ಸಮಾನತೆ ಬೆಳೆಸುವ ಸರ್ಕಾರಿ ಶಾಲೆ ಉಳಿಸಬೇಕು

| Published : Jul 06 2025, 11:48 PM IST

ಸಾರಾಂಶ

ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸುವ ಸರ್ಕಾರಿ ಶಾಲೆಗಳ ಶೈಕ್ಷಣಿಕ ಪ್ರಗತಿಗೆ ದಾನಿಗಳ ನೆರವು ಅಗತ್ಯವಿದ್ದು, ಖಾಸಗಿ ಪೈಪೋಟಿ ಸರ್ಕಾರಿ ಶಾಲೆಗಳನ್ನು ಇಂದು ಕಾಡುತ್ತಿದೆ, ಇಂತಹ ಸಂದರ್ಭದಲ್ಲಿ ಈ ಶಾಲೆಗಳ ಬಡ ಮಕ್ಕಳಿಗೆ ಅಗತ್ಯ ಸೌಲಭ್ಯ ಒದಗಿಸುವ ಮೂಲಕ ಅವರನ್ನು ಸ್ಪರ್ಧಾತ್ಮಕ ಪೈಪೋಟಿಗೆ ಎದುರಾಗಿ ನಿಲ್ಲುವ ಶಕ್ತಿ ತುಂಬಬೇಕು.

ಕನ್ನಡಪ್ರಭ ವಾರ್ತೆ ಕೋಲಾರಸಮಾನತೆ, ಸೌಹಾರ್ದತೆ ಬಲಗೊಳ್ಳಲು ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಬೇಕು, ದಾನಿಗಳು, ವಿವಿಧ ಕಂಪನಿಗಳ ಸಿಎಸ್‌ಆರ್ ನಿಧಿ ಬಳಸಿ ಖಾಸಗಿ ಶಾಲೆಗಳ ಪೈಪೋಟಿಗೆ ಅನುಗುಣವಾಗಿ ಬಲವರ್ಧನೆ ಮಾಡಬೇಕು ಎಂದು ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ನಿರಂಜನ ವಾನಳ್ಳಿ ಕರೆ ನೀಡಿದರು.ಜಿಲ್ಲೆಯ ಕಸೆಟ್ಟಿಪಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದಿಂದ ೩.೧೦ ಲಕ್ಷ ವೆಚ್ಚದಲ್ಲಿ ಸೋಲಾರ್ ಪ್ಲಾಂಟ್‌ಅನ್ನು ಉಚಿತವಾಗಿ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಕಾನ್ವೆಂಟ್ ವ್ಯಾಮೋಹ ಬಿಡಿ

ಗುಣಾತ್ಮಕ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡುವ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ದಿಗೆ ಸಮಾಜ, ಸಂಸ್ಥೆಗಳು ಕೈಜೋಡಿಸಬೇಕು, ಕಾನ್ವೆಂಟ್ ವ್ಯಾಮೋಹ ಬಿಟ್ಟು ಮಕ್ಕಳನ್ನು ದಾಖಲಿಸಲು ಪೋಷಕರು ಪಣ ತೊಡಬೇಕು ಎಂದು ಕಿವಿಮಾತು ಹೇಳಿದರು.ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸುವ ಸರ್ಕಾರಿ ಶಾಲೆಗಳ ಶೈಕ್ಷಣಿಕ ಪ್ರಗತಿಗೆ ದಾನಿಗಳ ನೆರವು ಅಗತ್ಯವಿದ್ದು, ಖಾಸಗಿ ಪೈಪೋಟಿ ಸರ್ಕಾರಿ ಶಾಲೆಗಳನ್ನು ಇಂದು ಕಾಡುತ್ತಿದೆ, ಇಂತಹ ಸಂದರ್ಭದಲ್ಲಿ ಈ ಶಾಲೆಗಳ ಬಡ ಮಕ್ಕಳಿಗೆ ಅಗತ್ಯ ಸೌಲಭ್ಯ ಒದಗಿಸುವ ಮೂಲಕ ಅವರನ್ನು ಸ್ಪರ್ಧಾತ್ಮಕ ಪೈಪೋಟಿಗೆ ಎದುರಾಗಿ ನಿಲ್ಲುವ ಶಕ್ತಿ ತುಂಬಿ ಬೆಳೆಸುವ ಅಗತ್ಯ ಎಂದರು.ಸಾಧನೆಗೆ ಛಲ ಇರಬೇಕು

ಕಲಿಕೆಗೆ ಬಡತನ ಅಡ್ಡಿಯಾಗದು, ನಿಮ್ಮಲ್ಲಿ ಸಾಧನೆಯ ಛಲ ಇರಬೇಕು, ಪರಿಶ್ರಮ, ಶ್ರದ್ಧೆ ಜತೆಗಿದ್ದರೆ ಎಂತಹ ಸಾಧನೆಯೂ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ, ಶಾಲೆಗ ಗೈರಾಗದಿರಿ ಎಂದು ಕಿವಿಮಾತು ಹೇಳಿದರು.ವಿವಿಯ ಮೌಲ್ಯಮಾಪನ ಕುಲಸಚಿವ ಲೋಕನಾಥ್ ಮಾತನಾಡಿ, ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸುವ ಅಗತ್ಯ, ಓದಿನ ಜತೆ ಶಿಸ್ತುಬದ್ದ ಜೀವನದ ಪಾಠ ಮಕ್ಕಳಿಗೆ ನೀಡುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಸಿಕೊಳ್ಳಬೇಕು, ದಾಖಲಾತಿ ಉತ್ತಮಪಡಿಸಲು ಶ್ರಮಿಸಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.ಸಾಧಕರೆಲ್ಲಾ ಸರ್ಕಾರಿ ಶಾಲೆಯಲ್ಲಿ ಓದಿದವರೇ

ದೇಶ ಕಂಡ ಸಾಧಕರೆಲ್ಲಾ ಸರ್ಕಾರಿ ಶಾಲೆಯಲ್ಲೇ ಓದಿದವರು ಎಂದ ಅವರು, ಕೀಳಿರಿಮೆ ತೊರೆದು ಮಕ್ಕಳನ್ನು ಇಲ್ಲಿ ದಾಖಲಿಸುವ ಮೂಲಕ ಸಮಾನ ಶಿಕ್ಷಣಕ್ಕೆ ಹಾನಿಯಾಗುವುದನ್ನು ತಪ್ಪಿಸುವ ಹೊಣೆ ಪೋಷಕರು, ಸರ್ಕಾರ ಮತ್ತು ಸಮಾಜದ ಮೇಲಿದೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಅಗಾನಾಗ್ ಸಂಸ್ಥೆಯ ಜಯರಾಮ್ ಇದ್ದರು.