ವಿದ್ಯಾದೇಗುಲ ಹೆಸರು ಸಾರ್ಥಕಪಡಿಸಿದ ಸರ್ಕಾರಿ ಶಾಲೆ: ಕೆ.ಎಸ್.ಆನಂದ್

| Published : Feb 07 2024, 01:45 AM IST

ಸಾರಾಂಶ

ಸ್ಪರ್ಧಾತ್ಮಕ ಯುಗದ ಇಂದಿನ ದಿನಗಳಲ್ಲೂ ಕಂಸಾಗರ ಗ್ರಾಮದ ಸರ್ಕಾರಿ ಶಾಲೆ 75 ವರ್ಷ ಪೂರೈಸಿ ವಿದ್ಯಾ ದೇಗುಲ ಎಂಬ ಹೆಸರನ್ನು ಸಾರ್ಥಕಪಡಿಸಿಕೊಂಡಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಕನ್ನಡಪ್ರಭ ವಾರ್ತೆ, ಕಡೂರು

ಸ್ಪರ್ಧಾತ್ಮಕ ಯುಗದ ಇಂದಿನ ದಿನಗಳಲ್ಲೂ ಕಂಸಾಗರ ಗ್ರಾಮದ ಸರ್ಕಾರಿ ಶಾಲೆ 75 ವರ್ಷ ಪೂರೈಸಿ ವಿದ್ಯಾ ದೇಗುಲ ಎಂಬ ಹೆಸರನ್ನು ಸಾರ್ಥಕಪಡಿಸಿಕೊಂಡಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಕಡೂರು ವಿಧಾನಸಭಾ ಕ್ಷೇತ್ರದ ಕಂಸಾಗರ ಗ್ರಾಮದಲ್ಲಿ ಗ್ರಾಮಸ್ಥರು ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೇ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ನಡೆದ ಶಾಲೆ ಅಮೃತ ಮಹೋತ್ಸವ ಉದ್ಘಾಟಿಸಿ,ಗೌರವ ಸ್ವೀಕರಿಸಿ ಮಾತನಾಡಿ ದರು. ಗ್ರಾಮೀಣ ಭಾಗದ ಕಂಸಾಗರದಲ್ಲ್ಲಿ ಸ್ವಾತಂತ್ರ ಪೂರ್ವದಲ್ಲಿ ಆರಂಭವಾದ ಈ ಶಾಲೆ 75 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಈ ಶಾಲೆಯಲ್ಲಿ ಶಿಕ್ಷಣ ಪಡೆದ ನೂರಾರು ವಿದ್ಯಾರ್ಥಿಗಳು ದೇಶ ವಿದೇಶದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ವಕೀಲ, ವಿಜ್ಞಾನಿ, ಪ್ರಾಧ್ಯಾಪಕ, ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದರೂ ಹುಟ್ಟೂರಿನ ಶಾಲೆ ಬಗ್ಗೆ ಅಭಿಮಾನ ಹಾಗು ಪ್ರೀತಿ ಇಟ್ಟುಕೊಂಡಿರುವುದು ಅನುಕರಣೀಯ. ಈ ಶಾಲೆಗೆ ಅಗತ್ಯವಿರುವ ಸೌಲಭ್ಯ ಒದಗಿಸಿಕೊಡುವ ಭರವಸೆ ನೀಡಿದರು.

ಸರಸ್ವತೀಪುರ ಗ್ರಾಪಂ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿ ರೈತರಿಗೆ ತೊಂದರೆಯಾಗಿದೆ. ಶೀಘ್ರದಲ್ಲಿ ಈ ಭಾಗಕ್ಕೆ ಅನುಕೂಲವಾಗುವಂತೆ ಎಂ.ವಿ.ಎಸ್.ಎಸ್.ವಿದ್ಯುತ್ ವಿತರಣಾ ಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಗ್ರಾಮದ ಅಂಗನವಾಡಿ ಕಟ್ಟಡಕ್ಕೆ ಹೊಸ ರೂಪ ಕೊಡಲಾಗುವುದು. ರಾಷ್ಟ್ರೀಯ ಹೆದ್ದಾರಿಯಿಂದ ಕಂಸಾಗರ ಗ್ರಾಮಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಪ್ರಕಟಿಸಿದರು.

