ಕಲರವ ಶಿಕ್ಷಕರ ಸೇವಾ ಬಳಗದಿಂದ ನಳನಳಿಸುತ್ತಿರುವ ಸರ್ಕಾರಿ ಶಾಲೆ

| Published : Jan 24 2024, 02:01 AM IST

ಸಾರಾಂಶ

2021ರ ಆಗಸ್ಟ್‌ನಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಮಕ್ಕಳಿಗೆ ಏನಾದರೊಂದು ಸೇವೆ ಮಾಡೋಣ ಎಂಬ ಸದುದ್ದೇಶದಿಂದ ಸಮಾನ ಮನಸ್ಕರು ಸೇರಿಕೊಂಡು ಕಲರವ ಶಿಕ್ಷಕರ ಸೇವಾ ಬಳಗ ಕೊಪ್ಪಳ ಎನ್ನುವ ತಂಡ ಕಟ್ಟಿದರು. ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ "ಶಾಲೆ ನಿಮ್ಮದು, ಸೇವೆ ನಮ್ಮದು " ಎನ್ನುವ ಘೋಷವಾಕ್ಯದಡಿ ಸರ್ಕಾರಿ ಶಾಲೆಗಳಿಗೆ ಸ್ವಂತ ಹಣದಲ್ಲಿ ಹಾಗೂ ಶ್ರಮದಾನದ ಮೂಲಕ ಸುಣ್ಣ ಬಣ್ಣ ಹಚ್ಚಿ ಶೃಂಗಾರಗೊಳಿಸುವ ಕಾರ್ಯ ಆರಂಭಿಸಿದರು.

