ಸರ್ಕಾರ ಮುಸ್ಲಿಂ ಸಮಾಜ ಮುಖ್ಯವಾಹಿನಿಗೆ ತರಲಿ: ಮಹ್ಮದಯೂಸುಫ್‌ ನಮಾಜಿ

| Published : Oct 27 2025, 12:15 AM IST

ಸರ್ಕಾರ ಮುಸ್ಲಿಂ ಸಮಾಜ ಮುಖ್ಯವಾಹಿನಿಗೆ ತರಲಿ: ಮಹ್ಮದಯೂಸುಫ್‌ ನಮಾಜಿ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಸ್ಲಿಂ ಸಮಾಜವನ್ನು ಕೇವಲ ವೋಟ್ ಬ್ಯಾಂಕ್ ಎಂದು ಉಪಯೋಗಿಸಿ ಸಂವಿಧಾನಬದ್ಧ ಯೋಜನೆಗಳನ್ನು ನೀಡುವಲ್ಲಿ ತಾರತಮ್ಮ ನೀತಿಯನ್ನು ಅನುಸರಿಸುತ್ತಿದ್ದಾರೆ.

ಗದಗ: ಮುಸ್ಲಿಂ ಸಮಾಜವನ್ನು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ಕಾರಗಳು ಕೆಲಸ ಮಾಡಬೇಕೆಂದು ಮಹ್ಮದಯೂಸುಫ್‌ ನಮಾಜಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಮುಸ್ಲಿಂ ಸಮಾಜ ವೇದಿಕೆಯ ನೂತನ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಸ್ಲಿಂ ಸಮಾಜವನ್ನು ಕೇವಲ ವೋಟ್ ಬ್ಯಾಂಕ್ ಎಂದು ಉಪಯೋಗಿಸಿ ಸಂವಿಧಾನಬದ್ಧ ಯೋಜನೆಗಳನ್ನು ನೀಡುವಲ್ಲಿ ತಾರತಮ್ಮ ನೀತಿಯನ್ನು ಅನುಸರಿಸುತ್ತಿದ್ದಾರೆ. ಇದನ್ನು ಕೊಡಲೇ ನಿಲ್ಲಿಸಿ ಮುಸ್ಲಿಂ ಸಮಾಜಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಲು ಹಾಗೂ ಮುಸ್ಲಿಂ ಸಮಾಜವನ್ನು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ಕಾರಗಳು ಪ್ರಮಾಣಿಕವಾಗಿ ಕೆಲಸ ಮಾಡಬೇಕೆಂದು ಆಗ್ರಹಿಸಿದರು.

ಇಮ್ತಿಯಾಜ ಆರ್. ಮಾನ್ವಿ ಮಾತನಾಡಿ, ಮುಸ್ಲಿಂ ಸಮಾಜವು ಕೇವಲ ವೋಟ್ ಬ್ಯಾಂಕ್‌ ಅಲ್ಲ, ಈ ಸಮಾಜವು ಒಂದು ರಾಜಕೀಯ ಶಕ್ತಿಯಾಗಿದೆ ಎಂದು ನಮ್ಮ ಜನಪ್ರತಿನಿಧಿಗಳು ತಿಳಿದುಕೊಳ್ಳಬೇಕು. ಮುಸ್ಲಿಂ ಸಮಾಜಕ್ಕೆ ಅಪಮಾನ ಆಗುವ ರೀತಿಯಲ್ಲಿ ಪ್ರತಿನಿತ್ಯ ಕೆಲ ಢೋಂಗಿ ನಾಯಕರು ಕೋಮುವಾದಿಗಳು ಬಹಿರಂಗವಾಗಿ ಹೇಳಿಕೆಗಳನ್ನು ನೀಡಿದರೂ ನಮ್ಮ ಸರ್ಕಾರಗಳು ಕಣ್ಣು ಮುಚ್ಚಿಕೊಂಡು ತಮಾಷೆ ನೋಡುತ್ತಿದ್ದಾರೆ.

