ರೈತರ ಸಮಸ್ಯೆ ನಿವಾರಣೆಗೆ ಸರ್ಕಾರದ ನಿರ್ಲಕ್ಷ್ಯ ಖಂಡನೀಯ

| Published : Oct 28 2025, 12:03 AM IST

ಸಾರಾಂಶ

ಚಳ್ಳಕೆರೆ ನಗರದ ತಾಲೂಕು ಕಚೇರಿ ಮುಂಭಾಗದ ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಅಖಂಡ ಕರ್ನಾಟಕ ರೈತ ಸಂಘ, ಯುವಘಟಕ, ಮಹಿಳಾ ಸಂಘಟನೆಗಳು ಸಂಯುಕ್ತಾಶ್ರಯದಲ್ಲಿ ಸೋಮವಾರ ತಾಲೂಕು ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ, ರಸ್ತೆತಡೆ, ಮಾನವ ಸರಪಳಿ ನಿರ್ಮಿಸಿ ಬೆಳಗ್ಗೆ 11 ರಿಂದ ಸಂಜೆ 6 ವರೆಗೂ ನಿರಂತರವಾಗಿ ಪ್ರತಿಭಟನೆ ನಡೆಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

ಪ್ರಸ್ತುತ 2025-26ನೇ ಸಾಲಿನಲ್ಲಿ ರೈತರು ಬಿತ್ತಿದ ಎಲ್ಲಾಬೆಳೆಗಳು ವಿಫಲವಾಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ರೈತರು ಪಾವತಿಸಿದ ಬೆಳೆವಿಮೆ, ಬೆಳೆನಷ್ಟ ಪರಿಹಾರ ಇನ್ನೂ ದೊರಕಿಲ್ಲ. ಸರ್ಕಾರ ರೈತರ ಉಳಿವಿಗಾಗಿ ಮಧ್ಯಂತರ ಪರಿಹಾರ ನೀಡಬೇಕು, ರೈತರ ಸಾಲಮನ್ನಾ, ಚಳ್ಳಕೆರೆ, ಮೊಳಕಾಲ್ಮೂರು, ಹಿರಿಯೂರು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಚುರುಕುಗೊಳಿಸಿ, ಕಳೆದ 2023-24ರ ಬೆಳೆವಿಮೆ ಮಿಸ್‌ಮ್ಯಾಚ್ ಸರಿಪಡಿಸಬೇಕು, ವಿದ್ಯುತ್ ಖಾಸಗೀಕರಣ ಕೂಡಲೇ ತಡೆಯಬೇಕು, ಗ್ರಾಮಾಂತರ ಪ್ರದೇಶಕ್ಕೆ ಬಸ್ ಸೌಕರ್ಯ, ಕ್ಯಾದಿಕುಂಟೆ ನ್ಯಾಯಬೆಲೆ ಅಂಗಡಿ ಪರಿಹಾರ ಸೂಚಿಸಬೇಕು, ಮೆಕ್ಕೆಜೋಳ ಖರೀದಿ ಕೇಂದ್ರ ಪ್ರಾರಂಭಿಸಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದರಲ್ಲದೆ, ಜಿಲ್ಲಾಧಿಕಾರಿಗಳು ಆಗಮಿಸಿ ಬೇಡಿಕೆಗಳನ್ನು ಈಡೇರಿಸಬೇಕೆಂದು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರೈತ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ರೈತರ ಸಮಸ್ಯೆಗಳ ಪರಿಹಾರದ ಬಗ್ಗೆ ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿದರು. ಯಾವುದೇ ಸರ್ಕಾರ ಸಾಲ ಮಾಡಿದರೂ ಅದನ್ನು ರೈತರು ತೀರಸಬೇಕು. ಸರ್ಕಾರ ಮಲ್ಟಿನ್ಯಾಷನಲ್ ಕಂಪನಿಗಳಿಗೆ ಸಾವಿರಾರು ಕೋಟಿಸಾಲ ನೀಡುತ್ತದೆ. ಆದರೆ, ರೈತರು ಪಾವತಿಸದ ಬೆಳೆವಿಮೆ, ಬೆಳೆನಷ್ಟ ಪರಿಹಾರ ಕೊಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಸರ್ಕಾರ ರೈತರನ್ನು ಬಿಕ್ಷುಕರನ್ನಾಗಿ ನೋಡುತ್ತಿದೆ. ಆದರೆ ಸರ್ಕಾರ ತಿಳಿಸಬೇಕು ರೈತರು ಸರ್ಕಾರದ ಮಾಲೀಕರು, ಬಿಕ್ಷುಕರಲ್ಲ. ರೈತರ ಬೇಡಿಕೆಗಳು ಈಡೇರಿದೇ ಇದ್ದಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟಿಸುವುದಾಗಿ ತಿಳಿಸಿದರು.

