ಹಿರೇಕೆರೂರು: ಸರಕಾರಿ ಶಾಲೆಗಳು ಎಲ್ಲ ವರ್ಗದ ಜಾತಿಯ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಸಹಬಾಳ್ವೆ ಕಲಿಸುತ್ತಿವೆ. ಅಂತಹ ಶಾಲೆಗಳಿಗೆ ಪುಸ್ತಕಗಳನ್ನು ಕೊಟ್ಟು, ಅಲ್ಲಿಯ ಗ್ರಂಥಾಲಯಗಳಿಗೆ ಶಕ್ತಿ ತುಂಬುವ ಕೆಲಸವಾಗಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶಕುಮಾರ ಎನ್. ಹೇಳಿದರು. ಪಟ್ಟಣದಲ್ಲಿ ಪುಸ್ತಕ ಪ್ರಾಧಿಕಾರದ ವತಿಯಿಂದ ಮನೆಗೊಂದು ಗ್ರಂಥಾಲಯ ಎಂಬ ಯೋಜನೆಯಡಿಯಲ್ಲಿ ಪ್ರಾ. ಎಸ್. ಪಿ. ಗೌಡರ ಅವರ ಮನೆಯಲ್ಲಿ ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಶಾಲೆಗಳಲ್ಲಿ ಅನೇಕ ಪ್ರತಿಭಾವಂತ ಸಾಹಿತಿಗಳಿದ್ದಾರೆ. ಪುಸ್ತಕಗಳನ್ನೂ ಪ್ರಕಟಿಸಿದ್ದಾರೆ. ಅವರು ಮಕ್ಕಳಲ್ಲಿ ಬರೆಯುವ, ಓದುವ, ಪುಸ್ತಕ ಪ್ರಕಟಿಸುವ ಹವ್ಯಾಸವನ್ನು ಬೆಳೆಸುವ ಪ್ರಯತ್ನ ಮಾಡಬೇಕು. ಸಾಹಿತ್ಯ ರಚನೆ ಎಂದರೆ ಒಂದು ಸೃಜನಾತ್ಮಕ ಕಲೆ ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಲೇಖಕ ಎಸ್.ಪಿ. ಗೌಡರ ಮಾತನಾಡಿ, ಪುಸ್ತಕ ಪ್ರಕಟಣೆ ಎಂದರೆ ಲಾಭದಾಯಕ ಬಂಡವಾಳ ತಂದುಕೊಡುವ ಉದ್ಯಮವಲ್ಲ. ನಮ್ಮ ನೆಲದ ಗಳಗನಾಥರೆ ಒಂದು ಉದಾಹರಣೆ. ಅವರ ಹೆಸರಿನ ಪ್ರೇರಣೆಯಿಂದಲೇ ಪುಸ್ತಕ ಪ್ರೀತಿಯನ್ನು ಬೆಳೆಸಬೇಕು. ಓದು ಎಂದರೆ ಬೆಳಕಿನ ಕಿಂಡಿ ಇದ್ದಂತೆ. ಇಂತಹ ಗ್ರಂಥಾಲಗಳು ಊರಿನಲ್ಲಿರಬೇಕು. ಓದಿಗಿಂತ ನಿರಂತರ ಓದು ಬಹಳ ಮುಖ್ಯ. ಅದರಲ್ಲೂ ನಾವೆಲ್ಲ ಲೇಖಕರು ಸ್ಥಳೀಯ ಚರಿತ್ರೆಯನ್ನು ಬರೆಯಬೇಕು. ಅವು ಮುಂದೊಂದು ದಿನ ಹೊಸ ತಲೆಮಾರಿಗೆ ದಾರದೀಪವಾಗುತ್ತವೆ. ಸ್ಥಳೀಯ ಚರಿತ್ರೆ ಎಂದರೆ ಹೊಸ ಇತಿಹಾಸ ಬರೆದಂತೆ ಎಂದರು.ಈ ಸಂದರ್ಭದಲ್ಲಿ ಎಸ್. ಪಿ. ಗೌಡರ ಮತ್ತು ಅವರ ಪತ್ನಿ ಶಿಲ್ಪಾ ಅವರಿಗೆ ಐವತ್ತು ಪುಸ್ತಕಗಳನ್ನು ನೀಡಿ ವೇದಿಕೆಯ ಗಣ್ಯರಾದ ಲಿಂಗಯ್ಯ ಹಿರೇಮಠ ಮತ್ತು ಮಹೇಂದ್ರ ಬಡಳ್ಳಿ ಸನ್ಮಾನಿಸಿದರು. ಪ್ರತಿಯಾಗಿ ಗೌಡರ ಅವರು ಕೆಲವು ಅಮೂಲ್ಯ ಪುಸ್ತಕಗಳನ್ನು ಗ್ರಂಥಾಲಯ ಚಳವಳಿಗೆ ನೀಡಿದರು.ಈ ವೇಳೆ ಎಸ್. ಆರ್. ಹಿರೇಮಠ, ರಾಘವೇಂದ್ರ ಎ.ಜಿ. ಆರ್.ಎಲ್. ತೆಂಬದ, ಏಕೇಶಪ್ಪ ಬಣಕಾರ, ಬಸವರಾಜ ಸೊರಟೂರ, ಮೌನೇಶ ಮತ್ತೂರ, ಎ.ಬಿ. ಪೂಜಾರ, ನಾಗರಾಜಯ್ಯ, ವೀರನಗೌಡ ಹುಡೇ, ಪಿ.ಬಿ. ನಿಂಗನಗೌಡ, ಎ.ಬಿ. ಮರಿಗೌಡರ, ಲೋಹಿತ ಬಣಕಾರ ಪಾಲ್ಗೊಂಡಿದ್ದರು. ನಾಗಪ್ಪ ಹೆಗ್ಗೇರಿ ಸ್ವಾಗತಿಸಿದರು. ಜಾಗೃತಿ ಸಮಿತಿಯ ಅನಿತ ಮಂಜುನಾಥ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೊನೆಯಲ್ಲಿ ಎಂ.ಎಂ. ಮತ್ತೂರ ವಂದಿಸಿದರು.