ಪಾರಂಪರಿಕ ವೈದ್ಯ ಪದ್ಧತಿ ಉಳಿಸಲು ಸರ್ಕಾರ ಗಮನ ಹರಿಸಬೇಕು: ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ

| Published : Jan 08 2024, 01:45 AM IST

ಪಾರಂಪರಿಕ ವೈದ್ಯ ಪದ್ಧತಿ ಉಳಿಸಲು ಸರ್ಕಾರ ಗಮನ ಹರಿಸಬೇಕು: ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಪಾರಂಪರಿಕ ವೈದ್ಯ ಪದ್ಧತಿ ವೈದ್ಯಕೀಯ ಜಗತ್ತಿಗೆ ಮೂಲ ಬೇರಿದ್ದಂತೆ. ಮೂಲ ಬೇರಿಲ್ಲವೆಂದರೆ ಆಧುನಿಕ ಶೈಲಿಗೆ ಬಂದವರೆಲ್ಲರೂ ನಶಿಸಿ ಹೋಗುತ್ತಾರೆ. ಭೂಮಿ ಮೇಲಿರುವ ಪ್ರತಿಯೊಂದು ಗಿಡವೂ ಸಹ ಒಂದಲ್ಲ ಒಂದು ರೀತಿಯ ಔಷಧಿಗೆ ಬಳಕೆಯಾಗುತ್ತದೆ. ನಮ್ಮ ಗಿಡಮೂಲಿಕೆಗಳ ಪ್ರಬೇಧಗಳು ಅಳಿಯಬಾರದು, ಮುಂದಿನ ಪೀಳಿಗೆಗೆ ಅದು ಅನುಕೂಲವಾಗಲಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪಾರಂಪರಿಕ ವೈದ್ಯ ಪದ್ಧತಿ ಉಳಿಸಿ ಬೆಳೆಸಲು ಸರ್ಕಾರ ಆಧುನಿಕತೆಯತ್ತ ಗಮನ ಹರಿಸಬೇಕಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಬಿಜಿಎಸ್ ಸಭಾಭವನದಲ್ಲಿ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್‌ನ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ಪಾರಂಪರಿಕ ವೈದ್ಯರ ಮಾಹಿತಿ ಕೋಶ ಬಿಡುಗಡೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ಪಾರಂಪರಿಕ ವೈದ್ಯ ಪದ್ಧತಿ ವೈದ್ಯಕೀಯ ಜಗತ್ತಿಗೆ ಮೂಲ ಬೇರಿದ್ದಂತೆ. ಮೂಲ ಬೇರಿಲ್ಲವೆಂದರೆ ಆಧುನಿಕ ಶೈಲಿಗೆ ಬಂದವರೆಲ್ಲರೂ ನಶಿಸಿ ಹೋಗುತ್ತಾರೆ. ಭೂಮಿ ಮೇಲಿರುವ ಪ್ರತಿಯೊಂದು ಗಿಡವೂ ಸಹ ಒಂದಲ್ಲ ಒಂದು ರೀತಿಯ ಔಷಧಿಗೆ ಬಳಕೆಯಾಗುತ್ತದೆ. ನಮ್ಮ ಗಿಡಮೂಲಿಕೆಗಳ ಪ್ರಬೇಧಗಳು ಅಳಿಯಬಾರದು, ಮುಂದಿನ ಪೀಳಿಗೆಗೆ ಅದು ಅನುಕೂಲವಾಗಲಿದೆ ಎಂದರು.

ರಾಜ್ಯದ 3 ಸಾವಿರ ಪಾರಂಪರಿಕ ವೈದ್ಯರ ಮಾಹಿತಿ ಕೋಶ ಬಿಡುಗಡೆ ಮಾಡುತ್ತಿರುವುದು ಬಹಳ ಸಂತಸ ತಂದಿದೆ. ಮುಂದಿನ ಜನಾಂಗಕ್ಕಾಗಿ ಇದೊಂದು ದಾಖಲೆಯಾಗಿ ಉಳಿಯಲಿದೆ. ವೈದ್ಯರಿಗೆ ಅನಕೂಲವಾಗಲೆಂದು ಶ್ರೀಮಠವು ಮುಂದಿನ ದಿನಗಳಲ್ಲಿ ಗುರು ಶಿಷ್ಯ ಪರಂಪರೆ ತರಬೇತಿ ಕೇಂದ್ರವನ್ನು ತೆರೆಯುವ ಜೊತೆಗೆ, ಅಪರೂಪದ ಔಷಧಿ ಸಸ್ಯಗಳನ್ನು ಕೂಡ ಸಂರಕ್ಷಿಸಿ ಪೋಷಣೆ ಮಾಡಲಾಗುವುದು ಎಂದರು.

