ಸುಗ್ರೀವಾಜ್ಞೆ ಮೂಲಕ ಸರ್ಕಾರಿ ಶಾಲೆಗಳಲ್ಲಿ ಓದಿದವರಿಗಷ್ಟೇ ಉದ್ಯೋಗಗಳಲ್ಲಿ ವಿಶೇಷ ಮೀಸಲಾತಿ ಪ್ರಕಟಿಸಬೇಕಾದ ಅನಿವಾರ್ಯತೆಗೆ ಶಿಕ್ಷಣ ಇಲಾಖೆ ಬಂದಿಳಿದಿದೆ. ಇಲ್ಲದಿದ್ದಲ್ಲಿ ಬರುವ 10 ವರ್ಷದಲ್ಲಿ ಸರ್ಕಾರಿ ಶಾಲೆಗಳು ರಾಜರಿಲ್ಲದ ಅರಮನೆಗಳಂತೆ ಪಾಳು ಬೀಳಲಿವೆ ಎಂದು ಪ್ರಗತಿಪರ ರೈತ ಶಿಕ್ಷಣ ತಜ್ಞ ನಿಜಲಿಂಗಪ್ಪ ಬಸೇಗಣ್ಣೆ ಎಚ್ಚರಿಸಿದರು.
ಬ್ಯಾಡಗಿ: ಸುಗ್ರೀವಾಜ್ಞೆ ಮೂಲಕ ಸರ್ಕಾರಿ ಶಾಲೆಗಳಲ್ಲಿ ಓದಿದವರಿಗಷ್ಟೇ ಉದ್ಯೋಗಗಳಲ್ಲಿ ವಿಶೇಷ ಮೀಸಲಾತಿ ಪ್ರಕಟಿಸಬೇಕಾದ ಅನಿವಾರ್ಯತೆಗೆ ಶಿಕ್ಷಣ ಇಲಾಖೆ ಬಂದಿಳಿದಿದೆ. ಇಲ್ಲದಿದ್ದಲ್ಲಿ ಬರುವ 10 ವರ್ಷದಲ್ಲಿ ಸರ್ಕಾರಿ ಶಾಲೆಗಳು ರಾಜರಿಲ್ಲದ ಅರಮನೆಗಳಂತೆ ಪಾಳು ಬೀಳಲಿವೆ ಎಂದು ಪ್ರಗತಿಪರ ರೈತ ಶಿಕ್ಷಣ ತಜ್ಞ ನಿಜಲಿಂಗಪ್ಪ ಬಸೇಗಣ್ಣೆ ಎಚ್ಚರಿಸಿದರು.
ತಾಲೂಕಿನ ಗುಂಡೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೋಟೆಬೆನ್ನೂರು ಕ್ಲಸ್ಟರ್ ಮಟ್ಟದ ಎಫ್‌ಎಲ್‌ಎನ್ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕೊಡಲು ಇನ್ನೇನುಳಿದಿದೆ: ಉಚಿತ ಶಿಕ್ಷಣ, ಬಟ್ಟೆ, ಶೂ, ಪುಸ್ತಕ, ವಿದ್ಯಾರ್ಥಿ ವೇತನ, ಸೈಕಲ್, ಬಿಸಿಯೂಟ, ಸಾಲದ್ದಕ್ಕೆ ಇತ್ತೀಚೆಗೆ ಪೌಷ್ಟಿಕ ಆಹಾರ ನೆಪದಲ್ಲಿ ಮೊಟ್ಟೆ, ಬೇಡದವರಿಗೆ ಬಾಳೆಹಣ್ಣು ಶೇಂಗಾಚಕ್ಕಿ ಸರ್ಕಾರದಿಂದ ಮಕ್ಕಳಿಗೆ ಕೊಡಲು ಇನ್ನೇನುಳಿದಿದೆ..? ಎಂದು ಪ್ರಶ್ನಿಸಿದ ಅವರು, ಅದಾಗ್ಯೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯ ಕುಸಿತಕ್ಕೆ ಕಾರಣ ಹುಡುಕಲು ಶಿಕ್ಷಣ ಇಲಾಖೆಯಿಂದ ಸಾಧ್ಯವಾಗುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.
ಇಲಾಖೆ ಗಂಭಿರವಾಗಿ ಪರಿಗಣಿಸುತ್ತಿಲ್ಲ: ಮಕ್ಕಳ ಸಂಖ್ಯೆ ಇದೇ ರೀತಿ ಇಳಿಮುಖವಾಗುತ್ತಾ ಸಾಗಿದರೆ ಶಾಲೆಗಳು ಅಸ್ತಿತ್ವ ಕಳೆದುಕೊಳ್ಳಲಿವೆ, ಶಾಲೆಗಳು ಕಣ್ಮರೆಯಾದರೆ ದುಬಾರಿ ಹಣ ಕೊಟ್ಟು ಬಡವರಿಗೆ ಶಿಕ್ಷಣ ತೆಗೆದುಕೊಳ್ಳಲು ಸಾಧ್ಯವಿಲ್ಲ ರಾಜ್ಯದ ಒಂದು ಶೈಕ್ಷಣಿಕ ವಾತಾವರಣವೇ ನಾಶವಾಗಲಿದೆ, ಹೀಗಾಗಿ ಶಾಲೆಗಳನ್ನು ಶಿಕ್ಷಕರು ಮತ್ತು ಗ್ರಾಮಸ್ಥರು ಶಾಲೆಗಳನ್ನು ಸಬಲೀಕರಣಗೊಳಿಸಲು ಪ್ರಯತ್ನಿಸಬೇಕು, ರಾಜ್ಯದಲ್ಲಿ ಇದೊಂದು ಗಂಭೀರ ಸಮಸ್ಯೆಯಾಗಿದೆ, ಹೀಗಿದ್ದರೂ ಸಹ ಶಿಕ್ಷಣ ಇಲಾಖೆ ಮಾತ್ರ ಏನೂ ಆಗಿಲ್ಲ ಎನ್ನುವಂತೆ ವರ್ತಿಸುತ್ತಿದೆ ಎಂದರು.ಪಾಠ ಮಾಡಲು ಬಿಡಿ: ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಕರಿಗೆ ಬೋಧನೆಗಿಂತ ಅನ್ಯ ಕಾರ್ಯದ ಒತ್ತಡ ಹೆಚ್ಚಾಗಿದೆ, ಪಾಠ ಮಾಡಲು ಶಿಕ್ಷಕರಿಗೆ ಮುಕ್ತವಾಗಿ ಕೈಬಿಡಬೇಕು, ಜೊತೆಗೆ ಫಲಿತಾಂಶವನ್ನೂ ಸಹ ಅವರಿಂದ ನಿರೀಕ್ಷಿಸಬೇಕು, ಇಲಾಖೆಯಲ್ಲಿ ಎಫ್ ಎಲ್ ಎನ್ ಒಳ್ಳೆಯ ಉಪಕರಣ ಸರ್ಕಾರಿ ಶಾಲೆಗಳಲ್ಲಿ ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಹೊಂದಿರುವ ಮಕ್ಕಳಿಗಾಗಿ ಇರುವಂತಹ ಉಪಕ್ರಮ ಇದಾಗಿದ್ದು, ಕಲಿಕಾ ಹಬ್ಬದಲ್ಲಿ ಆರಂಭಿಕ ಹಂತದ ಮಕ್ಕಳಿಗೆ ಅವಕಾಶ ಮಾಡಿಕೊಡುವ ಪ್ರಯತ್ನವನ್ನು ಶಿಕ್ಷಕರು ಮಾಡಬೇಕಾಗಿದೆ ಎಂದರು.
ವೇದಿಕೆ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ಜಿ. ಕೋಟಿ, ಬಿಸಿಎಮ್ ಇಲಾಖೆ ರಾಘವೇಂದ್ರ ವಿಠಲಕರ್, ಪಿಡಿಓ ಬಸನಗೌಡ ಪಾಟೀಲ, ಕವಿತಾ ಪಾಟೀಲ, ಕರಬಸಪ್ಪ ಆನ್ವೇರಿ, ಮಲ್ಲಿಕಾರ್ಜುನಗೌಡ ಪಾಟೀಲ, ಶ್ರುತಿ ಲಮಾಣಿ, ರಾಜೇಶ್ವರಿ ಡಾವಣಗೇರಿ, ಶಿಲ್ಪಾ ಆನವಟ್ಟಿ, ನೇತ್ರಾವತಿ ಯತ್ನಳ್ಳಿ, ವಿ.ಡಿ.ಅಕ್ಕೂರ, ಸಿ.ಎನ್.ಕರಿಯಪ್ಪನವರ, ಸಿಆರ್ ಪಿ ಯಶವಂತಕುಮಾರ, ಮಂಗಳಾ ಶಿಗ್ಗಾವಿ, ಎನ್.ಬಿ.ಅಬಲೂರು, ಟಿ.ಎಸ್.ಚೈತ್ರಾರಾವ್, ಕೆ.ಎಂ.ಚೈತ್ರ, ಡಿ.ಜಿ. ಕಮದೋಡ, ಟಿ. ಸುನಿತಾ, ಹೊನ್ನಪ್ಪ ತಳವಾರ, ಕೆ.ಎಸ್. ಪಾಟೀಲ, ಮಲ್ಲಪ್ಪ ನೆರ್ತಿ, ಸರೋಜಾ ಎಲಿವಾಳ, ಕೆ.ಯು.ಶಿವಪೂಜಿ ಸೇರಿದಂತೆ ಇನ್ನಿತರರಿದ್ದರು. ಶಿಕ್ಷಕ ಮಲ್ಲಪ್ಪ ಕರೇಣ್ಣನವರ ಕಾರ್ಯಕ್ರಮ ನಿರ್ವಹಿಸಿದರು.