ಬ್ಯಾಡಗಿ: ಸಾರ್ವಜನಿಕರ ಸಹಭಾಗಿತ್ವ ಹಾಗೂ ಪ್ರೇರಣೆ ಇದ್ದಲ್ಲಿ ಮಾತ್ರ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು ಸಾಧ್ಯ ಎಂದು ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಹೇಳಿದರು.ತಾಲೂಕಿನ ಕದರಮಂಡಲಗಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ, ಶಿಕ್ಷಕರ ಪೋಷಕರ ಮೊದಲ ಮಹಾಸಭೆ. ಸರಕಾರಿ ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳ ಶಾಲೆ ವಿಲೀನ ಕಾರ್ಯಕ್ರಮದಲ್ಲಿ ಮಾತನಾಡಿದರು.ಸರಕಾರಿ ಶಾಲೆಗಳು ದೇಶಕ್ಕೆ ಅನೇಕ ಅಮೂಲ್ಯ ರತ್ನಗಳನ್ನು ಕೊಡುಗೆಯಾಗಿ ನೀಡಿದ್ದು, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವಾರು ಗಣ್ಯರು ಸರಕಾರಿ ಶಾಲೆಗಳಲ್ಲಿಯೇ ಶಿಕ್ಷಣ ಪಡೆದಿದ್ದಾರೆ. ಶಿಕ್ಷಣದ ಜೊತೆಗೆ ಸಂಸ್ಕಾರ, ಶಿಸ್ತು ಹಾಗೂ ಸಾಮಾಜಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಸರ್ಕಾರಿ ಶಾಲೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಗದಿಗಯ್ಯ ಹಿರೇಮಠ ಮಾತನಾಡಿ, ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಗುಣಮಟ್ಟದ ಶಿಕ್ಷಣ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ತಂತ್ರಜ್ಞಾನ ಆಧಾರಿತ ಕಲಿಕೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಆದರೆ, ಶಾಲೆಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರದ ಪ್ರಯತ್ನಗಳ ಜೊತೆಗೆ ಸಾರ್ವಜನಿಕರು, ಪೋಷಕರು, ಹಳೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಸಹಕಾರವೂ ಅತ್ಯಗತ್ಯವಾಗಿದೆ ಎಂದರು.ಪ್ರತಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವ ಮೂಲಕ ಶಾಲೆಗಳ ಉಳಿವು ಮತ್ತು ಬೆಳವಣಿಗೆಗೆ ಕೈಜೋಡಿಸಬೇಕು. ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರಷ್ಟೇ ಅಲ್ಲ, ಸಮಾಜದ ಪ್ರತಿಯೊಬ್ಬರ ಮೇಲಿದೆ. ಗ್ರಾಮಸ್ಥರು ಶಾಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರೆ ಸರ್ಕಾರಿ ಶಾಲೆಗಳು ಇನ್ನಷ್ಟು ಬಲಿಷ್ಠವಾಗಲಿವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್, ನೌಕರರ ಸಂಘದ ಅಧ್ಯಕ್ಷ ಮಾಲತೇಶ ಕಂಬಳಿ, ಮೋಹನಕುಮಾರ ವಿ., ಸಿಆರ್‌ಪಿ, ಬಿಆರ್‌ಪಿಗಳು ಸೇರಿದಂತೆ ಶಾಲಾ ಶಿಕ್ಷಕರು ಸಿಬ್ಬಂದಿ ವರ್ಗ, ಎಸ್‌ಡಿಎಂಸಿ ಸದಸ್ಯರು, ಗ್ರಾಮ ಪಂಚಾಯಿತಿ ಪ್ರತಿನಿಧಿಗಳು, ಪೋಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಶಿಕ್ಷಕಿ ಕವಿತಾ ಬನ್ನಿಹಟ್ಟಿ ಸ್ವಾಗತಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಎಂ.ವೈ.ಹೊಟ್ಟಿಗೌಡ್ರ ವಂದಿಸಿದರು.