ಶಿರಾಗೇಟ್‌ನಲ್ಲಿರುವ ಈ ಶಾಲೆ ನಗರದ ಹೃದಯ ಭಾಗದಲ್ಲಿದ್ದು, ಮುಂದಿನ ದಿನಗಳಲ್ಲಿ ಈ ಶಾಲೆಯ ಪ್ರವೇಶಕ್ಕೆ ಬಹಳ ಬೇಡಿಕೆ ಬರಲಿದೆ. ಭವಿಷ್ಯದಲ್ಲಿ ದೊಡ್ಡ ಶಿಕ್ಷಣ ಸಂಸ್ಥೆಯಾಗಿ ಹೆಸರು ಮಾಡಲಿದೆ.
ಕನ್ನಡಪ್ರಭ ವಾರ್ತೆ, ತುಮಕೂರು
ಸರಕಾರಿ ಶಾಲೆಗಳು ಖಾಸಗಿ ಶಾಲೆಗಳ ಪೈಪೋಟಿ ಎದುರಿಸಿ ತಮ್ಮಲ್ಲಿ ಪ್ರವೇಶ ಪಡೆಯುವ ಮಕ್ಕಳ ಭೌತಿಕ ಮತ್ತು ಭೌದ್ಧಿಕ ಬೆಳೆವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸಬಲ್ಲವು ಎಂಬುದಕ್ಕೆ ಶಿರಾಗೇಟ್‌ನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸಾಕ್ಷಿಯಾಗಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯಪಟ್ಟಿದ್ದಾರೆ.ನಗರದ ಶಿರಾಗೇಟ್‌ನಲ್ಲಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉತ್ತರ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ, ಶಾಲಾ ಮಕ್ಕಳ ಕಲಿಕಾ ಸಂಭ್ರಮಾಚರಣೆ ಹಾಗೂ ಶಾಲಾ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿ, ಇಲ್ಲಿನ ಶಿಕ್ಷಕರು, ಎಸ್.ಡಿ.ಎಂ.ಸಿ. ಸದಸ್ಯರು ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು ಹಗಲಿರುಳು ಮಕ್ಕಳ ಶ್ರಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಇವೆಲ್ಲರ ಶ್ರಮದ ಫಲವಾಗಿ ಇಂದು ಪ್ರಾಥಮಿಕ ಶಾಲೆ ಎಲ್.ಕೆ.ಜಿ.ಯಿಂದ 12 ತರಗತಿಯವರಗೆ ಒಂದೇ ಸೂರಿನಡಿ ಕಲಿಯಬಹುದಾದ ಕೆ.ಪಿ.ಎಸ್. ಶಾಲೆಯಾಗಿ ಸದ್ಯದಲ್ಲಿಯೇ ಮಾರ್ಪಾಡಾಗಲಿದೆ. ಮಕ್ಕಳ ಸ್ನೇಹಿ ಶೈಕ್ಷಣಿಕ ವಾತಾವರಣ ಇರುವ ಈ ಶಾಲೆ, ಮುಂಬರುವ ದಿನಗಳಲ್ಲಿ ನಗರದಲ್ಲಿರುವ ಸರಕಾರಿ ಶಾಲೆಗಳಲ್ಲಿಯೇ ಪ್ರಖ್ಯಾತಿ ಪಡೆದ ಶಾಲೆಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಶಾಲಾ ಶಿಕ್ಷಣ ಇಲಾಖೆಯ ತುಮಕೂರು ದಕ್ಷಿಣ ಜಿಲ್ಲಾ ಉಪನಿರ್ದೇಶಕರಾದ ಕೆ.ಜಿ.