ಬ್ರಿಟಿಷರ ಆಳ್ವಿಕೆ ಕಾಲದ 1926ರ ಹೊತ್ತಿನಲ್ಲಿ ಆನವಟ್ಟಿಯ ಆಂಜನೇಯ ದೇವಸ್ಥಾನದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭವಾಗಿ, ಈಗ ನೂರು ವರ್ಷ ಪೂರೈಸಿ ಶತಮಾನೋತ್ಸವ ಆಚರಣೆಯ ಹೊಸ್ತಿಲಲ್ಲಿದೆ.
ಕನ್ನಡಪ್ರಭ ವಾರ್ತೆ ಆನವಟ್ಟಿ
ಬ್ರಿಟಿಷರ ಆಳ್ವಿಕೆ ಕಾಲದ 1926ರ ಹೊತ್ತಿನಲ್ಲಿ ಆನವಟ್ಟಿಯ ಆಂಜನೇಯ ದೇವಸ್ಥಾನದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭವಾಗಿ, ಈಗ ನೂರು ವರ್ಷ ಪೂರೈಸಿ ಶತಮಾನೋತ್ಸವ ಆಚರಣೆಯ ಹೊಸ್ತಿಲಲ್ಲಿದೆ.ಸರ್ಕಾರದಿಂದ ಮಂಜೂರಾದ ಶಾಲಾ ಕಟ್ಟಡ ನಿರ್ಮಿಸಲು ಜಾಗವಿಲ್ಲದೆ ಇದ್ದಾಗ, 1948ರಲ್ಲಿ ಶಾಂತಾಚಾರ್ ಮಡ್ಡಿ ಅವರು ಶಾಲೆಯ ಕೊಠಡಿಗಳ ನಿರ್ಮಾಣ, ಆಟದ ಮೈದಾನಕ್ಕಾಗಿ 8 ಎಕರೆ 36 ಗುಂಟೆ ಹಾಗೂ ಶಾಲೆಗೆ ಆರ್ಥಿಕ ಸಂಪನ್ಮೂಲಕ್ಕಾಗಿ 8 ಎಕರೆ 9 ಗುಂಟೆ ಜಮೀನನ್ನು ಭೂದಾನ ನೀಡಿದರು. ಈ ಜಮೀನನ್ನು ರೈತರಿಗೆ ಉಳುಮೆ ಮಾಡಲು ನೀಡುತ್ತಿದ್ದು, ರೈತರು ನಿಗದಿಪಡಿಸಿದ ಹಣವನ್ನು ಶಾಲೆಗೆ ಜಮಾ ಮಾಡುತ್ತಿದ್ದಾರೆ.
ಭೂದಾನಿಗಳಿಂದಾಗಿ ಸಾವಿರಾರು ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಬದುಕಟ್ಟಿಕೊಳ್ಳುವುದಕ್ಕೆ ದಾರಿಯಾಯಿತು. ಈ ಶಾಲೆಯಲ್ಲಿ ಕಲಿತವರು ಕೆಎಎಸ್ ಅಧಿಕಾರಿ, ವೈದ್ಯರು, ಶಿಕ್ಷಕರು, ವಕೀಲರು ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ನೌಕರಿ ಮಾಡುತ್ತಿದ್ದಾರೆ. ಗ್ರಾಮದ ಮಕ್ಕಳ ಶಿಕ್ಷಣಕ್ಕಾಗಿ ಭೂದಾನ ನೀಡಿರುವವರ ಸ್ಮಣಾರ್ಥವಾಗಿ, ಶಾಂತಾಚಾರ್ ಮಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂದು ನಾಮಕರಣ ಮಾಡಲಾಯಿತು. 2018ರಲ್ಲಿ ಕೆಪಿಎಸ್ ಶಾಲೆಯಾಗಿ ಉನ್ನತೀಕರಣಗೊಂಡು 2020ರಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಆರಂಭವಾದವು. ಅದೇ ವರ್ಷ ಇಂಗ್ಲಿಷ್ ಮಾಧ್ಯಮ ಶುರುವಾಯಿತು.ಶೈಕ್ಷಣಿಕ ವರ್ಷದಲ್ಲಿ 7ನೇ ತರಗತಿವರೆಗೆ 480 ವಿದ್ಯಾರ್ಥಿಗಳು ಓದುತ್ತಿದ್ದಾರೆ. 18 ಕೊಠಡಿ, 21 ಖಾಯಂ ಶಿಕ್ಷಕರು, ಇಬ್ಬರು ಎಲ್‌ಕೆಜಿ, ಯುಕೆಜಿ ಶಿಕ್ಷಕಿಯರು, 5 ಅಡುಗೆ ಸಿಬ್ಬಂದಿ, ಇಬ್ಬರು ಸಹಾಯಕ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಅಗತ್ಯ ಮೂಲ ಸೌಕರ್ಯವಿದ್ದು, ಗುಣಮಟ್ಟದ ಶಿಕ್ಷಣದಿಂದ ಹೆಸರು ಮಾಡಿದೆ.
