ಸರ್ಕಾರದ ಯೋಜನೆಗಳನ್ನು ತಳಮಟ್ಟಕ್ಕೆ ತಲುಪಿಸಬೇಕು: ಡಾ.ಕೆ.ಜಿ.ಕಾಂತರಾಜ್

| Published : May 16 2025, 02:03 AM IST

ಸಾರಾಂಶ

ತರೀಕೆರೆ, ಸರ್ಕಾರದ ಯೋಜನೆಗಳನ್ನು ಸಮಾಜದ ತಳಮಟ್ಟದ ಜನರಿಗೂ ತಲುಪಿಸಲು ಎಲ್ಲರೂ ಮುಂದಾಗಬೇಕು ಎಂದು ಉಪ ವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಹೇಳಿದ್ದಾರೆ.

ಸರ್ಕಾರಿ ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಸರ್ಕಾರದ ಯೋಜನೆಗಳನ್ನು ಸಮಾಜದ ತಳಮಟ್ಟದ ಜನರಿಗೂ ತಲುಪಿಸಲು ಎಲ್ಲರೂ ಮುಂದಾಗಬೇಕು ಎಂದು ಉಪ ವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಹೇಳಿದ್ದಾರೆ.ಬೆಂಗಳೂರು ದಿ ಹಂಗರ್ ಪ್ರಾಜೆಕ್ಟ್, ಸುಗ್ರಾಮ ಚುನಾಯಿತ ಗ್ರಾಪಂ ಮಹಿಳಾ ಸದಸ್ಯರ ಒಕ್ಕೂಟದ ಸಹಯೋಗದೊಂದಿಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸರ್ಕಾರಿ ಅಧಿಕಾರಿಗಳೊಂದಿಗೆ ಸಂವಾದದಲ್ಲಿ ಮಾತನಾಡಿದರು.

ಚುನಾಯಿತ ಗ್ರಾಪಂ ಮಹಿಳಾ ಸದಸ್ಯರು ಪಂಚಾಯತಿಯಲ್ಲಿ ಉತ್ತಮ ಸೇವೆ ನೀಡಬೇಕು. ಇದರ ಜೊತೆಗೆ ಸುಗ್ರಾಮ ಒಕ್ಕೂ ಒಳ್ಳೆಯ ಕೆಲಸ ಕಾರ್ಯ ಮಾಡುತ್ತಿದೆ. ಅದರಂತೆ ಎಲ್ಲಾ ಮಹಿಳಾ ಸದಸ್ಯರು ತಮ್ಮ ಗ್ರಾಮ ಪಂಚಾಯಿತಿ, ವಾರ್ಡ್ ಗಳಲ್ಲಿ ಉತ್ತಮ ಸೇವೆ ಸಲ್ಲಿಸುವ ಜೊತೆಗೆ ಸರ್ಕಾರದ ಯೋಜನೆಗಳಾದ ಪಡಿತರ , ಪಿಂಚಣಿ ವ್ಯವಸ್ಥೆ ಮತ್ತು ದೀನ ದಲಿತರಿಗೆ ಸಿಗುವಂತಹ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು. ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರು ಗ್ರಾಮಗಳಲ್ಲಿ ಸ್ಮಶಾನಭೂಮಿ ಇಲ್ಲದಿರುವ, ಸರ್ವೆ ಆಗಿ ಅಳತೆ ಆಗದೇ ಇರುವ ಬಗ್ಗೆ ಹಾಗೂ ಕೆರೆ ಒತ್ತುವರಿ ಕುರಿತು, ಗ್ರಾಮಗಳಲ್ಲಿ ಕಟ್ಟಿಕೊಂಡಿರುವ ಮನೆಗಳಿಗೆ ಹಕ್ಕು ಪತ್ರ ಸಿಗುವ ಕುರಿತು ಮನವಿ ಮಾಡಿದರು. ಆಗ ಉಪವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ಆರ್ ಐ ಮತ್ತು ವಿ.ಎ ಗಳಿಗೆ ದೂರವಾಣಿ ಮೂಲಕ ಮಾತನಾಡಿ ಯಾವ ಸ್ಮಶಾನ ಭೂಮಿಗಳು ಇಲ್ಲದಿರುವ ಗ್ರಾಮಗಳಲ್ಲಿ ಸರ್ವೆ ಮತ್ತು ಅಳತೆಯಾಗುವ ಕುರಿತು ಮಾತನಾಡಿ, ಅತಿ ಶೀಘ್ರದಲ್ಲೇ ಸ್ಮಶಾನಭೂಮಿ ಇಲ್ಲದ ಗ್ರಾಮಗಳಿಗೆ ಭೂಮಿ ಸಿಗಬೇಕೆಂದು ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು.

ಕಚೇರಿಗೆ ಬಂದು ಈ ವಿಷಯಗಳ ಬಗ್ಗೆ ಚರ್ಚೆ ಮಾಡಿ ಕೆಲಸಗಳನ್ನು ಮಾಡಿಸಿಕೊಳ್ಳಿ ನನ್ನ ಭಾಗಕ್ಕೆ ಬರುವ ಏನೇ ಸಮಸ್ಯೆ ಗಳಿದ್ದರೂ ನನ್ನ ಹತ್ತಿರ ನೇರವಾಗಿ ಮನವಿಗಳೊಂದಿಗೆ ಬಂದು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.ಉಪ ವಿಭಾಗ ಅಧಿಕಾರಿಗಳ ಕಚೇರಿ ನಾಗೇಂದ್ರ ಮಾತನಾಡಿ ಸ್ಮಶಾನ ಭೂಮಿ ಮತ್ತು ಅದರ ಅಭಿವೃದ್ಧಿ, ಸರ್ವೆ ಮತ್ತು ಅಳತೆ ಕುರಿತು ಚುನಾಯಿತ ಮಹಿಳೆಯರೊಂದಿಗೆ ಚರ್ಚಿಸಿದರು. ಅತಿ ಶೀಘ್ರದಲ್ಲಿ ನಾವು ಸ್ಮಶಾನಭೂಮಿ ಒದಗಿಸಲು ಕ್ರಮ ಹಾಗು ಮನೆ ಹಕ್ಕು ಪತ್ರಗಳನ್ನು ನೀಡಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.