ಕೊಪ್ಪಳ: ಕಲರವ ಶಿಕ್ಷಕರ ಸೇವಾ ಬಳಗದಿಂದ ತಾಲೂಕಿನ ಹಲವಾರು ಶಾಲೆಗಳು ಶೃಂಗಾರಗೊಂಡಿವೆ.ಸೇವಾ ಬಳಗದ ಶಿಕ್ಷಕರು ತಿಂಗಳಿನ ಕೊನೆ ಭಾನುವಾರ ಸರ್ಕಾರಿ ಶಾಲೆಗೆ ಸ್ವಂತ ಹಣದಲ್ಲಿ ಸ್ವತಃ ತಾವೇ ಸುಣ್ಣ-ಬಣ್ಣ ಹಚ್ಚಿ ಸೇವೆಗೈದಿದ್ದಾರೆ.2021ರ ಆಗಸ್ಟ್‌ನಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಮಕ್ಕಳಿಗೆ ಏನಾದರೊಂದು ಸೇವೆ ಮಾಡೋಣ ಎಂಬ ಸದುದ್ದೇಶದಿಂದ ಸಮಾನ ಮನಸ್ಕರು ಸೇರಿಕೊಂಡು ಕಲರವ ಶಿಕ್ಷಕರ ಸೇವಾ ಬಳಗ ಕೊಪ್ಪಳ ಎನ್ನುವ ತಂಡ ಕಟ್ಟಿದರು. ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ "ಶಾಲೆ ನಿಮ್ಮದು, ಸೇವೆ ನಮ್ಮದು " ಎನ್ನುವ ಘೋಷವಾಕ್ಯದಡಿ ಸರ್ಕಾರಿ ಶಾಲೆಗಳಿಗೆ ಸ್ವಂತ ಹಣದಲ್ಲಿ ಹಾಗೂ ಶ್ರಮದಾನದ ಮೂಲಕ ಸುಣ್ಣ ಬಣ್ಣ ಹಚ್ಚಿ ಶೃಂಗಾರಗೊಳಿಸುವ ಕಾರ್ಯ ಆರಂಭಿಸಿದರು.ಪ್ರತಿ ತಿಂಗಳ ಕೊನೆಯ ಭಾನುವಾರ ಸುಣ್ಣ-ಬಣ್ಣ ಅವಶ್ಯಕತೆ ಇರುವ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಅಂದು ಬೆಳಿಗ್ಗೆ 6:30ರಿಂದ ಸಂಜೆ ಸಂಪೂರ್ಣ ಕಾರ್ಯ ಮುಗಿಯುವರೆಗೂ ಬಿಡುವಿಲ್ಲದ ಶ್ರಮವಹಿಸಿ ಸೇವೆ ಮಾಡಿದ್ದಾರೆ.ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸರಸ್ವತಿ ನಗರ ಇರಕಲ್ ಗಡ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಿದ್ದೇಶ್ವರ ನಗರ ಅಳವಂಡಿ, ಕುವೆಂಪು ನಗರ ಕೊಪ್ಪಳ, ಹಿಟ್ನಾಳ್ ಕ್ರಾಸ್ ಶಾಲೆ, ಗೋಸಲದೊಡ್ಡಿ ಶಾಲೆ, ರಘುನಾತನಹಳ್ಳಿ ಶಾಲೆ, ಹೊಸಳ್ಳಿ ಬಿ ಶಾಲೆ, ಕವಳಿ ಶಾಲೆ, ಚಿಲಕಮುಖಿ ಶಾಲೆ, ಮಂಗಳಾಪುರ ಶಾಲೆ, ಕೂಟಗನಹಳ್ಳಿ ಶಾಲೆ, ಯತ್ನಟ್ಟಿ ಶಾಲೆ, ಚಾಮಲಾಪುರ ಶಾಲೆ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ನೀರಲಗಿ ಶಾಲೆ, ಉರ್ದು ಕೋಟಗಾರಗೇರಾ ಶಾಲೆ ಹೊಸಳ್ಳಿ ಎಲ್ ಶಾಲೆ, ಕಲ್ ತಾವರಗೇರಾ ಶಾಲೆ, ಬೋಚನಹಳ್ಳಿ ಶಾಲೆಗಳ ಶೃಂಗಾರ ಕಾರ್ಯ ಮಾಡಿದ್ದಾರೆ.ಕಲರವ ಶಿಕ್ಷಕರ ಸೇವಾ ಬಳಗದಲ್ಲಿ ಬೀರಪ್ಪ ಅಂಡಗಿ, ಕಾಶಿನಾಥ ಸಿರಿಗೇರಿ, ಹನುಮಂತಪ್ಪ ಕುರಿ, ಅಣ್ಣಪ್ಪ ಹಳ್ಳಿ, ಮಲ್ಲಪ್ಪ ಗುಡದನ್ನವರ, ಶರಣಪ್ಪ ರಡ್ಡೇರ, ಸುರೇಶ ಕಂಬಳಿ, ಗುರುಸ್ವಾಮಿ ಆರ್., ಚಂದ್ರು ಹೇಳವರ, ಹುಲುಗಪ್ಪ ಭಜಂತ್ರಿ, ಮರ್ದಾನಪ್ಪ, ವೀರೇಶ ಕೌಟಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಕಲಾ ಶಿಕ್ಷಕರು ಸಹ ಕೈ ಜೋಡಿಸಿದ್ದು, ಶಾಲೆಗಳಲ್ಲಿ ಚಿತ್ತಾರದ ಕಲೆಗಳು ಸಹ ಮೂಡುತ್ತಿವೆ.ಕಲಾ ಬಳಗದ ಶಿಕ್ಷಕರು ಗವಿಸಿದ್ದೇಶ್ವರ ಜಾತ್ರೆಯ ಈ ವರ್ಷದ ಧ್ಯೇಯ ಕಾಯಕ ದೇವೋ ಭವಕ್ಕೆ ತಮ್ಮ ಈ ಕಾರ್ಯವನ್ನು ಅರ್ಪಣೆ ಮಾಡಿ ಸಾರ್ಥಕತೆ ಮೆರೆದಿದ್ದಾರೆ.ಸರ್ಕಾರಿ ಶಾಲೆಗಳ ಅಭಿವೃದ್ಧಿ ದೃಷ್ಟಿ ಹಾಗೂ ಶಾಲೆಗಳಿಗೆ ಮಕ್ಕಳನ್ನು ಸೆಳೆಯುವ ನಿಟ್ಟಿನಲ್ಲಿ ಕಲರವ ಶಿಕ್ಷಕರ ಸೇವಾ ಬಳಗ ಸ್ಥಾಪಿಸಿಕೊಂಡು ಶಾಲೆಗಳಿಗೆ ಸುಣ್ಣ ಹಾಗು ಬಣ್ಣ ನೀಡುವ ಕೆಲಸ ಆರಂಭಿಸಿದೆವು. ಸದ್ಯ ಈಗ ಕಲಾ ಶಿಕ್ಷಕರು ನಮ್ಮ ಜೊತೆ ಕೈ ಜೋಡಿಸಿದ್ದಾರೆ. ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯ ಘೋಷ ವಾಕ್ಯ ಕಾಯಕದೇವೋ ಭವ ಆಗಿದ್ದು, ನಮ್ಮ ಕಾರ್ಯವನ್ನು ಸಹ ಕಾಯಕದೇವೋ ಭವ ಎಂಬ ನಿಟ್ಟಿನಲ್ಲಿ ನಿರ್ವಹಿಸುತ್ತಿದ್ದೇವೆ. ಈ ವರ್ಷದ ಜಾತ್ರೆಯ ಘೋಷ ವಾಕ್ಯ ನಮಗೆ ಪ್ರೇರಣೆದಾಯಕವಾಗಿದೆ ಎನ್ನುತ್ತಾರೆ ಕಲರವ ಶಿಕ್ಷಕ ಬಳಗದ ಶಿಕ್ಷಕರು.