ ಸ್ಪೀಕರ್ ಸದನವನ್ನು ಭೋಜನ ವಿರಾಮದ ನೆಪದಲ್ಲಿ ಮುಂದೂಡಿದರು.
ಗುರುವಾರದ ಸಂಪುಟ ಸಭೆಯಲ್ಲಿ ನಿರ್ಧರಿಸಿ:ಭೋಜನ ವಿರಾಮದ ಬಳಿಕ ಸದನ ಸಮಾವೇಶಗೊಂಡಾಗ, ವಿಪಕ್ಷ ಸದಸ್ಯರು ಧರಣಿಯನ್ನು ಮುಂದುವರಿಸಿದರು. ಆಗ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ವಿರೋಧ ಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸಬಾರದು ಎಂದು ಕೋರಿದರು.
ಆಗ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಇದೇ ವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆಯೇ? ಎಂಬುದನ್ನು ತಿಳಿಸಿ ಎಂದು ಪಟ್ಟು ಹಿಡಿದರು. ಅದಕ್ಕೆ ಡಾ.ಜಿ.ಪರಮೇಶ್ವರ್ ಅವರು, ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸುತ್ತೇವೆ. ಆದರೆ, ತೀರ್ಮಾನ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದರು. ಸಚಿವರ ಉತ್ತರ ಸಮರ್ಪಕವಾಗಿಲ್ಲ ಎಂದ ಪ್ರತಿಪಕ್ಷ ಶಾಸಕರು ಧರಣಿ ಮುಂದುವರಿಸಿದರು. ಅದರಿಂದ ಸಭಾಧ್ಯಕ್ಷ ಯು.ಟಿ.ಖಾದರ್ ಸದನವನ್ನು ಬುಧವಾರಕ್ಕೆ ಮುಂದೂಡಿದರು.ಗದ್ದಲದ ನಡುವೆಯೇ ಕಲಾಪ ನಡೆಸಿದ ಸ್ಪೀಕರ್ಪ್ರತಿಪಕ್ಷ ಶಾಸಕರ ಧರಣಿ, ಸರ್ಕಾರದ ವಿರುದ್ಧ ಘೋಷಣೆ ನಡುವೆಯೇ ಸ್ಪೀಕರ್ ಯು.ಟಿ.ಖಾದರ್ ಕಲಾಪ ನಡೆಸಿದರು. ವಿರೋಧ ಪಕ್ಷದ ಶಾಸಕರೆಲ್ಲರೂ ಸದನದ ಬಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾರಣದಿಂದಾಗಿ, ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಶಾಸಕರು ಮಾತ್ರ ಪಾಲ್ಗೊಂಡು, ತಮ್ಮ ಪ್ರಶ್ನೆಗೆ ಸರ್ಕಾರದಿಂದ ಉತ್ತರ ಪಡೆದರು. ಅಲ್ಲದೆ, ಗದ್ದಲದ ನಡುವೆಯೇ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ 2025ನ್ನು ಮಂಡಿಸಿದರು.ಸಂಧಾನ ಸಭೆಯಲ್ಲೂ ಗದ್ದಲ
ಈ ವಿಚಾರ ಸದನದಲ್ಲಿ ತೀವ್ರ ವಾಕ್ಸಮರಕ್ಕೆ ಕಾರಣವಾದ್ದರಿಂದ ಸದನವನ್ನು ಮುಂದೂಡಿದ್ದ ಸ್ಪೀಕರ್ ಯು.ಟಿ. ಖಾದರ್, ಆಡಳಿತ ಮತ್ತು ವಿಪಕ್ಷ ಸದಸ್ಯರೊಂದಿಗೆ ಸಂಧಾನ ಸಭೆ ನಡೆಸಿದರು. ಆದರೆ, ಆ ಸಭೆಯಲ್ಲೂ ಸಚಿವರು ಮತ್ತು ಬಿಜೆಪಿ ಶಾಸಕರ ನಡುವೆ ವಾಗ್ವಾದ ನಡೆಯಿತು. ಬಿಜೆಪಿ ಶಾಸಕ ಸುನೀಲ್ ಕುಮಾರ್ ಸೇರಿ ಇತರರು ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಕೆಲ ವಿಚಾರಗಳ ಕುರಿತು ಏರುಧ್ವನಿಯಲ್ಲೇ ಮಾತನಾಡಿದರು. ಇದರಿಂದ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.ಕೊನೆಗೆ ಸಚಿವ ಎಚ್.ಕೆ. ಪಾಟೀಲ್, ಸಮಸ್ಯೆಯ ಅರಿವಿದೆ, ಸಮಿತಿಗಳನ್ನು ಪುನಾರಚನೆಗೆ ಚಿಂತಿಸುತ್ತೇವೆ ಎಂದರು. ಅದಕ್ಕೊಪ್ಪದ ಡಿಸಿಎಂ ಡಿ.ಕೆ.ಶಿವಕುಮಾರ್, ಯಾವುದೇ ನಿರ್ಧಾರವಾದರೂ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿಯೇ ಮಾಡಬೇಕು. ಹೀಗಾಗಿ ಈಗ ಏನನ್ನೂ ಪ್ರಕಟಿಸಲಾಗದು ಎಂದರು. ಹೀಗೆ ಸಂಧಾನ ಸಭೆಯೂ ವಿಫಲವಾಯ್ತು.