ಕೆರೆ ಒತ್ತುವರಿ ಕುರಿತು ಬಂದ ಮನವಿಗಳ ಬಗ್ಗೆ ಉಪಭಾಗಾಧಿಕಾರಿಗಳ ಜೊತೆ ಚರ್ಚಿಸಿ ಕೆರೆ ಒತ್ತುವರಿ ತೆರವುಗೊಳಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.ಉಪ ತಹಸೀಲ್ದಾರ್ ಗೌತಮಿ ಮಾತನಾಡಿ ಪಿಂಚಣಿಯಲ್ಲಿ ಬರುವಂತಹ ಸಮಸ್ಯೆಗಳು, ಲೋಪದೋಷಗಳು ಮತ್ತು ಪಿಂಚಣಿ ಬಾರದೆ ಇರುವುದು ಅದರಲ್ಲೂ ಕೆಲವೊಂದು ಕಡೆ ಬಡತನ ಮತ್ತು ವಯಸ್ಸಾದವರಿಗೆ ಪಿಂಚಣಿ ಸಿಗದೆ ಪರದಾಡುವಂತ ಸಮಸ್ಯೆ ಗಳಿದ್ದರೆ ಕಚೇರಿಗೆ ಬಂದು ಭೇಟಿ ಮಾಡಿ ತಕ್ಷಣ ಅವರಿಗೆ ಪಿಂಚಣಿ ದೊರಕಿಸುವ ಕೆಲಸ ಮಾಡೋಣ ಎಂದು ಅಭಯ ನೀಡಿದರು.ಸಾಕ್ಷರತಾ ಅಧಿಕಾರಿ ಎನ್ .ಎಸ್. ಜಯಣ್ಣ ಬ್ಯಾಂಕಿನ ಸೌಲಭ್ಯಗಳು, ಮಹಿಳೆಯರ ಅಭಿವೃದ್ಧಿಗೆ ಸಿಗುವಂತಹ ಸಾಲ ಸೌಲಭ್ಯ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಿಗುವ ಸಾಲಗಳ ಕುರಿತು ಮತ್ತು ಆರ್ಥಿಕ ಸಾಕ್ಷರತೆ ಬಗ್ಗೆ ಮಾಹಿತಿ ನೀಡಿದರು. ಆಗ ಚುನಾಯಿತ ಮಹಿಳಾ ಸದಸ್ಯರು ಎನ್.ಆರ್.ಎಂ. ಸಂಘಗಳಿಗೆ ಸಿಗುವಂತ ಸಾಲಗಳು ಪ್ರತಿಭಾವಂತ ಗ್ರಾಮೀಣ ಮಕ್ಕಳಿಗೆ ಇಂಜಿನಿಯರಿಂಗ್ ಅಥವಾ ಇನ್ನಿತರೆ ಕೋರ್ಸ್ ಗಳಿಗೆ ವಿದ್ಯಾಭ್ಯಾಸಕ್ಕೆ ಸಿಗುವ ಸೌಲಭ್ಯ ಕುರಿತು ಚರ್ಚಿಸಿದರು.ಆಹಾರ ಇಲಾಖೆ ಜಗದೀಶ್ ಅವರೊಂದಿಗೆ ಪಡಿತರ ವಿತರಣೆ ಕುರಿತು ಚರ್ಚಿಸಲಾಯಿತು. ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನ ಸುಗ್ರಾಮ ಚುನಾಯಿತ ಮಹಿಳಾ ಸದಸ್ಯರು ಒಕ್ಕೂಟದ ಅಧ್ಯಕ್ಷೆ ಪುಷ್ಪಾ, ಉಪಾಧ್ಯಕ್ಷೆ ಶಕುಂತಲಾ ಪದಾಧಿಕಾರಿ ಆಲಮೇಲು, ತಾಲೂಕು ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಹಾದಿಕೆರೆ ಗ್ರಾಪಂ ಅಧ್ಯಕ್ಷೆ ರೇಖಾ, ದಿ ಹಂಗರ್ ಪ್ರಾಜೆಕ್ಟ್ ಸಂಯೋಜಕ ಶ್ರೀನಿವಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.16ಕೆಟಿಆರ್.ಕೆ.2ಃ

ತರೀಕೆರೆಯಲ್ಲಿ ಬೆಂಗಳೂರು ದಿ ಹಂಗರ್ ಪ್ರಾಜೆಕ್ಟ್, ಸುಗ್ರಾಮ ಚುನಾಯಿತ ಗ್ರಾಪಂ ಮಹಿಳಾ ಸದಸ್ಯರ ಒಕ್ಕೂಟ ಇವರ ಸಹಯೋಗದಲ್ಲಿ ನಡೆದ ಸರ್ಕಾರಿ ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ಮಾತನಾಡಿದರು. ದಿ ಹಂಗರ್ ಪ್ರಾಜೆಕ್ಟ್ ಸಂಯೋಜಕ ಶ್ರೀನಿವಾಸ್ ಮತ್ತಿತರರು ಇದ್ದರು.