ಸಮಾಜದ ವೋಟಿಗಾಗಿ ರಾಜಕೀಯ ದೊಂಬರಾಟ ಆಡುವ ಜನಪ್ರತಿನಿಧಿಗಳು ಸಮಾಜದ ಜನರ ಮೇಲೆ ದಬ್ಬಾಳಿಕೆ ದೌರ್ಜನ್ಯಗಳು ನಡೆಯುತ್ತಿದ್ದರೂ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ಖಂಡನೀಯ. ಹಾಗಾಗಿ ನಮ್ಮ ಸಮಾಜದ ಜನಜಾಗೃತಿಗಾಗಿ ಮತ್ತು ಮುಸ್ಲಿಂ ಸಮಾಜದ ಸಾಮಾಜಿಕ ನ್ಯಾಯ ಹಾಗೂ ಸಂವಿಧಾನಬದ್ಧ ಹಕ್ಕುಗಾಗಿ ಮುಂದಿನ ದಿನಗಳಲ್ಲಿ ನಿರಂತರ ಹೋರಾಟಗಳನ್ನು ನಡೆಸುವ ಉದ್ದೇಶದಿಂದ ಮುಸ್ಲಿಂ ಸಮಾಜದ ವೇದಿಕೆ ಸಂಘಟನೆಯನ್ನು ರಚನೆ ಮಾಡಲಾಗಿದೆ ಎಂದರು.

ಈ ವೇಳೆ ಅಧ್ಯಕ್ಷತೆ ವಹಿಸಿದ್ದ ಅಷ್ಫಾಕಅಲಿ ಹೊಸಳ್ಳಿ ಅವರು, ಸಮಿತಿ ರಚನೆ ಕುರಿತು ಮಾರ್ಗದರ್ಶನ ನೀಡಿದರು. ಮುಸ್ಲಿಂ ಸಮಾಜದ ವೇದಿಕೆ ಅಧ್ಯಕ್ಷರಾಗಿ ಮಹ್ಮದಯೂಸುಫ ನಮಾಜಿ, ಉಪಾಧ್ಯಕ್ಷರಾಗಿ ಅನ್ವರ ಶಿರಹಟ್ಟಿ, ಅಷ್ಫಾಕಅಲಿ ಹೊಸಳ್ಳಿ, ಇಲಿಯಾಸ ಖೈರಾತಿ, ಮೆಹಬೂಬ ಮುಲ್ಲಾ, ಕಾರ್ಯದರ್ಶಿಯಾಗಿ ಇಮ್ತಿಯಾಜ ಆರ್. ಮಾನ್ವಿ, ಸಹ- ಕಾರ್ಯದರ್ಶಿಯಾಗಿ ಸಾಧಿಕ ನರೇಗಲ್ಲ, ಸಂಘಟನಾ ಕಾರ್ಯದರ್ಶಿಯಾಗಿ ಮುಜಫರ ಮುಲ್ಲಾ, ಖಜಾಂಚಿಯಾಗಿ ಮುನ್ನಾ ಶೇಖ, ಮಹ್ಮದ ಶಾಲಗಾರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಾಬಾಜಾನ ಬಳಗಾನೂರ, ಮುಜಮ್ಮಿಲ ಬಳ್ಳಾರಿ, ಉಮರಫಾರುಖ ಹುಬ್ಬಳ್ಳಿ, ರಫೀಕ ಜಮಾಲಖಾನವರ, ಸಮೀರ ಜಮಾದಾರ, ವಾಸೀಮ ಖಾಜಿ, ಅಸ್ಲಂ ಎಸ್.ಜಿ., ಫಯಾಜ ನಮಾಜಿ, ನಾಶೀರ ದೌಲತದಾರ, ಮೌಲಾಸಾಬ ಗಚ್ಚಿ, ನಿಜಾಮುದ್ದಿನ ಕಾತರಕಿ, ಕರೀಮ ಕಲಾದಗಿ, ಸೂಹೇಲ್ ಹರ್ಲಾಪೂರ, ರಜಾಕ ಸೂಡಿ, ಮಕ್ತುಮ ಮುಲ್ಲಾ, ಜೂನಸಾಬ ಉಮಚಗಿ, ಮಹ್ಮದಸಾಬ ಮುಲ್ಲಾ, ಜೂನಸಾಬ ನಮಾಜಿ, ಗೌಸ ರಾಜನಾಳ ಆಯ್ಕೆಯಾಗಿದ್ದಾರೆ.