ಸಾರಾಂಶ
ಹಳಿಯಾಳ: ಪರಿಶಿಷ್ಟ ಪಂಗಡದವರನ್ನು ಮುಖ್ಯವಾಹಿನಿಗೆ ತರಲು ಸರ್ಕಾರಗಳು ಹಲವಾರು ಯೋಜನೆಗಳನ್ನು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಆದರೂ ಈ ಯೋಜನೆಗಳು ಅರ್ಹರಿಗೆ ಸಕಾಲದಲ್ಲಿ ತಲುಪುತ್ತಿಲ್ಲವೆಂಬ ಕೂಗು ಕೇಳಿ ಬರುತ್ತಿದೆ ಎಂದು ವಿಪ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.
ಶುಕ್ರವಾರ ಪಟ್ಟಣದ ಡಾ.ಬಾಬು ಜಗಜೀವನರಾಮ್ ಭವನದಲ್ಲಿ ಆಯೋಜಿಸಿದ ಪರಿಶಿಷ್ಟ ಪಂಗಡಗಳಿಗೆ ಸರ್ಕಾರದಿಂದ ದೊರೆಯುವ ಯೋಜನೆಗಳು ಹಾಗೂ ಪರಿಶಿಷ್ಟ ಪಂಗಡದ ಕುಂದುಕೊರತೆ ಹಾಗೂ ಪರಿಹಾರ ಮಾರ್ಗೋಪಾಯಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಅಧಿಕಾರಿಗಳ ಮೇಲೆ ಗೂಬೆ ಕೂರಿಸಲು ಈ ಸಭೆಯನ್ನು ಕರೆದಿಲ್ಲ. ಅದರ ಬದಲು ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಳಿಸಲು ನಾವೇನು ಮಾಡಬೇಕು ಎಂದು ಚರ್ಚಿಸಲು ಈ ಸಭೆಯನ್ನು ಕರೆಯಲಾಗಿದೆ. ಬುಡಕಟ್ಟು ಸಮುದಾಯದವರಲ್ಲಿ ಸಾಕಷ್ಟು ಜನರಿಗೆ ಇನ್ನು ಹಕ್ಕುಪತ್ರ ಸಿಗಲಿಲ್ಲ. ಅದಕ್ಕಾಗಿ ಗ್ರಾಮ ಅರಣ್ಯ ಸಮಿತಿಗಳು ಕ್ರಿಯಾಶೀಲವಾಗಿ ಕಾರ್ಯ ನಡೆಸಬೇಕು ಎಂದರು.
ಪರಿಶಿಷ್ಟ ಪಂಗಡದವರ ಸಮಸ್ಯೆಗಳಿಗೆ ಸ್ಪಂದಿಸಿ, ಸರ್ಕಾರದ ಯೋಜನೆಗಳ ಲಾಭವು ಅವರಿಗೆ ದೊರೆಯುವಂತೆ ಸೇವೆ ಸಲ್ಲಿಸಿರಿ ಎಂದರು.ಪ್ರಮುಖ ಸಮಸ್ಯೆಗಳ ಪ್ರಸ್ತಾಪ:
ಬುಡಕಟ್ಟು ಸಿದ್ಧಿ ಸಮುದಾಯದ ಪರವಾಗಿ ಅಂತೋನ ಡಿಗ್ಗೇಕರ, ಮನ್ವೆಲ್, ಮೊನು ದೊಡ್ಮಣಿ, ಇಮಾಮಹುಸೇನ್, ಮೇರಿ ಗರಿಬಾಚೆ, ಜ್ಯೂಲಿಯಾನ್ ಮೊದಲಾದವರು ಮಾತನಾಡಿ, ತಮ್ಮ ಸಮುದಾಯದ ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಅರಣ್ಯ ಹಕ್ಕು ಕಾಯ್ದೆ, ವನ್ಯ ಪ್ರಾಣಿಗಳ ಹಾವಳಿ, ಕ್ರೀಡಾಪಟುಗಳಿಗೆ ಪ್ರೋತ್ಸಾಹ, ಮೂಲಭೂತ ಸೌಲಭ್ಯಗಳು, ಹವಗಿಯಲ್ಲಿರುವ ಸಿದ್ದಿ ಭವನದ ಅಭಿವೃದ್ಧಿ ಇತ್ಯಾದಿ ಬಗ್ಗೆ ಚರ್ಚೆ ನಡೆದವು.ವಾಡಾ, ಗರಡೊಳ್ಳಿ, ಗಾಡಗೇರಾ, ರಾಯಪಟ್ಟಣ, ಪಾಂಡರವಾಳ, ಭಾಗವತಿ, ಕೇಗದಾಳ, ಅಡ್ಡಿಗೇರಾ, ತಟ್ಟಿಗೇರಾ, ಅಡಕೆ ಹೊಸುರ, ದೊಡ್ಡಕೊಪ್ಪ ಮೊದಲಾದ ಕಾಂಡಚಿನ ಗ್ರಾಮಗಳ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಬೇಕೆಂಬ ಆಗ್ರಹ ಸಭೆಯಲ್ಲಿ ವ್ಯಕ್ತವಾಯಿತು. ನೈಜಿರಿಯಾದಿಂದ ಆಗಮಿಸುವ ವಿದೇಶಿಯರಿಂದ ಬುಡಕಟ್ಟು ಸಿದ್ಧಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಚರ್ಚೆ ನಡೆಯಿತು.