ರಘುಚಂದ್ರ ಮಾತನಾಡಿ, ತುಮಕೂರಿನ ಉತ್ತರ ಬಡಾವಣೆ ಶಾಲೆ ಮುಂದಿನ ಐದಾರು ತಿಂಗಳಲ್ಲಿ, ಭವ್ಯ ಮತ್ತು ಸುಸಜ್ಜಿತ ಬೃಹತ್ ಕಟ್ಟಡವನ್ನು ತನ್ನದಾಗಿಸಿಕೊಂಡು, ನಗರದ ಪ್ರತಿಷ್ಠಿತ ಶಾಲೆಗಳ ಸಾಲಿನಲ್ಲಿ ನಿಲ್ಲಲಿದೆ. ಇಲ್ಲಿ ಕಲಿಯುತ್ತಿರುವ ಮಕ್ಕಳು ಮತ್ತು ಅವರ ಪೋಷಕರು ತಮ್ಮ ಸಹೋದರ, ಸಹೋದರಿಯರ ಮಕ್ಕಳನ್ನು ಈ ಶಾಲೆಗೆ ಸೇರಿಸಿ, ಅವರ ಭವಿಷ್ಯವನ್ನು ಉಜ್ವಲಗೊಳಿಸುವ ಕೆಲಸ ಮಾಡಬೇಕು. ಹಾಗೆಯೇ ಮಕ್ಕಳು ಸಹ ಈ ದಿನವನ್ನು ಭವಿಷ್ಯದಲ್ಲಿ ನೆನಪಿನಲ್ಲಿ ಇಟ್ಟುಕೊಳ್ಳುವ ದಿನವಾಗಲಿ ಎಂದು ಶುಭ ಹಾರೈಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಮಾತನಾಡಿ, ಉತ್ತರ ಬಡಾವಣೆ ಶಾಲೆಯ ಶಿಕ್ಷಕರು, ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದವರು ಒಟ್ಟಾಗಿ, ಅಜಾಕ್ಸ್ ಸಂಸ್ಥೆಯ ಸಹಕಾರದಲ್ಲಿ ಎಲ್.ಕೆ.ಜಿ.ಯಿಂದ 12 ತರಗತಿಯವರೆಗೆ ಕಲಿಯಬಹುದಾದ ಸುಮಾರು 16 ಕೋಟಿ ರು. ಭವ್ಯ ಕಟ್ಟಡವನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ಈ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ 550 ದಾಟಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಲಿದೆ. 26 ಜನ ನುರಿತ ಶಿಕ್ಷಕರು ಕೆಲಸ ಮಾಡುತ್ತಿದ್ದು, ಇವರಲ್ಲಿ 18 ಜನ ಮಹಿಳಾ ಶಿಕ್ಷಕಿಯರೇ ಇದ್ದಾರೆ. ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಒಂದು ವರ್ಷದ ಕಾರ್ಯ ಯೋಜನೆ ಸಿದ್ದಪಡಿಸಿ, ಅದರಂತೆ ಕಾರ್ಯನಿರ್ವಹಿಸುವ ಮೂಲಕ ಮಕ್ಕಳು ಪಠ್ಯ, ಪಠ್ಯೇತರ ಚುಟುವಟಿಕೆಯಲ್ಲಿ ಹೆಸರು ಮಾಡುವಂತೆ ಮಾಡಿದ್ದಾರೆ. ಅಂಕ ಗಳಿಕೆಯೇ ಶಿಕ್ಷಣವಲ್ಲ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯೇ ಶಿಕ್ಷಣ ಎಂಬುದನ್ನು ಈ ಶಾಲೆ ಮಾಡಿ ತೋರಿಸಿದೆ. ಇದಕ್ಕಾಗಿ ಶಾಲೆಯ ಪದವೀಧರ ಮುಖ್ಯ ಶಿಕ್ಷಕರು, ಸಹಶಿಕ್ಷಕರು, ಎಸ್.ಡಿ.ಎಂ.ಸಿ ಪದಾಧಿಕಾರಿಗಳು, ಹಳೆಯ ವಿದ್ಯಾರ್ಥಿಗಳ ಸಂಘವನ್ನು ಅಭಿನಂದಿಸುತ್ತೇನೆ ಎಂದರು.ಪ್ರಾಸ್ತಾವಿಕ ನುಡಿಗಳನ್ನಾಡಿದ ಶಾಲೆಯ ಪದವೀಧರ ಮುಖ್ಯ ಶಿಕ್ಷಕ ಡಿ.ಎಸ್.ಶಿವಸ್ವಾಮಿ, ಶಾಲೆಯ ಅಭಿವೃದ್ಧಿಗಾಗಿ 2018ರಲ್ಲಿ ಎಸ್.ಡಿ.ಎಂ.