==ಧನವಿನಿಯೋಗ ವಿಧೇಯಕಕ್ಕೆ ಅಡ್ಡಿಪಡಿಸುವ ಬೆದರಿಕೆ
ತಮ್ಮ ಶಾಸಕರ ಧರಣಿಗೆ ಜಗ್ಗದ ಸರ್ಕಾರದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ಗ್ಯಾರಂಟಿ ಸಮಿತಿಗಳನ್ನು ರದ್ದು ಮಾಡದಿದ್ದರೆ, ಧನವಿನಿಯೋಗ ವಿಧೇಯಕ ಅನುಮೋದನೆಗೆ ಅಡ್ಡಿಪಡಿಸುತ್ತೇವೆ. ಈವರೆಗೆ ಧನವಿಯೋಗ ವಿಧೇಯಕದ ಅನುಮೋದನೆಗೆ ಯಾರೂ ಅಡ್ಡಿಯುಂಟು ಮಾಡಿಲ್ಲ. ಈಗ ಗ್ಯಾರಂಟಿ ಸಮಿತಿಗಾಗಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುವಂತೆ ಮಾಡಬೇಡಿ ಎಂದು ಸರ್ಕಾರವನ್ನು ಎಚ್ಚರಿಕೆ ನೀಡಿದರು.ಕಗ್ಗದ ಮೂಲಕ ಡಿಸಿಎಂ ತಿರುಗೇಟು
ತಾವು ಉತ್ತರ ನೀಡುವ ಸಂದರ್ಭದಲ್ಲಿ ವಿಪಕ್ಷ ಶಾಸಕರು ಗದ್ದಲ ಎಬ್ಬಿಸುತ್ತಿದ್ದದ್ದಕ್ಕೆ ಡಿ.ವಿ.ಗುಂಡಪ್ಪ ಅವರ ಕಗ್ಗದ ಮೂಲಕ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು. ನೀವು ಆಡುತ್ತಿರುವ ರೀತಿ ನೋಡಿದರೆ, ಡಿವಿಜಿ ಅವರ ‘ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ, ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ, ಉದ್ಧರಿಸುವೆನು ಜಗವನೆನ್ನುತಿಹ ಸಖನೆ, ನಿನ್ನುದ್ಧಾರವೆಷ್ಟಾಯ್ತೋ?- ಮಂಕುತಿಮ್ಮ’ ಎಂಬ ಕಗ್ಗವನ್ನು ಹೇಳಿದ್ದು ವಿಶೇಷವಾಗಿತ್ತು.==
ಗ್ಯಾರಂಟಿ ಯೋಜನೆಗಳ ಅನುಷ್ಠಾನ==
ಸಮಿತಿ ಗೌರವಧನ, ಭತ್ಯೆ ವಿವರಹುದ್ದೆಗೌರವಧನಸಭಾ ಭತ್ಯೆ (ಜಿಲ್ಲಾ ಮಟ್ಟ)
ಅಧ್ಯಕ್ಷ40000 ರು.00ಉಪಾಧ್ಯಕ್ಷ10000 ರು.00
ಸದಸ್ಯರು001100 ರು.==
ಹುದ್ದೆಗೌರವಧನಸಭಾ ಭತ್ಯೆ (ತಾಲೂಕು ಮಟ್ಟ)ಅಧ್ಯಕ್ಷ25000 ರು.00
ಸದಸ್ಯರು001000 ರು.--