ಹೊಸಪೇಟೆಯಲ್ಲಿ ಭತ್ತ ನಾಟಿ ಮಾಡಿದ ಸರ್ಕಾರಿ ಶಾಲಾ ಮಕ್ಕಳು

| Published : Jul 19 2024, 12:45 AM IST

ಹೊಸಪೇಟೆಯಲ್ಲಿ ಭತ್ತ ನಾಟಿ ಮಾಡಿದ ಸರ್ಕಾರಿ ಶಾಲಾ ಮಕ್ಕಳು
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಡ್ಡಿರಾಂಪುರದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿಯ 45 ಬಾಲಕ, ಬಾಲಕಿಯರು ಭತ್ತದ ನಾಟಿ ಮಾಡಿದರು.

ಹೊಸಪೇಟೆ: ಆ ಶಾಲೆಯ ಏಳನೇ ತರಗತಿ ಮಕ್ಕಳು ಎಂದಿನಂತೆಯೇ ತರಗತಿಯಲ್ಲಿ ಕುಳಿತು ಪಾಠ ಆಲಿಸದೇ ಗದ್ದೆಗೆ ಹೋಗಿ ಭತ್ತದ ನಾಟಿ ಮಾಡಿದರು. ಬರೀ ಪಠ್ಯದಲ್ಲೇ ಮುಳುಗದೇ ಪ್ರಾಯೋಗಿಕವಾಗಿ ಕಲಿಸಬೇಕೆಂಬ ಶಿಕ್ಷಕರ ಆಶಯದಂತೆ ಸ್ವತಃ ಗದ್ದೆಗೆ ತೆರಳಿ ಭತ್ತ ನಾಟಿ ಮಾಡುವ ಮೂಲಕ ಸೈ ಎನಿಸಿಕೊಂಡರು.

ಹೌದು, ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಡ್ಡಿರಾಂಪುರದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿಯ 45 ಬಾಲಕ, ಬಾಲಕಿಯರು ಭತ್ತದ ನಾಟಿ ಮಾಡಿದರು. ಈ ಪೈಕಿ 25 ಬಾಲಕಿಯರು ಹಾಗೂ 20 ಬಾಲಕರು ಇದ್ದರು. ಕಡ್ಡಿರಾಂಪುರ ಬಳಿಯೇ ಇರುವ ಕಮಲಾಪುರ ಮೂಲದ ರೈತ ಕಿಶೋರ್‌ ಅವರ ಎರಡೂವರೆ ಎಕರೆಯಲ್ಲಿ ಅರ್ಧ ಎಕರೆಯಲ್ಲಿ ಶಾಲಾ ಮಕ್ಕಳೇ ಭತ್ತದ ನಾಟಿ ಮಾಡಿದರು.

ಲೇಖಕಿ ವಿ. ಗಾಯತ್ರಿ ಬರೆದ ತುಂಗಾ ಕಾದಂಬರಿಯಿಂದ "ಸೀನ ಸೆಟ್ಟರು ನಮ್ಮ ಟೀಚರು " ಎಂಬ ಪಾಠವನ್ನು ಏಳನೇ ತರಗತಿಗೆ ಅಳವಡಿಕೆ ಮಾಡಲಾಗಿದೆ. ಈ ಪಾಠದಂತೇ ಕಡ್ಡಿರಾಂಪುರ ಶಾಲೆಯ ಶಿಕ್ಷಕ ಯು. ಮಂಜುನಾಥ ಮಕ್ಕಳಿಗೆ ಬರೀ ಪಠ್ಯದಲ್ಲೇ ಉಳಿಸದೇ ಅವರಲ್ಲೂ ಕೌಶಲ್ಯ ಮೈಗೂಡಿಸಲು ರೈತರು ಹೇಗೆ ಭತ್ತ ನಾಟಿ ಮಾಡುತ್ತಾರೆ? ಭತ್ತವನ್ನು ಯಾವ ರೀತಿ ಬೆಳೆಸುತ್ತಾರೆ ಎಂಬುದನ್ನು ತೋರಿಸಲು ಮಕ್ಕಳನ್ನು ಗದ್ದೆಗೆ ಕರೆದುಕೊಂಡು ಹೋಗಿ, ಮಕ್ಕಳಿಂದಲೇ ಮಡಿಯಲ್ಲಿದ್ದ ಸಸಿ ಕಿತ್ತು, ಸಿವುಡು ಕಟ್ಟಿ, ಹದ ಮಾಡಿದ ಗದ್ದೆಯಲ್ಲಿ ನಾಟಿ ಮಾಡಿಸಿದ್ದಾರೆ.

ನಾಟಿ ಮಾಡಿದ ಬಗೆ ಹೇಗೆ?