ದಾನಿಗಳ ಕೊಡುಗೆ: ಭೂದಾನಿ ಶಾಂತಾಚಾರ್ ಮಡ್ಡಿ ಅವರ ಸೊಸೆ ರತ್ನಮಾಲಾ ಮಡ್ಡಿ ಅವರು ಶಾಲೆಯ ಬೆನ್ನೆಲುಬಾಗಿ ನಿಂತು, ಕಂಪ್ಯೂಟರ್ ಕೊಠಡಿ, ಹೆಣ್ಣುಮಕ್ಕಳ ವಿದ್ಯಾಭ್ಯಾಸ ಪ್ರೋತ್ಸಾಹಿಸಲು ಪ್ರತಿ ವರ್ಷ ಒಂದನೇ ತರಗತಿಗೆ ಸೇರುವ ಎಲ್ಲಾ ಹೆಣ್ಣುಮಕ್ಕಳ ಹೆಸರಲ್ಲಿ ಒಂದು ಸಾವಿರ ರುಪಾಯಿಗಳ ಠೇವಣಿ ಬಾಂಡ್‌ಗಳನ್ನು ಮಾಡಿಸಿದ್ದಾರೆ.ಬೆಂಗಳೂರಿನ ಎಚ್‌ಸಿಎಲ್ ಕಂಪನಿ 12 ಕಂಪ್ಯೂಟರ್, ಯೂತ್ ಫಾರ್ ಸೇವಾ ಸಿರಸಿ ಘಟಕದಿಂದ 16 ಲಕ್ಷದ ಶೌಚಾಲಯ ಕಟ್ಟಡ ನಿರ್ಮಾಣ ಮತ್ತು ದಾನಿಗಳು ಶಾಲೆಗೆ ಅಗತ್ಯ ವಸ್ತುಗಳನ್ನು ಕೊಡುಗೆ ನೀಡಿದ್ದಾರೆ.
ಸಚಿವ ಮಧು ಬಂಗಾರಪ್ಪ ಕಾಳಜಿ: 21 ಶಿಕ್ಷಕರ ಅವಶ್ಯಕತೆ ಇದ್ದ, ಶಾಲೆಯಲ್ಲಿ 10 ಜನ ಶಿಕ್ಷಕರ ಕೊರತೆ ಇತ್ತು. ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಅವರು 10 ಜನ ಖಾಯಂ ಶಿಕ್ಷಕರನ್ನು ಒದಗಿಸಿಕೊಟ್ಟರು. ವಿವೇಕ ಯೋಜನೆ ಅಡಿಯಲ್ಲಿ 6 ಕೊಠಡಿಗಳನ್ನು ಮಂಜೂರು ಮಾಡಿಸಿ ವಿದ್ಯಾರ್ಥಿಗಳ ಪಾಠ-ಪ್ರಚವನಕ್ಕೆ ತೊಂದರೆಯಾಗದಂತೆ ಕಾಳಜಿ ವಹಿಸಿದ್ದಾರೆ.ಬೇಕಾಗಿರುವ ಸವಲತ್ತುಗಳು: ಗ್ರಂಥಾಲಯಕ್ಕೆ ಬೇಕಾದ ಪುಸ್ತಕಗಳು ಇವೆ. ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳು ಕುಳಿತು ಓದುವುದಕ್ಕಾಗಿ, ಹೈಟೆಕ್ ಗ್ರಂಥಾಲಯ, ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ರಂಗಮಂದಿರ, ಸರ್ಕಾರದ ಬಿಸಿಯೂಟ ಸವಿಯಲು ಭೋಜನಾಲಯ, ಆಟದ ಮೈದಾನ ಅವಶ್ಯವಿದ್ದು, ಮುಂದಿನ ದಿನಗಳಲ್ಲಿ ಸಚಿವರು ಇವುಗಳಿಗೆ ಅನುದಾನ ಒದಗಿಸಿಕೊಂಡಬೇಕು ಎಂದು ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಪೋಷಕರು ಮನವಿ ಮಾಡಿದ್ದಾರೆ.