ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಅನೇಕ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು ಸಹ ಪೋಷಕರನ್ನು ಖಾಸಗಿ ಶಾಲೆಗಳ ಬಾಹ್ಯನೋಟ ಸೆಳೆಯುತ್ತಿದೆ. ಇದು ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಸವಾಲಾಗಿದೆ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಶಂಕರ್ ಅಭಿಪ್ರಾಯಪಟ್ಟರು.ತಾಲೂಕಿನ ಚೆಲ್ಲಾಪುರ ಸರ್ಕಾರಿ ಪ್ರೌಢಶಾಲೆಯ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಅರ್ಹ ಶಿಕ್ಷಕರ ನೇಮಕವಾಗಿದ್ದು, ಸಂಪನ್ಮೂಲ ವ್ಯಕ್ತಿಗಳು ಆಗಿದ್ದಾರೆ, ಈ ಶಾಲೆಯು ಶೇ. 100 ಫಲಿತಾಂಶವನ್ನು ನೀಡುತ್ತಾ ಬಂದಿದೆ. ಒಳ್ಳೆಯ ಬೋಧಕವರ್ಗ ಇದ್ದು, ಸಮುದಾಯದತ್ತ ಶಾಲೆಯನ್ನು ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಸಹಕಾರ ನೀಡುತ್ತಿದ್ದು, ಇನ್ನೂ ಹೆಚ್ಚಿನ ಮಕ್ಕಳನ್ನು ಇಲ್ಲಿ ಶಾಲೆಗೆ ದಾಖಲಿಸಬೇಕೆಂದರು. ಶಾಲಾ ವಾರ್ಷಿಕೋತ್ಸವ ಎಂದರೆ ವರ್ಷವಿಡೀ ಶೈಕ್ಷಣಿಕ ಚಟುವಟಿಕೆಯಲ್ಲಿ ಮಕ್ಕಳು ತೊಡಗಿರುತ್ತಾರೆ, ಅವರಿಗೂ ಒಂದು ಸಂತೋಷದ ಕ್ಷಣವನ್ನು ರೂಪಿಸಿಕೊಡಬೇಕಾಗುತ್ತದೆ. ಶಾಲಾ ವಾರ್ಷಿಕೋತ್ಸವ ಮಕ್ಕಳಲ್ಲಿನ ಕೆಲ ಪ್ರತಿಭೆಗಳನ್ನು ವೇದಿಕೆ ಮೇಲೆ ಹೊರತರಲು ಸಹಕಾರಿಯಾಗುತ್ತದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಯತೀಶ್ ಮಾತನಾಡಿ, ನಾನು ಈ ಶಾಲೆಯ ಹಳೆ ವಿದ್ಯಾರ್ಥಿ. ಶಾಲಾ ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾಮ ಪಂಚಾಯಿತಿಯಿಂದ ಸಾಧ್ಯವಾದಷ್ಟು ಕೆಲಸವನ್ನು ಮಾಡಿಕೊಟ್ಟಿದ್ದೇವೆ, ಈರ್ವರು ಸದಸ್ಯರಲ್ಲಿ ಹೊಂದಾಣಿಕೆ ಇದ್ದು ಅವರ ಅನುದಾನವನ್ನು ಸಹ ಪಡೆದು ಈ ಶಾಲೆಗೆ ಸುಣ್ಣ ಬಣ್ಣ ಮಾಡಿದದೆವು. ಧರ್ಮಸ್ಥಳ ಸಂಸ್ಥೆ ಅವರಿಂದ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಶಾಲಾ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ನಮ್ಮ ಸಹಕಾರ ಇರುತ್ತದೆ ಎಂದರು.