ಶಾಲೆಯಲ್ಲಿ ಪ್ರಾರ್ಥನೆ ಮುಗಿದೊಡನೆ, ತರಗತಿಯಲ್ಲಿ ಬ್ಯಾಗ್‌ ಇಟ್ಟು, ಹೊಲದತ್ತ ಬಂದ ಮಕ್ಕಳು ಮೊದಲಿಗೆ ರೈತ ಕಿಶೋರ್‌ ಅವರನ್ನು ಪರಿಚಯ ಮಾಡಿಕೊಂಡರು. ಬಳಿಕ ಮಡಿಯಲ್ಲಿದ್ದ ಸಸಿ ಕಿತ್ತು, ಸಿವುಡು ಕಟ್ಟಿದರು. ಬಳಿಕ ಗದ್ದೆಗೆ ಇಳಿದು ನಾಟಿ ಮಾಡಿದರು. ಗದ್ದೆಯಲ್ಲಿ ನೀರು ಇದ್ದರೂ ಅಂಜದೇ ಮಕ್ಕಳು, ಥೇಟ್‌ ಕೃಷಿ ಕೂಲಿಕಾರ್ಮಿಕರಂತೇ ಭತ್ತ ನಾಟಿ ಮಾಡಿದರು. ಶಾಲಾ ಮಕ್ಕಳಂತೂ ಉತ್ಸಾಹದಿಂದ ಭತ್ತ ನಾಟಿ ಮಾಡಿದರು. ಗದ್ದೆಯಲ್ಲಿ ಓಡಾಡಿ ಖುಷಿ ಪಟ್ಟರು.

ರೈತ ಕಿಶೋರ್‌ ಅವರ ಹೊಲದಲ್ಲಿ ಅರ್ಧ ಎಕರೆಯಷ್ಟು ನಾಟಿ ಮಾಡಿದ ಮಕ್ಕಳು, ಈ ಭತ್ತ ಉತ್ತಮವಾಗಿ ಬೆಳೆಯಲಿ. ಫಸಲು ಚೆನ್ನಾಗಿ ಬಂದರೆ, ನಮಗೂ ಕೊಡಿ ಎಂದು ರೈತರಲ್ಲಿ ಕೋರಿದರು. ಆಗ ಶಿಕ್ಷಕರು ಸೇರಿದಂತೆ ರೈತ ಕಿಶೋರ್‌ ಕೂಡ ನಸು ನಕ್ಕರು. ಮಕ್ಕಳಿಗೆ ತಂಪು ಪಾನೀಯ ನೀಡಿ ಅವರು ಶಾಲೆಗೆ ಕಳುಹಿಸಿದರು.

ಶಾಲಾ ಮಕ್ಕಳಿಗೆ ಪಠ್ಯದ ಜೊತೆಗೆ ಕೌಶಲ್ಯ ಬೆಳೆಸಬೇಕಿದೆ. ಹೊರ ಪ್ರಪಂಚದ ಜ್ಞಾನವೂ ದೊರೆಯಬೇಕಿದೆ. ನಾವು ಯಾರಿಂದ ಏನಾದರೂ ಕಲಿತರೆ ಅವರೇ ಗುರುಗಳು ಆಗುತ್ತಾರೆ. ಹಾಗಾಗಿ ನಮಗೆ ಗೊತ್ತಿಲ್ಲದ ಜ್ಞಾನವನ್ನು ಪಡೆಯಲು ನಾವು ಬಯಸಬೇಕು. ಈ ಕಲಿಕಾ ಗುಣವನ್ನು ಮಕ್ಕಳಲ್ಲಿ ಮೈಗೂಡಿಸಲು ಭತ್ತದ ಗದ್ದೆಯಲ್ಲಿ ನಾಟಿ ಮಾಡಿಸಲಾಯಿತು ಎನ್ನುತ್ತಾರೆ ಕಡ್ಡಿರಾಂಪುರ ಸರ್ಕಾರಿ ಶಾಲಾ ಶಿಕ್ಷಕ ಯು.ಮಂಜುನಾಥ್‌.

ಭತ್ತ ನಾಟಿ ಮಾಡುವುದು ಹೇಗೆ? ಭತ್ತ ಹೇಗೆ ಬೆಳೆಯುತ್ತಾರೆ? ಎಂಬುದನ್ನು ಖುದ್ದು ನಾವು ಕೆಲಸ ಮಾಡಿ ಕಲಿತುಕೊಂಡೆವು. ಕಷ್ಟಪಟ್ಟು ನಮಗೆ ಅಕ್ಕಿ ಬೆಳೆದು ಕೊಡುವ ರೈತರು ನಿಜಕ್ಕೂ ಮಾದರಿ ಎನ್ನುತ್ತಾರೆ ಕಡ್ಡಿರಾಂಪುರ ಸರ್ಕಾರಿ ಶಾಲಾ ವಿದ್ಯಾರ್ಥಿನಿ ಮೌನಿಕಾ.