ವಡೇರಪುರ ಗ್ರಾಮದ ಸರ್ಕಾರಿ ಶಾಲೆ ರಾಜ್ಯಕ್ಕೆ ಮಾದರಿ: ಸಚಿವ ಸಿಆರ್‌ಎಸ್

| Published : Apr 11 2025, 12:34 AM IST

ವಡೇರಪುರ ಗ್ರಾಮದ ಸರ್ಕಾರಿ ಶಾಲೆ ರಾಜ್ಯಕ್ಕೆ ಮಾದರಿ: ಸಚಿವ ಸಿಆರ್‌ಎಸ್
Share this Article
  • FB
  • TW
  • Linkdin
  • Email

ಸಾರಾಂಶ

ಕೇವಲ 35 ಮನೆಗಳಿರುವ ಗ್ರಾಮದ ಸರ್ಕಾರಿ ಶಾಲೆಯಲ್ಲಿ 15 ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ ಇಂದು 90 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆಂದರೆ ಶಾಲೆ ಮುಖ್ಯ ಶಿಕ್ಷಕ ಮುರಳೀಧರ ಅವರ ಶಿಕ್ಷಣ ಪ್ರೇಮ ಮತ್ತು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕೆಂಬ ಕಾಳಜಿಯನ್ನು ಮೆಚ್ಚಲೇಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಸರ್ಕಾರಿ ಶಾಲೆ ಶಿಕ್ಷಕರ ವೈಯುಕ್ತಿಕ ಹಿತಾಸಕ್ತಿ ಮತ್ತು ಕಾಳಜಿಯಿಂದ ಸರ್ಕಾರದ ಯಾವುದೇ ಅನುದಾನ ಪಡೆಯದೆ ಖಾಸಗಿ ಶಾಲೆಗಳನ್ನೂ ಮೀರಿಸುವಂತೆ ಸುಸಜ್ಜಿತ ಕಟ್ಟಡ ನಿರ್ಮಿಸಿ ಮಕ್ಕಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿರುವುದು ರಾಜ್ಯಕ್ಕೆ ಮಾದರಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಶ್ಲಾಘಿಸಿದರು.

ತಾಲೂಕಿನ ವಡೇರಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಕೇವಲ 35 ಮನೆಗಳಿರುವ ಗ್ರಾಮದ ಸರ್ಕಾರಿ ಶಾಲೆಯಲ್ಲಿ 15 ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ ಇಂದು 90 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆಂದರೆ ಶಾಲೆ ಮುಖ್ಯ ಶಿಕ್ಷಕ ಮುರಳೀಧರ ಅವರ ಶಿಕ್ಷಣ ಪ್ರೇಮ ಮತ್ತು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕೆಂಬ ಕಾಳಜಿಯನ್ನು ಮೆಚ್ಚಲೇಬೇಕು ಎಂದರು.

ನಾಗಮಂಗಲ ಪಟ್ಟಣ ಸೇರಿದಂತೆ ಸುತ್ತಮುತ್ತಲ 12 ಹಳ್ಳಿಗಳಿಂದ ಮಕ್ಕಳು ಈ ಶಾಲೆಗೆ ಬಂದು ಎಲ್‌ಕೆಜಿಯಿಂದ ಪ್ರಾಥಮಿಕ ಹಂತದ ವಿದ್ಯೆ ಕಲಿಯುತ್ತಿದ್ದಾರೆಂದರೆ ಇಲ್ಲಿನ ಶಿಕ್ಷಕರ ಮುತುವರ್ಜಿ, ಆಸಕ್ತಿ, ಶ್ರದ್ಧೆ ಮತ್ತು ಅವರು ಮಾಡುವ ಪಾಠ ಪ್ರವಚನಗಳು ಪೋಷಕರನ್ನು ಸೆಳೆಯುತ್ತಿವೆ ಎಂದರು.

ಸರ್ಕಾರದಿಂದ ಯಾವುದೇ ಅನುದಾನ ಪಡೆಯದೆ ಸ್ವಂತ ಹಣದ ಜೊತೆಗೆ ಸ್ನೇಹಿತರು ಮತ್ತು ದಾನಿಗಳಿಂದ ಹಣ ಸಂಗ್ರಹಿಸಿ ಅತ್ಯಾಧುನಿಕ ಶೈಲಿಯಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿ ಮಕ್ಕಳ ಕಲಿಕೆಗೆ ಪೂರಕವಾದ ಸೌಕರ್ಯ ಒದಗಿಸಿಕೊಟ್ಟಿದ್ದಾರೆ. ಇಂತಹ ಶಿಕ್ಷಕರಿಗೆ ವಿಶೇಷವಾಗಿ ಅಭಿನಂದಿಸುತ್ತೇನೆ ಎಂದರು.

ಶಾಲೆಗೆ ಹೆಚ್ಚುವರಿಯಾಗಿ ಎರಡು ಕೊಠಡಿ ಮತ್ತು ಕಾಂಪೌಂಡ್ ನಿರ್ಮಾಣಕ್ಕೆ ಶಿಕ್ಷಕರು ಬೇಡಿಕೆ ಇಟ್ಟಿದ್ದಾರೆ. ಶೀಘ್ರದಲ್ಲಿಯೇ ಅಗತ್ಯ ಅನುದಾನ ಬಿಡುಗಡೆ ಮಾಡಿಸಲಾಗುವುದು. ಎಲ್ಲಾ ಸರ್ಕಾರಿ ಶಾಲೆಗಳ ಶಿಕ್ಷಕರು ಇದೇ ರೀತಿ ಮಾದರಿಯಾಗಬೇಕು ಎಂದರು.

ಈ ವೇಳೆ ಕ್ಷೇತ್ರ ಸಮನ್ವಯಾಧಿಕಾರಿ ಕೆ.ರವೀಶ್, ಶಿಕ್ಷಣ ಸಂಯೋಜಕ ಎಂ.ಡಿ.ಶಿವಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಗಿರೀಶ್, ಶಾಲೆ ಮುಖ್ಯಶಿಕ್ಷಕ ಮುರಳೀಧರ, ಇತರೆ ಶಾಲೆಗಳ ಮುಖ್ಯ ಶಿಕ್ಷಕರಾದ ಎನ್.ಕೆ.ಪ್ರಸಾದ್, ಎನ್.ಸಿ.ಶಿವಕುಮಾರ್, ಮಲ್ಲಿಕಾರ್ಜುನ ಅರಳಿಕಟ್ಟೆ, ಎಚ್.ಡಿ.ಗಿರೀಶ್, ಫಿರೋಜ್‌ಪಾಷ, ಕ್ಲಸ್ಟರ್ ಸಂಪನ್ಮೂಲವ್ಯಕ್ತಿ ಕೋಮಲ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜಯರಾಮು, ದಾನಿಗಳಾದ ವಡ್ಡರಹಳ್ಳಿ ರಾಜಣ್ಣ, ಬೆಂಗಳೂರಿನ ಯಾನ್ವಸೆ ಕಂಪನಿ ಮುಖ್ಯಸ್ಥೆ ಸುವರ್ಣ ಕಿರಣ್, ನಿವೃತ್ತ ಸೈನಿಕ ವಿಜಯಜಕಾತಿ, ನಿವೃತ್ತ ಶಿಕ್ಷಕಿ ಸುಬ್ಬರಾಜು, ಗಿರಿಜ ಸೇರಿದಂತೆ ಗ್ರಾಮದ ಮುಖಂಡರು ಮತ್ತು ಪೋಷಕರು ಇದ್ದರು.