ಅಖಂಡ ಕರ್ನಾಟಕ ರೈತ ಸಂಘ ತಾಲೂಕು ಅಧ್ಯಕ್ಷ ಚಿಕ್ಕಣ್ಣ ಮಾತನಾಡಿ, ಬೆಳಗಿನಿಂದ ಸಂಜೆವರೆಗೂ ರೈತರು ಸುಡುಬಿಸಿಲನ್ನೂ ಲೆಕ್ಕದೆ ಹಸಿವಿನಿಂದ ರಸ್ತೆಯ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾರೂ ಸ್ಥಳಕ್ಕೆ ಆಗಮಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಸರ್ಕಾರ ಇದೇ ಧೋರಣೆ ಮುಂದುವರಿಸಿದರೆ ರೈತರು ತಮ್ಮ ಹೋರಾಟದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ಬೀದಿಗಿಳಿದು ಹೋರಾಟ ನಡೆಸಿ ನಮಗೆ ನ್ಯಾಯುತವಾಗಿ ಸಿಗಬೇಕಾದ ಪರಿಹಾರ ಪಡೆಯಲು ನಾವು ಹಿಂದೇಟು ಹಾಕುವುದಿಲ್ಲವೆಂದರು.

ರೈತರ ಪ್ರತಿಭಟನೆಯ ಬಿಸಿ ಜಿಲ್ಲಾಡಳಿತಕ್ಕೆ ಮುಟ್ಟಿದ್ದು ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಉಪವಿಭಾಗಾಧಿಕಾರಿ ಮೊಹಬೂಬ್‌ ಜಿಲಾನಿ ಖುರೇಶಿ ಆಗಮಿಸಿ ರೈತರ ಪ್ರತಿಭಟನೆಯ ಬಗ್ಗೆ ತಹಸೀಲ್ದಾರ್ ರೇಹಾನ್‌ ಪಾಷ ಅವರಿಂದ ಮಾಹಿತಿ ಪಡೆದರು. ಇದೇ ಸಂದರ್ಭದಲ್ಲಿ ರೈತ ಮುಖಂಡರೊಂದಿಗೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು.

ತಾವು ಸರ್ಕಾರಕ್ಕೆ ಸುಮಾರು 10ಕ್ಕೂ ಹೆಚ್ಚು ಬೇಡಿಕೆಗಳನ್ನು ಈಡೇರಿಸುವಂತೆ ಲಿಖಿತ ಮೂಲಕ ಮನವಿ ಮಾಡಿದ್ದೀರಿ, ತಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕಳಿಸಲಾಗುವುದು. ತಾವು ಬೇಡಿಕೆಯಲ್ಲಿ ಪ್ರಾಸ್ತಾಪಿಸಿದಂತೆ ಬೆಳೆವಿಮೆ, ಬೆಳೆನಷ್ಟ ಹಾಗೂ ಮಧ್ಯಂತರ ಪರಿಹಾರ ನೀಡುವ ಬಗ್ಗೆ ಸರ್ಕಾರಕ್ಕೆ ವರದಿ ಕಳಿಸಲಾಗುವುದು. ಬೆಳೆ ವಿಮೆ ಮಿಸ್‌ಮ್ಯಾಚ್‌ ಆಗಿದ್ದರೆ ಅದನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಮೆಕ್ಕೆಜೋಳ ಖರೀದಿ ಕೇಂದ್ರವೂ ಸೇರಿದಂತೆ ಇನ್ನಿತರ ಬೇಡಿಕೆಗಳ ಬಗ್ಗೆ ತುರ್ತು ಗಮನಹರಿಸಲು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗವುದು. ಗ್ರಾಮಾಂತರ ಪ್ರದೇಶಕ್ಕೆ ಬಸ್‌ ಸೌಕರ್ಯ, ನ್ಯಾಯಬೆಲೆ ಅಂಗಡಿ ಸಮಸ್ಯೆ ವಿದ್ಯುತ್ ಖಾಸಗೀಕರಣ ವಿರೋಧಿಸಿ ತಾವು ನೀಡಿದ ಮನವಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಚರ್ಚೆ ನಡೆಸಲಾಗವುದು ಎಂದರು. ಸರ್ಕಾರ ರೈತರ ಮನವಿಯನ್ನು ಈಡೇರಿಸಲು ಸದಾಸಿದ್ದವಿದೆ. ಕೆಲವೊಂದು ಸಂದರ್ಭದಲ್ಲಿ ಮಾತ್ರ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಾಲಿಸಬೇಕಾಗುತ್ತದೆ. ತಮ್ಮ ಬೇಡಿಕೆಗಳನ್ನು ಈಡೇರಿಸಲು ಜಿಲ್ಲಾಡಳಿತ ಪ್ರಾಮಾಣಿಕ ಪ್ರಯತ್ನ ಮಾಡುವುದು ಎಂದರು.

ಪ್ರತಿಭಟನೆಯಲ್ಲಿ ರೈತ ಸಂಘ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಕಂಠಮೂರ್ತಿ, ಮಹಿಳಾ ಘಟಕದ ಅಧ್ಯಕ್ಷ ರತ್ನಮ್ಮ, ಶಾಂತ ಅಶೋಕ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚನ್ನಕೇಶವ ಮೂರ್ತಿ, ಸುರೇಶ್, ಹನುಮಂತಪ್ಪ, ಚೌಳೂರುಪ್ರಕಾಶ್, ವೀರೇಶ್, ಎರ‍್ರಿಸ್ವಾಮಿ ಸಿರಿಯಣ್ಣ, ಕ್ಯಾತಣ್ಣ, ಎಂ.ಶಿವಲಿಂಗಪ್ಪ, ಆರ್.ಎ.ದಯಾನಂದ, ತಾಲ್ಲೂಕು ಅಧ್ಯಕ್ಷ ರಾಜಣ್ಣ, ಪ್ರಧಾನಕಾರ್ಯದರ್ಶಿ ಟಿ.ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.