ಅಧ್ಯಕ್ಷತೆ ವಹಿಸಿದ್ದ ಸರಸ್ವತೀಪುರ ಗ್ರಾಪಂ ಅಧ್ಯಕ್ಷ ಸೋಮಶೇಖರ್ ಮಾತನಾಡಿ, ಸರಕಾರಿ ಶಾಲೆಯನ್ನು ಉಳಿಸಿಕೊಂಡು ಹೋಗುವುದೇ ಕಷ್ಟವಾದ ಈ ಕಾಲದಲ್ಲಿ ಕಂಸಾಗರದ ಶಾಲೆ ಇಷ್ಟು ವರ್ಷಗಳನ್ನು‌ ಪೂರೈಸಿರುವುದು ಹೆಮ್ಮೆಯ ಸಂಗತಿ. ಈ ಶಾಲೆಗೆ‌ ನಿವೇಶನ ನೀಡಿದ ವಂಶದಲ್ಲಿ ಬಂದ ನಾನು ಕೂಡ ಇದೇ ಶಾಲೆಯಲ್ಲಿ ಓದಿ ಈಗ ಅಮೃತ ಮಹೋತ್ಸವದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವುದು ನನ್ನ ಪುಣ್ಯ. ಈ ದಿನವನ್ನು ಮರೆಯಲು ಸಾದ್ಯವಿಲ್ಲ. ನಮ್ಮ ನಾಯಕರಾದ ಕೆ. ಎಸ್. ಆನಂದ್‌ ಗ್ರಾಮದ ಎರಡು ದೇಗುಲಗಳಿಗೆ 10 ಲಕ್ಷಕ್ಕೂ ಹೆಚ್ಚು ಅನುದಾನ, ರಸ್ತೆ, ಅಂಗನವಾಡಿ ಮತ್ತಿತರ ಸೌಲಭ್ಯ ನೀಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಗ್ರಾಮದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದರು.

ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಕಂಸಾಗರ ರೇವಣ್ಣ ಮಾತನಾಡಿ, ಈ ಸರ್ಕಾರಿ ಶಾಲೆ ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಜಿಲ್ಲೆಗೆ ಹಾಗು ರಾಜ್ಯಕ್ಕೆ ಗಣ್ಯರನ್ನಾಗಿ ರೂಪಿಸಿ ಸಮಾಜಕ್ಕೆ ಕೊಡುಗೆ ನೀಡಿದೆ. ಅಂತಹ ಸರ್ಕಾರಿ ಶಾಲೆಯಲ್ಲಿ ಕಲಿತವರು ನಾವು ಎಂಬುದೇ ಹೆಮ್ಮೆಯ ಸಂಗತಿ ಎಂದರು.

ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳು ಅತ್ಯಂತ ಉನ್ನತ ಸಾಧನೆ ಮಾಡಿದ್ದಾರೆಂಬುದನ್ನು ಗಮನಿಸಿ ಸರ್ಕಾರಿ ಶಾಲೆಗೆ ನಮ್ಮ ಮಕ್ಕಳನ್ನು ಸೇರಿಸಲು ಮುಂದಾಗಬೇಕಿದೆ ಎಂದರು.

ಬೆಂಗಳೂರಿನ‌ ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ತಿಮ್ಮಯ್ಯ, ಹಿರಿಯ ವಕೀಲ ಕೆ.ಎನ್.ಬೊಮ್ಮಣ್ಣ, ರೇವಣ್ಣ, ಐಟಿಸಿ ಕಂಪನಿ ಉನ್ನತ ಅಧಿಕಾರಿ ದಿನೇಶ್ ಸೇರಿದಂತೆ ಶಾಲೆ ಹಳೆಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಗ್ರಾಪಂ ಸದಸ್ಯರಾದ ಮಂಜುಳಮ್ಮ, ಲಾವಣ್ಯ ವೆಂಕಟೇಶ್, ಉಪನ್ಯಾಸಕ ಗೋಪೀನಾಥ್, ಗ್ರಾಮದ ಹಿರಿಯ ಮುಖಂಡ ಮಂಜುನಾಥ್, ಶಾಲಾ ಶಿಕ್ಷಕ ವರ್ಗ ಮತ್ತು ಗ್ರಾಮಸ್ಥರು ಇದ್ದರು. 6ಕೆಕೆಡಿಯು1.

ಕಡೂರು ತಾಲೂಕಿನ ಕಂಸಾಗರ ಗ್ರಾಮದಲ್ಲಿ ನಡೆದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್‌. ಆನಂದ್ ರನ್ನು ಅಭಿನಂದಿಸಲಾಯಿತು.