ಸರ್ಕಾರಿ ಮಾದರಿ ಉನ್ನತ ಕೇಂದ್ರ ಪ್ರಾಥಮಿಕ ಶಾಲೆಯ ಕೊಠಡಿಗಳನ್ನು ಅತಿಕ್ರಮಿಸಿಕೊಂಡಿರುವ ಖಾಸಗಿ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಕೊಠಡಿಗಳನ್ನು ಸರ್ಕಾರಿ ಶಾಲೆಗೆ ಹಸ್ತಾಂತರಿಸಲು ಆಗ್ರಹಿಸಿ ಸೋಮವಾರ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ನವಲಗುಂದ: ತಾಲೂಕಿನ ಅಳಗವಾಡಿ ಗ್ರಾಮದ ಸರ್ಕಾರಿ ಮಾದರಿ ಉನ್ನತ ಕೇಂದ್ರ ಪ್ರಾಥಮಿಕ ಶಾಲೆಯ ಕೊಠಡಿಗಳನ್ನು ಅತಿಕ್ರಮಿಸಿಕೊಂಡಿರುವ ಖಾಸಗಿ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಕೊಠಡಿಗಳನ್ನು ಸರ್ಕಾರಿ ಶಾಲೆಗೆ ಹಸ್ತಾಂತರಿಸಲು ಆಗ್ರಹಿಸಿ ಸೋಮವಾರ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಹಾಗೂ ಜಿಪಂ ಸಿಇಒಗೆ ಸಾಮಾಜಿಕ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ ನೇತೃತ್ವದಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಎಸ್.ಎಸ್. ಕಂಬಳಿ ಮಾತನಾಡಿ, ಗ್ರಾಮದ ಏಕೈಕ ಸರ್ಕಾರಿ ಶಾಲೆಯ 5 ಕೊಠಡಿಗಳನ್ನು ಖಾಸಗಿ ಶಾಲೆಯೊಂದು ಕಾನೂನು ಬಾಹಿರವಾಗಿ ಬಳಕೆ ಮಾಡುತ್ತಿದೆ. ಈ ಪೈಕಿ ಎರಡು ಕೊಠಡಿಗಳನ್ನು ಕೆಡವಿ ಹೊಸದಾಗಿ ನಿರ್ಮಾಣ ಮಾಡಿಕೊಳ್ಳಲಾಗಿದೆ. 2011ರಲ್ಲಿ ಎಸ್‌ಡಿಎಂಸಿ ಠರಾವಿನ ಮೂಲಕ ಈ ಕೊಠಡಿಗಳನ್ನು ನೀಡಲಾಗಿದೆ ಎಂದು ಖಾಸಗಿ ಶಾಲೆಯವರು ಹೇಳುತ್ತಿದ್ದಾರೆ. ಆದರೆ, ಶಾಲೆಯ ಠರಾರು ಪುಸ್ತಕದಲ್ಲಿ ಅಂತಹ ಯಾವುದೇ ದಾಖಲೆಗಳಿಲ್ಲ ಎಂದು ದೂರಿದರು.

ಸರ್ಕಾರಿ ಶಾಲೆಯು ಸರ್ವೇ ನಂಬರ್ 236/1ರಲ್ಲಿ ಒಟ್ಟು 4 ಎಕರೆ ವಿಸ್ತೀರ್ಣ ಹೊಂದಿದೆ. ಈ ಜಾಗದಲ್ಲಿ ಖಾಸಗಿಯವರು ಅತಿಕ್ರಮಣ ಮಾಡಿಕೊಂಡಿರುವುದು ಶಾಲೆಯ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

ಸಾಮಾಜಿಕ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ ಮಾತನಾಡಿ, ಸರ್ಕಾರಿ ಶಾಲೆಯ ಆಸ್ತಿಯನ್ನು ಖಾಸಗಿಯವರು ಬಳಸಿಕೊಳ್ಳುತ್ತಿರುವುದು ಖಂಡನೀಯ. ಜಿಲ್ಲಾಧಿಕಾರಿಗಳು ತಕ್ಷಣ ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ, ಅಕ್ರಮವಾಗಿ ಪ್ರವೇಶಿಸಿದ ಕೊಠಡಿಗಳನ್ನು ತೆರವುಗೊಳಿಸಿ ಸರ್ಕಾರಿ ಶಾಲೆಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಎಸ್‌ಡಿಎಂಸಿ ಉಪಾಧ್ಯಕ್ಷೆ ಸುವರ್ಣ ಕೋತಿನ, ಸದಸ್ಯರಾದ ಮಂಜುನಾಥ ಕಾಲವಾಡ, ಮಹದೇವ ಮಡಿವಾಳರ, ವಿಠ್ಠಲ ಮಾದರ, ಗೋವಿಂದ ಮೇಟಿ, ಸುಮಂಗಲಾ ಗೊಣ್ಣಾಗರ, ಮಹಾದೇವಿ ಕುರಿ, ಲಕ್ಷ್ಮೀ ಪಲ್ಲೇದ, ರವಿ ಸವದತ್ತಿ, ಪ್ರಕಾಶ ವಾಲೀಕಾರ, ಬಶೀರಅಹಮ್ಮದ ಹುನಗುಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.