ಸಿ ರಚಿಸಿದ್ದು, ಅವರ ಮತ್ತು ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ಶಾಲೆ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಹೊಂದುತ್ತಾ ಬಂದಿದೆ. ಇಂದು 280 ಬಾಲಕ, 285 ಬಾಲಕಿಯರು ಸೇರಿ ಒಟ್ಟು 565 ಮಕ್ಕಳು ಕಲಿಯುತ್ತಿದ್ದು, ಅಜಾಕ್ಸ್ ಸಂಸ್ಥೆ ಹೊಸದಾಗಿ 16 ಕೋಟಿ ರು. ವೆಚ್ಚದಲ್ಲಿ ಬೃಹತ್ ಕಟ್ಟಡ ನಿರ್ಮಿಸುತ್ತಿದೆ. 2026-27ನೇ ಶೈಕ್ಷಣಿಕ ವರ್ಷದ ಪ್ರಾರಂಭಕ್ಕೆ ಉದ್ಘಾಟನೆಯಾಗುವ ನಿರೀಕ್ಷೆಯಿದೆ. ಕಳೆದ ವರ್ಷದಿಂದ ಶಾಲೆಯಲ್ಲಿ ಎಲ್.ಕೆ.ಜಿ.,ಯುಕೆಜಿ ಆರಂಭವಾಗಿದೆ. ಅಲ್ಲದೆ ಹೈಸ್ಕೂಲ್‌ನಲ್ಲಿ ಆಂಗ್ಲಮಾಧ್ಯಮವೂ ಆರಂಭವಾಗಿ ಸುಸೂತ್ರವಾಗಿ ನಡೆಯುತ್ತಿದೆ. ಸರಕಾರ ನಮಗೆ ಹೆಚ್ಚಿನ ಸವಲತ್ತು ನೀಡಿದ್ದು, ಶಿಕ್ಷಕರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಅದಕ್ಕಾಗಿ ಈ ಫೆಬ್ರವರಿಯಿಂದ ಒಂದು ಯೋಜನೆ ಸಿದ್ಧಪಡಿಸಿ, ಹೆಚ್ಚಿನ ಮಕ್ಕಳು ಶಾಲೆಗೆ ಸೇರುವಂತೆ ಮಾಡುವ ಮೂಲಕ ನಮ್ಮ ಮೇಲಿನ ನಂಬಿಕೆ ಉಳಿಸಿಕೊಳ್ಳೋಣ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಓಬಳಯ್ಯ ಮಾತನಾಡಿ, ಶಿರಾಗೇಟ್‌ನಲ್ಲಿರುವ ಈ ಶಾಲೆ ನಗರದ ಹೃದಯ ಭಾಗದಲ್ಲಿದ್ದು, ಮುಂದಿನ ದಿನಗಳಲ್ಲಿ ಈ ಶಾಲೆಯ ಪ್ರವೇಶಕ್ಕೆ ಬಹಳ ಬೇಡಿಕೆ ಬರಲಿದೆ. ಭವಿಷ್ಯದಲ್ಲಿ ದೊಡ್ಡ ಶಿಕ್ಷಣ ಸಂಸ್ಥೆಯಾಗಿ ಹೆಸರು ಮಾಡಲಿದೆ ಎಂದರು.ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಚೇತನ, ಜಿ.ಟಿ, ಶಿಕ್ಷಣ ಸಂಯೋಜಕರಾದ ಗೋವಿಂದರಾಜು, ಬಿಆರ್‌ಪಿ ಮಹಬೂಬ್ ಪಾಷ, ಪದವಿಧರ ಮುಖ್ಯಶಿಕ್ಷಕರಾದ ಡಿ.ಎಸ್. ಶಿವಸ್ವಾಮಿ, ಸಹಶಿಕ್ಷಕರು ಹಾಗೂ ತುಮಕೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ತಿಮ್ಮೇಗೌಡ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಎಸ್.ಡಿ.ಎಂ.ಸಿ ಸದಸ್ಯರಾದ ಜಬೀನಾ, ಸೈಯದ್ ಫೈರೋಜ್, ಬಸವನಗೌಡ ಹಂದ್ರಾಳ್, ಮೋಹನ್ ಕುಮಾರ್, ದೇವರಾಜು, ಭಾಗ್ಯಮ್ಮ, ವಿಜಯಕುಮಾರಿ, ರಜಿಯಾ, ವಿಶಾಲಾಕ್ಷಿ ಸೇರಿದಂತೆ, ಶಿಕ್ಷಕರು ವೇದಿಕೆಯಲ್ಲಿದ್ದರು. ಶಾಲಾ ಸಾಂಸ್ಕೃತಿಕ ಹಬ್ಬದ ಅಂಗವಾಗಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
