ಇವರು ವೃತ್ತಿಯಲ್ಲಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ. ಪ್ರವೃತ್ತಿಯಲ್ಲಿ ಸಾಹಿತಿ. ಅಷ್ಟೇ ಅಲ್ಲ, ಬರೋಬ್ಬರಿ 115ಕ್ಕೂ ಅಧಿಕ ಕನ್ನಡ ಕೃತಿಗಳನ್ನು ರಚಿಸಿ, ಅವುಗಳನ್ನು ಪ್ರಕಾಶನ ಮಾಡಿ ಸುತ್ತಮುತ್ತಲಿನ ಊರೂರಿಗೆ ಅಲೆದು, ಶಾಲೆ-ಕಾಲೇಜುಗಳಿಗೆ ತೆರಳಿ ತಮ್ಮ ಪುಸ್ತಕಗಳನ್ನು ಮಾರಿ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ವಿಶಿಷ್ಟ ಕೊಡುಗೆ ನೀಡಿದ್ದಾರೆ.

ಅಶೋಕ ಸೊರಟೂರ

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಇವರು ವೃತ್ತಿಯಲ್ಲಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ. ಪ್ರವೃತ್ತಿಯಲ್ಲಿ ಸಾಹಿತಿ. ಅಷ್ಟೇ ಅಲ್ಲ, ಬರೋಬ್ಬರಿ 115ಕ್ಕೂ ಅಧಿಕ ಕನ್ನಡ ಕೃತಿಗಳನ್ನು ರಚಿಸಿ, ಅವುಗಳನ್ನು ಪ್ರಕಾಶನ ಮಾಡಿ ಸುತ್ತಮುತ್ತಲಿನ ಊರೂರಿಗೆ ಅಲೆದು, ಶಾಲೆ-ಕಾಲೇಜುಗಳಿಗೆ ತೆರಳಿ ತಮ್ಮ ಪುಸ್ತಕಗಳನ್ನು ಮಾರಿ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ವಿಶಿಷ್ಟ ಕೊಡುಗೆ ನೀಡಿದ್ದಾರೆ.

ಡಾ। ಎಸ್.ವಿ.ತಮ್ಮನಗೌಡರ ಕನ್ನಡ ನುಡಿಸೇವೆಗೆ ತಮ್ಮನ್ನು ಅರ್ಪಿಸಿಕೊಂಡ ಕನ್ನಡ ಸಾಹಿತ್ಯ ಆರಾಧಕ. ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ಗುಜಮಾಗಡಿ ಗ್ರಾಮದಲ್ಲಿ ಜನಿಸಿದ ತಮ್ಮನಗೌಡರ ಅವರು ಪ್ರಸ್ತುತ ಲಕ್ಷ್ಮೇಶ್ವರ ಪಟ್ಟಣದಲ್ಲಿ ವಾಸವಾಗಿದ್ದು, ಗದಗ ತಾಲೂಕಿನ ಮುಳಗುಂದ ಪಟ್ಟಣದ ಸರ್ಕಾರಿ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ತಮ್ಮನಗೌಡರ ಅವರು ತಮ್ಮದೇ ಪ್ರಕಾಶನದಲ್ಲಿ ಹಂಸ ಎನ್ನುವ ಕೃತಿಯಿಂದ ಕನ್ನಡ ಸಾಹಿತ್ಯ ಸೇವೆ ಆರಂಭಿಸಿದರು. ಇದೀಗ 115ನೇ ಪ್ರಕಟಣೆ ‘ನಾನು ಮತ್ತು ನಮ್ಮ ಬಗಲ ಕಸಿ ಚೀಲ’ ಕೃತಿ ರಚಿಸಿ ಕನ್ನಡ ಸೇವೆ ಮಾಡುತ್ತಿರುವುದು ಗಮನಾರ್ಹವಾಗಿದೆ. ತಮ್ಮನಗೌಡರ ಅವರು ಡಾ। ದ.ರಾ.ಬೇಂದ್ರೆಯವರ ಬಗ್ಗೆ ವಿಶೇಷ ಅಧ್ಯಯನ ಮಾಡಿ ಬೇಂದ್ರೆಯವರ ಕುರಿತು ಅನೇಕ ಲೇಖನ ಮತ್ತು ಉಪನ್ಯಾಸ ನೀಡಿ ಗಮನ ಸೆಳೆದಿದ್ದಾರೆ.

ಆಧುನಿಕ ಗಳಗನಾಥರು:

ತಾವು ರಚಿಸಿದ ಕೃತಿಗಳನ್ನು ವಿವಿಧ ಸಾಹಿತ್ಯ ಸಮ್ಮೇಳನಗಳಲ್ಲಿ ಮಾರಾಟ ಮಾಡಿದ್ದಾರೆ. ಅಲ್ಲದೆ ತಮ್ಮ ಕೃತಿಗಳನ್ನು ಹಲವು ಬಾರಿ ಮನೆ ಮನೆಗೆ ಹೊತ್ತು ಮಾರಾಟ ಮಾಡಿದ್ದಾರೆ. ಆ ಮೂಲಕ ಆಧುನಿಕ ಕನ್ನಡ ಸಾಹಿತ್ಯದ ಗಳಗನಾಥರು ಎಂದು ಅವರನ್ನು ಗುರುತಿಸುವಂತಾಗಿದೆ. ಡಾ। ಎಸ್.ವಿ.ತಮ್ಮನಗೌಡರ ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕವನ ವಾಚನ, ಸಂವಾದ, ಪ್ರಬಂಧ ಮಂಡನೆ ಮಾಡಿರುವುದು ಇವರ ಹೆಗ್ಗಳಿಕೆಯಾಗಿದೆ.

