ಲ್ಲಿನ ಪರಿಸ್ಥಿತಿ ಭವಿಷ್ಯದಲ್ಲಿ ಕೊಪ್ಪಳಕ್ಕೆ ಬರಬಾರದು ಎಂದಾದರೆ ಬಲ್ಡೋಟ ಕಾರ್ಖಾನೆ ವಿಸ್ತರಣೆಯಾಗದಂತೆ ನೋಡಿಕೊಳ್ಳಬೇಕು

ಕೊಪ್ಪಳ: ಕೊಪ್ಪಳ ಮತ್ತು ಭಾಗ್ಯನಗರ ಒಳಗೊಂಡು ಒಂದೂವರೆ ಲಕ್ಷ ಜನರ ಆರೋಗ್ಯ,ಜೀವ ರಕ್ಷಣೆ ಮಾಡುವುದನ್ನು ಸರ್ಕಾರ ಕಡೆಗಣಿಸಬಾರದು ಎಂದು ಲೆಕ್ಕ ಪರಿಶೋಧಕ ಚಂದ್ರಕಾಂತ ತಾಲೇಡಾ ಸರ್ಕಾರವನ್ನು ಆಗ್ರಹಿಸಿದರು.

ವಿವಿಧ ಕಾರ್ಖಾನೆಗಳ ಸ್ಥಾಪನೆ ಮತ್ತು ವಿಸ್ತರಣೆ ವಿರೋಧಿಸಿ ಕೊಪ್ಪಳ ನಗರಸಭೆ ಬಳಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ 97 ನೇ ದಿನದವಾದ ಬುಧವಾರ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾರ್ಖಾನೆಗಳಿಂದ ಬಾಧಿತ 20 ಹಳ್ಳಿಯ ಐವತ್ತು ಸಾವಿರ ಜನರ ಆರೋಗ್ಯ ಕಾರ್ಖಾನೆಗಳಿಂದ ಮಾಲಿನ್ಯದ ದುಷ್ಪರಿಣಾಮದಿಂದ ಸರಣಿ ಸಾವಿಗೀಡಾಗುತ್ತಿದ್ದಾರೆ. ಅಲ್ಲಿನ ಪರಿಸ್ಥಿತಿ ಭವಿಷ್ಯದಲ್ಲಿ ಕೊಪ್ಪಳಕ್ಕೆ ಬರಬಾರದು ಎಂದಾದರೆ ಬಲ್ಡೋಟ ಕಾರ್ಖಾನೆ ವಿಸ್ತರಣೆಯಾಗದಂತೆ ನೋಡಿಕೊಳ್ಳಬೇಕು. ಆಗ ಮಾತ್ರ ನಮ್ಮ ಮುಂದಿನ ಪೀಳಿಗೆ ಆರೋಗ್ಯದಿಂದಿರಲು ಸಾಧ್ಯ. ಕ್ಯಾನ್ಸರ್ ರೋಗ ಈ ಬಾಧಿತ ಹಳ್ಳಿಯ ಜನರಿಗೆ ಸಾಮಾನ್ಯವಾಗುತ್ತಿದೆ. ಇದರ ಅಪಾಯದ ಎಚ್ಚರಿಕೆ ಇಟ್ಟುಕೊಳ್ಳೋಣ ಎಂದರು.

ಹೋರಾಟದಲ್ಲಿ ಪಾಲ್ಗೊಂಡಿದ್ದ ಮತ್ತೊಬ್ಬ ಲೆಕ್ಕ ಪರಿಶೋಧಕ ಬಸವಪ್ರಭು ಶೆಟ್ಟರ್ ಮಾತನಾಡಿ, ನಾನು ಬರಿ ಲೆಕ್ಕಪರಿಶೋಧಕನಲ್ಲ. ನನಗೂ ಭೂಮಿ ಇದೆ.ಆ ಬೆಳೆ ಈ ಕಾರ್ಖಾನೆಗಳ ಧೂಳಿನಿಂದ ಇಳುವರಿ ಕುಂಠಿತವಾಗುತ್ತದೆ. ಇದನ್ನು ಕೇವಲ ಸಾಮಾನ್ಯ ಮಾಲಿನ್ಯವೆಂದು ಅಂದುಕೊಳ್ಳಬಾರದು. ಜೀವ ತೆಗೆಯುವ ಮಟ್ಟದಲ್ಲಿ ಇರುವ ಈ ಕಾರ್ಖಾನೆ ಯಾರೂ ಸಹಿಸಿಕೊಳ್ಳಬಾರದು.ಲಕ್ಷಗಟ್ಟಲೆ ಜೀವಗಳಿಗೆ ಸಂಚಕಾರ ತರುವ ಯಾವುದೇ ಕಾರ್ಖಾನೆ ಇಲ್ಲಿ ತಳವೂರಲು ಬಿಡಬಾರದು. ಸರ್ಕಾರ ಶೀಘ್ರ ನಿರ್ಣಯ ಮಾಡಿ ಜನರ ಆತಂಕ ದೂರ ಮಾಡಬೇಕು ಎಂದು ಆಗ್ರಹಿಸಿದರು.

ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು,ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಮಂಜುನಾಥ ಜಿ.ಗೊಂಡಬಾಳ, ಶರಣು ಗಡ್ಡಿ, ಶರಣು ಶೆಟ್ಟರ್, ಪುಟ್ಟರಾಜ ಪಾಟೀಲ್, ದ್ಯಾಮಣ್ಣ ಚಲುವಾಡಗಿ, ಎಸ್.ಬಿ. ರಾಜೂರು,ಗಂಗಾಧರ ಖಾನಾಪುರ, ಹುಲುಗಪ್ಪ ಕಟ್ಟಿಮನಿ, ಎಂ.ಎಸ್.ಬೀರಲದಿನ್ನಿ, ಮೂಕಪ್ಪ ಮೇಸ್ತ್ರಿ ಬಸಾಪುರ, ರಟ್ಟಿ ಸಾಬ್, ಎಂ.ಕೆ.ಸಾಹೇಬ್, ಶಿವಪ್ಪ ಜಲ್ಲಿ, ವಿಜಯ ಮಹಾಂತೇಶ ಹಟ್ಟಿ,ವೀರಣ್ಣ ಹುರಕಡ್ಲಿ, ಸಿಬಿ ಪಾಟೀಲ್, ಕಾಶಪ್ಪ ಚಲವಾದಿ, ಮಹಾದೇವಪ್ಪ ಮಾವಿನಮಡು, ಚಿದಾನಂದಪ್ಪ ಹಡಪದ, ರಾಜಶೇಖರ ಏಳುಬಾವಿ, ಮಂಗಳೇಶ ರಾಠೋಡ್, ಮುಸ್ತಫಾ ಹಗಲುದಿವಟಿಗಿ, ಅಕ್ಬರ್, ಕೆ ಈಶ್ವರಪ್ಪ, ರತ್ನಮ್ಮ ದೊಡ್ಡಮನಿ, ಗಂಗಮ್ಮ ಮುಂಡರಗಿ, ಮಖಬೂಲ್ ರಾಯಚೂರು ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.