ಪರಿಷತ್‌ನ ಸಂಸ್ಥಾಪಕ ಗಾನಂ ಶ್ರೀಕಂಠಯ್ಯ ಮಾತನಾಡಿ, ಪಾರಂಪರಿಕ ವೈದ್ಯರ ಮಕ್ಕಳಿಗೆ ಸರ್ಕಾರ ಶೇ.2ರಷ್ಟು ಮೀಸಲಾತಿ ನೀಡಿದ್ದು ಕೇವಲ ಎರಡು ಸ್ಥಾನಗಳನ್ನು ವೈದ್ಯರ ಮಕ್ಕಳಿಗೆ ನೀಡಲಾಗುತ್ತಿದೆ. ಇದರ ಬಗ್ಗೆ ಪರಿಷತ್ ಹೋರಾಟ ನಡೆಸಿ ತಮ್ಮ ಹಕ್ಕು ಪಡೆಯಬೇಕಿದೆ ಎಂದರು.

ಪರಿಷತ್‌ನ ರಾಜ್ಯಪ್ರಧಾನ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ಮಾತನಾಡಿ, ಪಾರಂಪರಿಕ ವೈದ್ಯ ಪರಿಷತ್ ಅಸ್ತಿತ್ವಕ್ಕೆ ಬಂದು ಈಗಾಗಲೇ24 ವರ್ಷ ಕಳೆದಿದೆ. ಮುಂದಿನ ವರ್ಷ ಬೆಳ್ಳಿ ಮಹೋತ್ಸವ ಸಮಾರಂಭವನ್ನು ಆದಿಚುಂಚನಗಿರಿ ಕ್ಷೇತ್ರದಲ್ಲಿಯೇ ಆಚರಿಸಲಾಗುವುದು ಎಂದರು.

ಮಾಹಿತಿ ಕೋಶದ ಸಂಪಾದಕ ನೇರ್ಲಿಗೆ ಗುರುಸಿದ್ದಪ್ಪ ಮಾತನಾಡಿ, ರಾಜ್ಯ ಪಾರಂಪರಿಕ ವೈದ್ಯರ ಜ್ಞಾನವು ಒಂದು ಗ್ರಂಥವಾಗಿ ಉಳಿಯಬೇಕೆಂಬ ಆಶಯದಿಂದ ಪರಿಷತ್ ವತಿಯಿಂದ ಮಾಹಿತಿ ಕೋಶವನ್ನು ಮಾಡಲಾಗಿದೆ. ಇದರ ಸದುಪಯೋಗವನ್ನು ಒಂದು ಗ್ರಂಥದ ರೂಪದಲ್ಲಿ ತಮ್ಮ ಮನೆಯಲ್ಲಿ ಇರಿಸಿಕೊಳ್ಳಬೇಕೆಂದು ಪಾರಂಪರಿಕ ವೈದ್ಯರಿಗೆ ಸಲಹೆ ನೀಡಿದರು.

ಈ ವೇಳೆ ಪರಿಷತ್‌ನ ಗೌರವಾಧ್ಯಕ್ಷ ಹಾಗೂ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಸಂಸ್ಥಾಪಕರಾದ ಗಾನಂ ಶ್ರೀಕಂಠಯ್ಯ, ಪ್ರೊ.ಹರಿರಾಮ್‌ಮೂರ್ತಿ, ನೀರಜಾಕ್ಷಿ, ಪರಿಷತ್ ಅಧ್ಯಕ್ಷ ಜಿ.ಮಹದೇವಯ್ಯ, ನಿಕಟಪೂರ್ವ ಅಧ್ಯಕ್ಷ ನೇರ್ಲಿಗೆ ಗುರುಸಿದ್ದಪ್ಪ, ರಾಜ್ಯ ಪ್ರಧಾನಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ, ಉಪಾಧ್ಯಕ್ಷ ವೈದ್ಯ ಬಸವರಾಜ್ ಅಂಬಿಕೆರೆ, ಖಜಾಂಚಿ ಶಿವಾನಂದ ಜಂಗಿನಮಠ, ಕೇಂದ್ರ ಸಂಭವನೀಯ ಅಧ್ಯಕ್ಷ ವೈದ್ಯರತ್ನ ಗೋಪಾಲಕೃಷ್ಣ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಶಂಕರಪ್ಪ, ವೀರಣ್ಣ, ಜಯರಾಮರಾವ್, ಉಮಾದೇವಿ ಸೇರಿದಂತೆ ಹಲವರಿದ್ದರು.