ಸಭೆಯಲ್ಲಿ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಹೆಸ್ಕಾಂ, ಸಮಾಜ ಕಲ್ಯಾಣ, ಪೋಲಿಸ್, ಪುರಸಭೆ, ಅರಣ್ಯ ಇಲಾಖೆಯ ವತಿಯಿಂದ ಪರಿಶಿಷ್ಟ ಪಂಗಡಗಳಿಗೆ ದೊರೆಯುವ ಸೌಲಭ್ಯಗಳ ಮಾಹಿತಿಯನ್ನು ಅಧಿಕಾರಿಗಳು ನೀಡಿದರು.ವಸತಿ ಗ್ರಾಮ ರಚಿಸಿ:
ಬುಡಕಟ್ಟು ಕಲಾವಿದೆ ಜ್ಯೂಲಿಯಾನ್ ಮಾತನಾಡಿ, ಬುಡಕಟ್ಟು ಸಿದ್ದಿ ಸಮುದಾಯದವರಿಗೆ ಗ್ರಾಮಾಂತರ ಭಾಗಗಳಲ್ಲಿ ವಸತಿಗಾಗಿ ಜಮೀನು ಕೊರತೆ ಎದುರಾಗುತ್ತಿರುವುದರಿಂದ ಜನಗಾ ಬಳಿ ಚಿನಗಿನಕೊಪ್ಪ ಅಥವಾ ಗರಡೊಳ್ಳಿ ಬಳಿ ಕಾಳಗಿನೆಟ್ಟಿ ಬಳಿ ಪುನರ್ವಸತಿ ಕೇಂದ್ರ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಸಮಾಜ ಕಲ್ಯಾಣಾಧಿಕಾರಿ ಅಶೋಕ ಪವಾರ ಮಾತನಾಡಿ, ತಾಲೂಕಿನಲ್ಲಿ 1833 ಫಲಾನುಭವಿಗಳು ಪೌಷ್ಟಿಕ ಆಹಾರ ವಿತರಿಸಲಾಗುತ್ತಿದೆ. ಸಿದ್ದಿ ಸಮುದಾಯದ 135 ಜನರಿಗೆ ಹಕ್ಕುಪತ್ರ ನೀಡಲಾಗಿದೆ ಎಂದರು. ಮಾಜಿ ರಾಷ್ಟ್ರೀಯ ಕ್ರೀಡಾಪಟು ಮೇರಿ ಗರಿಬಾಚೆಯವರು ಸಿದ್ದಿ ಸಮುದಾಯದವರು ನೆಲೆಸಿರುವ ಗ್ರಾಮಗಳಿಗೆ ಬೀದಿದೀಪ ಹಾಗೂ ಇತರ ಮೂಲಭೂತ ಸೌಲಭ್ಯಗಳ ಕಲ್ಪಿಸಬೇಕೆಂದು ಆಗ್ರಹಿಸಿದರು.
ಕಾಡುಪ್ರಾಣಿ ಹಾವಳಿ:ಸಹಾಯಕ ಉಪಸಂರಕ್ಷಣಾಧಿಕಾರಿ ಮಾಜಿ ಬೀರಪ್ಪ ಇಲಾಖೆಯ ಯೋಜನೆಗಳ ಮಾಹಿತಿ ನೀಡಿ ಬುಡಕಟ್ಟು ಸಿದ್ದಿ ಸಮುದಾಯದವರಿಗೆ 154 ಎಕರೆ ಜಮೀನನ್ನು ಅರಣ್ಯ ಹಕ್ಕು ಪತ್ರ ವಿತರಣಾ ಯೋಜನೆಯಲ್ಲಿ ವಿತರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದಿ ಮುಖಂಡರು, ಅರಣ್ಯದಂಚಿನಲ್ಲಿರುವ ಕೃಷಿ ಗದ್ದೆಗಳಿಗೆ ವನ್ಯಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಅರಣ್ಯ ಇಲಾಖೆಯು ಬೆಳೆಹಾನಿ ಪರಿಹಾರ ನೀಡುತ್ತಿಲ್ಲ. ವನ್ಯಪ್ರಾಣಿಗಳು ಬರುವುದನ್ನು ತಡೆಯಲು ಯೋಜನೆ ರೂಪಿಸಬೇಕು. ತಂತಿಬೇಲಿ ಹಚ್ಚಬೇಕೆಂದು ಆಗ್ರಹಿಸಿದರು.ಕಾಡನ್ನು ಸಂರಕ್ಷಿಸುತ್ತಾ ನೆಲೆಸಿರುವ ಸಿದ್ದಿಗಳ ಅಭಿವೃದ್ಧಿಯ ಬಗ್ಗೆ ಇಲಾಖೆಗಳು ಯೋಜಿಸಬೇಕೆಂದರು.
ದಿ.ಅಗ್ನೆಲ್ ಪುತ್ಥಳಿ ನಿರ್ಮಾಣ:ಕುಸ್ತಿ ಕ್ರೀಡೆಯಲ್ಲಿ ಹಳಿಯಾಳದ ಕೀರ್ತಿಯನ್ನು ತಂದ ಕುಸ್ತಿಪಟು ದಿ.ಅಗ್ನೇಲ ಅವರ ಪುತ್ಥಳಿ ನಿರ್ಮಾಣ ಮಾಡಿ ಕುಸ್ತಿ ಕ್ರೀಡಾಂಗಣದಲ್ಲಿ ಪ್ರತಿಷ್ಠಾಪಿಸಬೇಕೆಂದು ಸಭೆಯಲ್ಲಿ ಆಗ್ರಹಿಸಲಾಯಿತು.
ತಹಸೀಲ್ದಾರ ಪ್ರವೀಣ ಹುಚ್ಚಣ್ಣನವರ, ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ, ಪಿಎಸೈ ಕೃಷ್ಣ, ಸಮಾಜ ಕಲ್ಯಾಣಾಧಿಕಾರಿ ಅಶೋಕ ಪವಾರ, ಯಾಕೋಬ ನಾಯ್ಕ, ಜ್ಯೂಲಿಯಾನ್ ಇದ್ದರು.