ಇಂದು ಬೀದರ್‌ನಲ್ಲಿ ಮೋದಿ ಟ್ರೋಫಿ ಕ್ರಿಕೆಟ್ ಸಮಾರೋಪ

| Published : Jan 08 2024, 01:45 AM IST

ಸಾರಾಂಶ

ವಿನ್ನರ್‌ ತಂಡಕ್ಕೆ ₹1 ಲಕ್ಷ, ಟ್ರೋಫಿ, ರನ್ನರ್‌ ತಂಡಕ್ಕೆ ₹50 ಸಾವಿರ ಬಹುಮಾನ ವಿತರಣೆ. ವಿವಿಧ ರಾಜಕೀಯ ಮುಖಂಡರು, ಗಣ್ಯರು ಭಾಗಿಯಾಗಲಿದ್ದಾರೆ ಎಂದು ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಬಾಬು ವಾಲಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೀದರ್

ಮೋದಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಅಂತಿಮ (ಫೈನಲ್) ಪಂದ್ಯವು ಬೀದರ್‌ ನಗರದ ನೆಹರು ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ ಜರುಗಲಿದೆ ಎಂದು ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಬಾಬು ವಾಲಿ ತಿಳಿಸಿದ್ದಾರೆ.

ವಿನ್ನರ್ ತಂಡಕ್ಕೆ 1 ಲಕ್ಷ ರುಪಾಯಿ ಬಹುಮಾನ ಹಾಗೂ ಟ್ರೋಫಿ, ರನ್ನರ್‌ ತಂಡಕ್ಕೆ 50 ಸಾವಿರ ರುಪಾಯಿ ಬಹುಮಾನ ಹಾಗೂ ಟ್ರೋಫಿ, ಮ್ಯಾನ್ ಆಪ್ ದಿ ಮ್ಯಾಚ್, ಬೆಸ್ಟ್ ಬ್ಯಾಟ್ಸಮನ್, ಬೆಸ್ಟ್ ಬಾಲರ್, ಮ್ಯಾನ್ ಆಫ್ ದಿ ಸಿರಿಸ್ ಸೇರಿದಂತೆ ವಿವಿಧ ವಿಭಾಗದಲ್ಲಿ ಉತ್ತಮ ಸಾಧನೆಗೈದ ಸಾಧಕರಿಗೆ ಪ್ರತ್ಯೇಕವಾಗಿ ಪ್ರಶಸ್ತಿಗಳನ್ನು ಕೂಡ ನಿಡಲಾಗುತ್ತಿದೆ.

ಗಣ್ಯರ ಆಗಮನ: ಸಮಾರಂಭಕ್ಕೆ ಔರಾದ್‌ ಶಾಸಕ ಪ್ರಭು ಚವ್ಹಾಣ್‌, ಬಸವಕಲ್ಯಾಣ ಶಾಸಕ ಶರಣು ಸಲಗರ, ಬೀದರ್‌ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಹುಮನಬಾದ ಶಾಸಕ ಡಾ.ಸಿದ್ದು ಪಾಟೀಲ, ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯರಾದ ರಘುನಾಥ ಮಲ್ಕಾಪುರೆ, ಮಾಜಿ ಶಾಸಕ ಸುಭಾಷ ಕಲ್ಲೂರ, ಸುಭಾಷ ಗುತ್ತೆದಾರ ಸೇರಿದಂತೆ ಅನೇಕ ಗಣ್ಯರು ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಅಟಲ್ ಫೌಂಡೇಶನ್ ಅಧ್ಯಕ್ಷರಾದ ಗುರುನಾಥ ಕೊಳ್ಳುರು ತಿಳಿಸಿದ್ದಾರೆ.

ಬೀದರ್‌ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಪ್ರಯುಕ್ತ ಅಟಲ್ ಫೌಂಡೇಶನ್ ಅಧ್ಯಕ್ಷರು ಹಾಗೂ ಬಿಜೆಪಿ ಹಿರಿಯ ಮುಖಂಡರಾದ ಗುರುನಾಥ ಕೊಳ್ಳುರ ನೇತೃತ್ವದಲ್ಲಿ ಬೀದರ್‌ ಕ್ರಿಕೆಟ್ ಅಸೋಸಿಯೇಷನ್ ಸಹಯೋಗದೊಂದಿಗೆ ಖೇಲ್ ಬಿ ಜೀತೊ ದೀಲ್ ಬಿ ಜೀತೊ ಎಂಬ ಘೋಷವಾಕ್ಯದಡಿಯಲ್ಲಿ ಡಿ.25ರಿಂದ 30ರವರೆಗೆ ಆಯೋಜಿಸಲಾಗಿತ್ತು.

ಶನಿವಾರ ಒಟ್ಟು 3 ಪಂದ್ಯಗಳು ನಡೆದಿದ್ದು, ಭಾನುವಾರ ನಾಲ್ಕು ಪಂದ್ಯಗಳು ಜರುಗಲಿದೆ. ಕೊನೆ ದಿವಸ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಜರುಗಲಿವೆ. ಶನಿವಾರ ನಡೆದ ಪಂದ್ಯದಲ್ಲಿ ಶ್ರೇಯಶ್ರೀ ತಂಡದ ಪ್ರವೀಣ ಕಟ್ಟೆ, ಸಂಗೋಳಗಿ ತಾಂಡಾದ ಸಚಿನ್, ಮತ್ತು ಆಳಂದ ತಂಡದ ಎಮ್.ಡಿ ಮೋಸಿನ್ ಅವರು ಮ್ಯಾನ್ ಆಪ್ ದಿ ಮ್ಯಾಚ್ ಪಡೆದುಕೊಂಡಿದ್ದಾರೆ.

ರಾಜ್ಯದಲ್ಲಿ 5ನೇ ಬಾರಿಗೆ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಜರುಗುತ್ತಿದೆ. ಬೀದರ್‌ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಅತ್ಯುತ್ತಮ ವ್ಯವಸ್ಥೆಯನ್ನೊಳಗೊಂಡ ಹೊನಲು ಬೆಳಕಿನ ಡೇ ಅಂಡ್ ನೈಟ್ ಮ್ಯಾಚ್ ನೆಹರು ಕ್ರೀಡಾಂಗಣದಲ್ಲಿ ನಡೆಯುತ್ತಿರುವುದು ವಿಶೇಷ. ಪ್ರೇಕ್ಷಕರಿಗೆ ಯಾವುದೆ ಶುಲ್ಕವಿಲ್ಲ, ಸಂಪೂರ್ಣ ಉಚಿತವಾಗಿದೆ. ಜಿಲ್ಲೆಯ ಕ್ರಿಕೆಟ್ ಅಭಿಮಾನಿಗಳು ಸೇರಿದಂತೆ ಸಾರ್ವಜನಿಕರು ವಿಶೇಷವಾಗಿ ಸಂಘ ಸಂಸ್ಥೆಗಳು, ಯುವಕ ಸಂಘಗಳು ಮತ್ತು ಶಾಲಾ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು ತಮ್ಮ ಮಕ್ಕಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಟಗಾರರಿಗೆ ಪ್ರೋತ್ಸಾಹಿಸಬೇಕೆಂದು ಬಾಬು ವಾಲಿ ಕೋರಿದ್ದಾರೆ.