ಖಾಸಗಿ ಶಾಲೆಗಳನ್ನು ಮೀರಿಸುವ ಸರ್ಕಾರಿ ಶಾಲೆಗಳು: ಸಚಿವ ಮಂಕಾಳು ವೈದ್ಯ

| Published : Apr 28 2025, 12:48 AM IST

ಖಾಸಗಿ ಶಾಲೆಗಳನ್ನು ಮೀರಿಸುವ ಸರ್ಕಾರಿ ಶಾಲೆಗಳು: ಸಚಿವ ಮಂಕಾಳು ವೈದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ಕಾಲಘಟ್ಟದಲ್ಲಿ ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ನಡೆಯುತ್ತಿರುವುದು ಸಂತೋಷದ ವಿಚಾರ.

ಕುಮಟಾ: ಇಂದಿನ ಕಾಲಘಟ್ಟದಲ್ಲಿ ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ನಡೆಯುತ್ತಿರುವುದು ಸಂತೋಷದ ವಿಚಾರ. ಸರ್ಕಾರಿ ಶಾಲೆಗಳಿಗೆ ಎಲ್ಲ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿದೆ ಎಂದು ಸಚಿವ ಮಂಕಾಳು ವೈದ್ಯ ಹೇಳಿದರು.

ತಾಲೂಕಿನ ಕಾಗಾಲದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ತರ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಈ ಶಾಲೆಗೆ ಆಂಗ್ಲ ಮಾಧ್ಯಮ ಪ್ರಾರಂಭಕ್ಕೆ ಪ್ರಸ್ತಾವನೆ ಬಂದಿದ್ದು ಕ್ರಮ ಕೈಗೊಳ್ಳುತ್ತೇವೆ. ಶಿಕ್ಷಣದ ಜತೆಗೆ ಮಕ್ಕಳಲ್ಲಿ ಮಾನವೀಯ ಗುಣಗಳನ್ನು ಕಲಿಸುವ ಕಾರ್ಯ ಮಾಡಬೇಕಾಗಿರುವುದು ಶಿಕ್ಷಕರ ಹಾಗೂ ಪಾಲಕರ ಕರ್ತವ್ಯ. ಮೌಲ್ಯವಿಲ್ಲದ ಮನುಷ್ಯ ಮೃಗಕ್ಕೆ ಸಮ ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ೧೫೦ಕ್ಕೂ ಹೆಚ್ಚು ವರ್ಷ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸೇವೆಗೈದ ಕಾಗಾಲ ಮಾದರಿ ಶಾಲೆಯ ಈ ಕಾರ್ಯಕ್ರಮ ಅತ್ಯಂತ ವಿಶೇಷ. ನಮ್ಮ ಕ್ಷೇತ್ರದಲ್ಲಿ ಶಾಲೆಗಳ ಅವಶ್ಯಕತೆಗೆ ತಕ್ಕಂತೆ ಕೆಲಸ ಮಾಡಿಕೊಟ್ಟಿದ್ದೇನೆ. ಕಾಗಾಲದಲ್ಲಿಯೂ ಶಾಲೆಯ ಕಟ್ಟಡ, ರಸ್ತೆ ಹಾಗೂ ಇನ್ನಿತರ ಅಗತ್ಯ ವ್ಯವಸ್ಥೆ ಮಾಡಿಕೊಟ್ಟಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಉಸ್ತುವಾರಿ ಸಚಿವ ಮಂಕಾಳು ವೈದ್ಯರ ಸಹಕಾರದ ಕೊಡುಗೆ ಹೆಚ್ಚು ಬೇಕು ಎಂದರು.

ಜಿಪಂ ಮಾಜಿ ಸದಸ್ಯ ರತ್ನಾಕರ ನಾಯ್ಕ ಮಾತನಾಡಿ, ನಮ್ಮ ಪೂರ್ವಜರು ಹಾಕಿಕೊಟ್ಟ ದಾರಿಯಲ್ಲಿ ನಾವು ಸಾಗಬೇಕು. ಮುಂದಿನ ಸಾವಿರ ವರ್ಷಕ್ಕೆ ಒಳಿತಿನೆಡೆ ಸಾಗುವುದಕ್ಕೆ ಈ ಕಾರ್ಯಕ್ರಮ ಬುನಾದಿಯಾಗಲಿ. ಇಂದಿನ ದಿನಮಾನಕ್ಕೆ ಇಂಗ್ಲೀಷ್ ಶಿಕ್ಷಣದ ಅವಶ್ಯಕತೆ ಇದ್ದು, ಎಲ್ಲ ಸರ್ಕಾರಿ ಶಾಲೆಗಳಲ್ಲಿ ಅಂಗ್ಲಮಾಧ್ಯಮ ಅಳವಡಿಕೆಯಾಗಲಿ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ ಭಾಗ್ವತ್ ಮಾತನಾಡಿ, ೧೫೦ ವರ್ಷಗಳ ಹಿಂದೆ ಆ ಕಾಲದ ಜನರು ಎಲ್ಲ ಸಮಸ್ಯೆಗಳನ್ನು ಎದುರಿಸಿ ಶಾಲೆಯೊಂದನ್ನು ಕಟ್ಟಿ ಮುನ್ನಡೆಸಿಕೊಂಡು ಬಂದಿದ್ದಾರೆ. ಅವರ ಪರಿಶ್ರಮದಿಂದ ಗ್ರಾಮದಲ್ಲಿ ಸುಶಿಕ್ಷಿತ ಪೀಳಿಗೆ ಬೆಳೆದುಬಂದಿದೆ ಎಂದರು.

ಬಿಇಒ ರಾಜೇಂದ್ರ ಭಟ್ಟ, ಗ್ರೇಡ್ ೨ ತಹಶೀಲ್ದಾರ ಸತೀಶ ಗೌಡ, ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷೆ ಸಾವಿತ್ರಿ ಪಟಗಾರ, ಜಿಪಂ ಮಾಜಿ ಉಪಾಧ್ಯಕ್ಷೆ ಲಲಿತಾ ಪಟಗಾರ, ವಿ.ಎಲ್. ನಾಯ್ಕ, ನಾರಾಯಣ ಶಾನಭಾಗ, ಜಿ.ಕೆ. ಪಟಗಾರ, ಶಿವರಾಮ ಪಟಗಾರ, ಪಿಡಿಒ ನವೀನ ನಾಯ್ಕ, ಮುಖ್ಯಶಿಕ್ಷಕಿ ಜಾಹ್ನವಿ ಹೆಗಡೆ ಇದ್ದರು.

ಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಲಾಯಿತು. ಮೋಹನ ಪಟಗಾರ ಅವರ ಅವ್ವ ಹಾಗೂ ಶಂಕರ ಹರಿಕಂತ್ರರ ಚುಟುಕು ಸಂಕಲನವನ್ನು ಗಣ್ಯರು ಬಿಡುಗಡೆಗೊಳಿಸಿದರು. ಶಾಲೆಯ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಲಾಯಿತು. ವಿಷ್ಣು ಪಟಗಾರ, ಪ್ರಕಾಶ ಗಾವಡಿ ನಿರೂಪಿಸಿದರು.