ಇವರ ಪ್ರಮುಖ ಕೃತಿಗಳು:

ಡಾ। ಎಸ್.ವಿ.ತಮ್ಮನಗೌಡರ ಅವರು ರಚಿಸಿದ ಪ್ರಮುಖ ಕೃತಿಗಳ ಪೈಕಿ ಸ್ಫೂರ್ತಿ (ಕವನ ಸಂಕಲನ), ಮತ್ತೆ ಹುಟ್ಟಿತು ಕವನ (ಕವನ ಸಂಕಲನ), ಪಶ್ಚಾತಾಪ (ನಾಟಕ), ನಾನೇಕೆ ಗುಲಾಮನಾದೆ (ನಾಟಕ), ಪ್ರೇಮ ಪಂಜರಿ (ಕಾದಂಬರಿ), ಮತ್ತೆ ಬಂದಾವು ಆ ದಿನಮಾನ (ಕಥಾ ಸಂಕಲನ), ಕನ್ನಡ ವ್ಯಾಕರಣ ದೀಪ್ತಿ (ವ್ಯಾಕರಣ ಕೃತಿ) ಸರ್ ಎಂ.ವಿಶ್ವೇಶ್ವರಯ್ಯ (ವ್ಯಕ್ತಿ ಚಿತ್ರಣ), ಏಕಾಂಕ ನಾಟಕಗಳು (ಪಿಎಚ್‌ಡಿ ಕೃತಿ), ಪಿಯುಸಿ ಮಾರ್ಗದರ್ಶಿ(ವಿದ್ಯಾರ್ಥಿಗಳಿಗೆ ಕೈಪಿಡಿ) ಸೇರಿದಂತೆ 115 ಕೃತಿಗಳು ಇವರ ಬರವಣಿಗೆಯ ಬತ್ತಳಿಕೆಯಿಂದ ಹೊರಬಂದಿವೆ.

ಅಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಪುಸ್ತಕ ಮಳಿಗೆ ತರೆದು ಮಾರಾಟ ಮಾಡಿದ್ದಾರೆ. ಕಳೆದ 25ಕ್ಕೂ ಹೆಚ್ಚು ವರ್ಷಗಳಿಂದ ಪುಸ್ತಕ ಮಾರಾಟ ಮಾಡುತ್ತಿದ್ದಾರೆ. ಸಮ್ಮೇಳನಗಳಲ್ಲಿ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಮಾರಾಟ ಮಾಡಿ ಬಂದ ಹಣದಿಂದ ಇನ್ನೊಂದು ಪುಸ್ತಕ ಪ್ರಕಟಿಸುವುದು ಇವರ ಉದ್ದೇಶವಾಗಿದೆ.

ಪ್ರಶಸ್ತಿಗಳು:

ಗೋರೂರು ಸಾಹಿತ್ಯ ಪ್ರಶಸ್ತಿ (1999), ಚನ್ನಬಸಪ್ಪ ಕಲಕೋಟಿ ದತ್ತಿ ಬಹುಮಾನ, ಶಿಕ್ಷಣ ಇಲಾಖೆಯ ಬರಹಗಾರರ ವಿಭಾಗ ಮಟ್ಟದ ಪ್ರಶಸ್ತಿ, ರಾಜ್ಯ ಮಟ್ಟದ ಆಮೂರ ಪುಸ್ತಕ ಪ್ರತಿಷ್ಠಾನ ಪ್ರಶಸ್ತಿ (2010), ಜನಮೆಚ್ಚಿದ ಶಿಕ್ಷಕ ಪುರಸ್ಕಾರ ಸೇರಿದಂತೆ ವಿವಿಧ ಪುರಸ್ಕಾರಗಳು ಇವರ ಸರಸ್ವತಿ ಸೇವೆ ಅರಸಿ ಬಂದಿವೆ.

----ಸಾಹಿತ್ಯ ಸೇವೆ ಗುರಿನಾನು ಬರೆದ ಕೃತಿಗಳನ್ನು ಮಾರಿ ಆ ಮೂಲಕ ಕನ್ನಡ ಸಾಹಿತ್ಯ ಸೇವೆ ಮಾಡುವುದು ನನ್ನ ಗುರಿ ಹಾಗೂ ಹವ್ಯಾಸವಾಗಿದೆ. ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಪ್ರೀತಿ ನನ್ನ ನರನಾಡಿಗಳಲ್ಲಿ ಸೇರಿಕೊಂಡಿದೆ. ಅದನ್ನು ಇತರರಿಗೆ ಹಂಚುವ ಮೂಲಕ ಕನ್ನಡ ಬೆಳೆಸುವುದು ನನ್ನ ಗುರಿ.

-ಡಾ। ಎಸ್.ವಿ.ತಮ್ಮನಗೌಡರ, ಸಾಹಿತಿ, ಶಿಕ್ಷಕ.