ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಸಭೆ ಸಮಾರಂಭಗಳಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಮಾಡುವ ಗುಣಗಾನ ಮಾತಿಗಷ್ಟೇ ಸೀಮಿತವಾಗಬಾರದು. ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಅನುಸರಿಸಬೇಕು. ಇದರಿಂದ ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸಲು ಸಾಧ್ಯ ಎಂದು ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಡಾ.ಹೆಚ್.ಇ.ಜ್ಞಾನೇಶ್ ಹೇಳಿದರು.ಗುರುವಾರ ತಾಲೂಕಿನ ಯಲವಾಟ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಕ್ಲಬ್ ವತಿಯಿಂದ ಫ್ಲೋರಿಂಗ್ ಮ್ಯಾಟ್ ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಇಂದು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ಇದಕ್ಕೆ ಗ್ರಾಮೀಣ ಪ್ರದೇಶದ ಶಾಲೆಗಳು ಹೊರತಾಗಿಲ್ಲ. ಇದನ್ನು ಕಾಯ್ದುಕೊಳ್ಳಲು ಶಿಕ್ಷಕರು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಮಕ್ಕಳಿಗೆ ಸಾಮಾನ್ಯ ಜ್ಞಾನಕ್ಕೂ ನೆರವಾಗುತ್ತದೆ ಎಂದರು.
ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಡಾ.ನಾಗರಾಜ್ ಮಾತನಾಡಿ, ಸರಕಾರಿ ಶಾಲೆಗೆ ರೋಟರಿ ಕ್ಲಬ್ ಹಲವು ಕೊಡುಗೆಗಳನ್ನು ನೀಡಿದೆ. ಮುಂದೆಯೂ ಸಂಸ್ಥೆ ಹಲವು ಜನಪರ ಕೆಲಸಗಳನ್ನು ಮಾಡಲಿದೆ ಎಂದರು.ರೋಟರಿ ಕ್ಲಬ್ ಅಧ್ಯಕ್ಷ ನಿರಂಜನ ಕುಪ್ಪಗಡ್ಡೆ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕೆಲಸ ನಿರ್ವಹಿಸುವ ಶಿಕ್ಷಕರು ಪ್ರಾಮಾಣಿಕ ಹಾಗೂ ಪರಿಶ್ರಮದಿಂದ ಕೆಲಸ ನಿರ್ವಹಿಸಿದ್ದಲ್ಲಿ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಶಿಕ್ಷಣ ಸಿಗುವ ಜತೆಗೆ ಖಾಸಗಿ ಶಾಲೆಯತ್ತ ಮುಖಮಾಡುವುದನ್ನು ತಡೆಯಬಹುದಾಗಿದೆ ಎಂದ ಅವರು ಮಕ್ಕಳನ್ನು ಅಕ್ಷರ ಕಲಿಕೆ ಜತೆಗೆ ಸಮಾಜದಲ್ಲಿ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುವುದರ ಕಡೆ ಶಿಕ್ಷಕರ ಮಾರ್ಗದರ್ಶನ ಮುಖ್ಯವಾಗಿರುತ್ತದೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಕೆ.ಬಿ. ಕೃಷ್ಣಪ್ಪ, ರೋಟರಿ ಕ್ಲಬ್ ಕಾರ್ಯದರ್ಶಿ ನಿತಿನ್, ಎಸ್ ಡಿಎಂಸಿ ಉಪಾಧ್ಯಕ್ಷ ಮನೋಹರ್, ಮುಖ್ಯ ಶಿಕ್ಷಕ ವಿನಯ್, ಶಿಕ್ಷಕ ಸಂತೋಷ್, ಸದಸ್ಯರಾದ ಹೂವಣ್ಣ, ಪ್ರಕಾಶ್ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.