ಶಾಲೆಯ ಶತಮಾನೋತ್ಸವ ಸಮಾರಂಭಕ್ಕಾಗಿ ಹಳೇ ವಿದ್ಯಾರ್ಥಿಗಳ ಸಂಘ ರಚನೆಯಾಗಿದೆ. ಹಳೆ ವಿದ್ಯಾರ್ಥಿಗಳು ತಮ್ಮ ಹೆಸರು ಸಂಘ ನೋಂದಾಯಿಸಿ, ಶತಮಾನೋತ್ಸವ ಸಮಾರಂಭಕ್ಕೆ ಸಮಿತಿ ರಚನೆ ಮಾಡಿದ್ದು, ಹಳೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ದಾನ ನೀಡುವಂತವರು ಮುಖ್ಯ ಶಿಕ್ಷಕ ಬಸವರಾಜಪ್ಪ 9740783371, ಸಿಡಿಸಿ ಉಪಾಧ್ಯಕ್ಷ ನಾಗರಾಜ ಶುಂಠಿ 9686757119 ಇವರ ಮೊಬೈಲ್ ನಂಬರ್‌ಗೆ ಸಂಪರ್ಕಿಸಬಹುದು.
----ಶಾಲೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ಒಳ್ಳೆ ಹೆಸರು ಮಾಡಲು ಈ ಹಿಂದೆ ಸೇವೆ ಸಲ್ಲಿಸಿರುವ ಎಲ್ಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಜನಪ್ರತಿನಿಧಿಗಳು, ದಾನಿಗಳು ಕಾರಣ. ನೂರರ ಸಂಭ್ರಮದಲ್ಲಿ, ಎಲ್ಲರೂ ಭಾಗವಹಿಸುವ ಮೂಲಕ ಸಹಕಾರ ನೀಡಿ
ಮುಖ್ಯ ಶಿಕ್ಷಕ ಬಸವರಾಜ ಆರ್. ಮಾಸೂರು.-----
ಕೆಪಿಎಸ್‌ನ ಮೂರು ಹಂತದ ಶಾಲೆಗೆ ಒಟ್ಟು 26 ಕಟ್ಟಡಗಳನ್ನು ಸಚಿವ ಮಧು ಬಂಗಾರಪ್ಪ ಅವರು ಮಂಜೂರು ಮಾಡಿಸಿದ್ದು, ಕಾಮಗಾರಿ ಪ್ರಗತಿಯಲ್ಲಿವೆ. ಸಮಾರಂಭವನ್ನು ಸುಂದರವಾಗಿ, ಅರ್ಥಪೂರ್ಣವಾಗಿ ಮಾಡುವ ಆಶಾಭಾವನೆ ಸಚಿವರದ್ದು, ಅವರ ಉಪಸ್ಥಿತಿಯಲ್ಲಿ ಸಮಾರಂಭ ನಡೆಯಬೇಕು ಎಂಬುವುದು ನನ್ನ ಹಾಗೂ ಸಮಿತಿ ಸದಸ್ಯರ ಮತ್ತು ಪೋಷಕರ ಅಪೇಕ್ಷೆಯಾಗಿದೆ ಹಾಗಾಗಿ ಸಚಿವರು ನೀಡುವ ದಿನಾಂಕಕ್ಕಾಗಿ ನಾವು ಕಾಯುತ್ತಿದ್ದೇವೆ- ಕಾಲೇಜು ಅಭಿವೃಧಿ ಸಮಿತಿ ಉಪಾಧ್ಯಕ್ಷ ನಾಗರಾಜ ಶುಂಠಿ.