ಶಾಲಾ ಮುಖ್ಯ ಶಿಕ್ಷಕ ನಾಗಪ್ಪ ಮಾತನಾಡಿ, ಶಾಲೆ ಪ್ರಾರಂಭವಾಗಿ 17 ವರ್ಷಗಳಾಗಿದೆ, ಪ್ರಗತಿಪಥದಲ್ಲಿಯೇ ಸಾಗುತ್ತಾ ಬಂದಿದೆ, ಪೋಷಕರು ಮಕ್ಕಳನ್ನು ಕೇವಲ ಅಂಕ ಗಳಿಂದ ಅಳೆಯಬೇಡಿ, ಅವರಲ್ಲಿ ಸೃಜನಾತ್ಮಕ ಜ್ಞಾನ ಇರುತ್ತದೆ. ಇಂದಿನ ಜನಪ್ರತಿನಿಧಿಗಳು ಗ್ರಾಮಸ್ಥರು ಹೆಚ್ಚಿನ ಸಹಕಾರವನ್ನು ಶಾಲೆಗೆ ನೀಡುತ್ತಿದ್ದಾರೆ. ಶಾಲಾ ವಾರ್ಷಿಕೋತ್ಸವಕ್ಕೆ ಹಳೆ ವಿದ್ಯಾರ್ಥಿಗಳ ಸಹಕಾರ ಹೆಚ್ಚಿನದಾಗಿದೆ. ನಮ್ಮಲ್ಲಿ ಬೋಧಕ ವರ್ಗ ವಿಶೇಷ ಕಾಳಜಿಯನ್ನು ವಿದ್ಯಾರ್ಥಿಗಳ ಬಗ್ಗೆ ವಹಿಸುತ್ತಿದ್ದು ಉತ್ತಮ ಫಲಿತಾಂಶಕ್ಕೆ ಕಾರಣವಾಗಿದೆ ಎಂದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕಲ್ಯಾಣ್ ಕುಮಾರ್ ಮಾತನಾಡಿ, ಈ ಶಾಲೆ ಶೇ.100ರಷ್ಟು ಫಲಿತಾಂಶವನ್ನು ಕೊಡುತ್ತಾ ಬಂದಿದೆ. ಇಲ್ಲಿ ಉತ್ತಮ ಬೋಧಕ ವರ್ಗವಿದೆ, ಖಾಸಗಿ ಶಾಲೆಗಳ ವೈಭವೀಕರಣಕ್ಕೆ ಪೋಷಕರು ಮಾರುಹೋಗುತ್ತಿದ್ದಾರೆ. ಇಂದು ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳು ಪ್ರತಿಭಾವಂತ ವಿದ್ಯಾರ್ಥಿಗಳನ್ನು ನೀಡುತ್ತಿವೆ, ಸರಕಾರಿ ಶಾಲೆಗಳಲ್ಲಿ ಓದಿ ದೊಡ್ಡ ಅಧಿಕಾರವನ್ನು ಹೊಂದಿದ್ದಾರೆ. ಓದುವ ಮಕ್ಕಳು ಎಲ್ಲಿಯೇ ಇದ್ದರೂ ಓದುತ್ತಾರೆ, ಮಕ್ಕಳು ಓದುವಂತೆ ಮನೆಯಲ್ಲಿ ಅವಕಾಶ ಕಲ್ಪಿಸಿಕೊಟ್ಟು ಪ್ರೋತ್ಸಾಹಿಸಬೇಕು ಎಂದರು. ತಳಲೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಯಮುನ ಹರೀಶ್ ಮಾತನಾಡಿ, ವಿದ್ಯಾರ್ಥಿಗಳು ದೊರೆತಿರುವ ಸೌಲಭ್ಯವನ್ನು ಬಳಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಶುಭಕೋರಿದರು.ಕಾರ್ಯಕ್ರಮದಲ್ಲಿ ವಾಸವಿ ಸ್ನೇಹಕ್ಕೂಟದ ಮಹೇಶ್, ಸಿಆರ್‌ಪಿಗಳಾದ ಕೊಟ್ರೇಶ್, ನಂಜೇಗೌಡ, ಸಾವಿತ್ರಮ್ಮ ಹಾಗೂ ದಾನಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮನ ಗೆದ್ದಿತು.
==========ಫೊಟೋ:
ಅರಸೀಕೆರೆ ತಾಲೂಕಿನ ಚೆಲ್ಲಾಪುರ ಸರ್ಕಾರಿ ಪ್ರೌಢಶಾಲೆಯ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು.