ಸಾರಾಂಶ
ನವಲಗುಂದ:
ಜನರ ಸಮಸ್ಯೆಗಳನ್ನು ಅಧಿಕಾರಿಗಳ ಸಮ್ಮುಖದಲ್ಲೇ ಪರಿಹರಿಸುವ ಹಿತದೃಷ್ಟಿಯಿಂದ ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಧಿಕಾರಿಗಳು ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸಬೇಕೆಂದು ಶಾಸಕ ಎನ್.ಎಚ್. ಕೋನರೆಡ್ಡಿ ಹೇಳಿದರು.ಇಲ್ಲಿನ ಶಿಕ್ಷಕರ ಸಹಕಾರಿ ಕಲ್ಯಾಣ ಕೇಂದ್ರದಲ್ಲಿ ನವಲಗುಂದ, ಅಣ್ಣಿಗೇರಿ ಮತ್ತು ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಹೋಬಳಿ ಸೇರಿದಂತೆ ನವಲಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನರು ಇದ್ದಲ್ಲಿಗೆ ಸರ್ಕಾರದ ಸೇವೆ ತಲುಪಬೇಕು. ಜನರ ಬಳಿಗೆ ಆಡಳಿತ ಹೋಗಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರ ಜನಸ್ಪಂದನ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದರು.ಮಹದಾಯಿ, ಕಳಸಾ-ಬಂಡೂರಿ ಯೋಜನೆಯನ್ನು ಪರಿಸರ ಇಲಾಖೆಯ ಒಪ್ಪಿಗೆ ದೊರೆತ ನಂತರ ಕಾಮಗಾರಿ ಆರಂಭಿಸಲಾಗುವುದು. ಈ ಕುರಿತಂತೆ ಸಂಸದರ ಸಭೆಯಲ್ಲಿ ಕಾಮಗಾರಿ ಆರಂಭಕ್ಕೆ ಅನುಮತಿ ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಲಾಗಿದೆ ಎಂದ ಅವರು, ಈ ಭಾಗದಲ್ಲಿ 239 ಕಿ.ಮೀ. ನಷ್ಟು ಚಕ್ಕಡಿ ರಸ್ತೆ ನಿರ್ಮಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಜನರ ದೂರು, ಅಹವಾಲು ಆಲಿಸಿ, ಸಾಧ್ಯವಾದಷ್ಟು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಮತ್ತು ಉಳಿದವುಗಳನ್ನು ಕಡಿಮೆ ಕಾಲಮಿತಿಯಲ್ಲಿ ಪರಿಹರಿಸಲಾಗುವುದು ಎಂದು ಹೇಳಿದರು.ಇದೇ ವೇಳೆ ಡೆಂಘೀ ಜ್ವರ ನಿಯಂತ್ರಣ ಕುರಿತಾದ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು.
ಜಿಪಂ ಸಿಇಒ ಸ್ವರೂಪಾ ಟಿ.ಕೆ., ಎಸ್ಪಿ ಡಾ. ಗೋಪಾಲ ಬ್ಯಾಕೋಡ್, ತಹಸೀಲ್ದಾರ್‌ರಾದ ಸುಧೀರ ಸಾವಕಾರ, ರಾಜು ಮಾವರಕರ, ತಾಪಂ ಇಒ ಭಾಗ್ಯಶ್ರೀ ಜಹಗೀರದಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಬಿಇಒ ಎಸ್.ಬಿ. ಮಲ್ಲಾಡ ಸ್ವಾಗತಿಸಿದರು. ಸ್ಥಳದಲ್ಲೇ ಸಮಸ್ಯೆಗಳಿಗೆ ಪರಿಹಾರಶಾಲಾ ಕಟ್ಟಡ ದುರಸ್ತಿ, ಅನುಕಂಪ ಆಧಾರದ ಉದ್ಯೋಗ ನೀಡುವಿಕೆ, ಬೆಳೆವಿಮೆ ಪರಿಹಾರ, ವಸತಿ ನಿರ್ಮಾಣ, ಕುಡಿಯುವ ನೀರು, ಶಿಥಿಲ ಶಾಲಾ ಕಟ್ಟಡ, ರಸ್ತೆ ನಿರ್ಮಾಣ, ಶೌಚಾಲಯ, ಒಳಚರಂಡಿ ದುರಸ್ತಿ ಸೇರಿದಂತೆ ಸುಮಾರು 100ಕ್ಕೂ ಅಧಿಕ ಅರ್ಜಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಲ್ಲಿಕೆಯಾಗಿದ್ದವು.
ಕೆಲವು ಅರ್ಜಿಗಳನ್ನು ಶಾಸಕರು, ಜಿಲ್ಲಾಧಿಕಾರಿ ಸ್ಥಳದಲ್ಲೇ ಪರಿಹರಿಸಿದರು. ಉಳಿದ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕೂಡಲೇ ಬಗೆಹರಿಸುವಂತೆ ಸೂಚಿಸಲಾಯಿತು.ರೈತ ಮುಖಂಡ ಸುಭಾಷಗೌಡ ಪಾಟೀಲ, ಕಳಸಾ-ಬಂಡೂರಿ ಯೋಜನೆ ತುರ್ತಾಗಿ ಆರಂಭಿಸಬೇಕು. ಹೊಲಗಳಿಗೆ ತೆರಳುವ ಕಾಲುವೆ ಮೇಲೆ ಸೇತುವೆ, ರಸ್ತೆ ನಿರ್ಮಿಸುವ ಜತೆಗೆ ರೈತರ ಸಮಸ್ಯೆಗಳಿಗೆ ತಾರ್ಕಿಕ ಅಂತ್ಯ ಕಲ್ಪಿಸಬೇಕು ಎಂದು ಅಹವಾಲು ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ಸೇತುವೆ, ರಸ್ತೆ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚಿಸಿದರು.
ಎಂ.ಡಿ. ಕುಲಕರ್ಣಿ ಮಾರುಕಟ್ಟೆಗೆ ತೆರಳುವ ರಸ್ತೆ ನಿರ್ಮಾಣ, ಶಂಕರ ಅಂಬಲಿ, ರೈತ ಸಂಪರ್ಕ ಕೇಂದ್ರ ಸ್ಥಾಪಿಸುವ ಕುರಿತು ಅರ್ಜಿ ಸಲ್ಲಿಸಿದರು. ಪಡಿತರ ಚೀಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ, ಹೊಸ ಪಡಿತರ ಚೀಟಿಗೆ ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂಬ ಸಾರ್ವಜನಿಕರ ಅಹವಾಲಿಗೆ ಆಹಾರ ಇಲಾಖೆ ಅಧಿಕಾರಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿಲ್ಲ ಎಂದು ಉತ್ತರಿಸಿದರು.