ಸಾರಾಂಶ
- ಹೌಸಿಂಗ್ ಬೋರ್ಡು ಕಾಲೋನಿಯ ನ.ರಾ.ಪುರ- 5 ಅಂಗನವಾಡಿಯಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಸರ್ಕಾರ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಗೌರವ ಧನಕ್ಕಿಂತ ಸಂಬಳ ನಿಗದಿ ಮಾಡಿ ಪ್ರತಿ ತಿಂಗಳು ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದ ಸಲಹೆ ನೀಡಿದರು.
ಶುಕ್ರವಾರ ಪಟ್ಟಣದ ಹೌಸಿಂಗ್ ಬೋರ್ಡು ಕಾಲೋನಿ ನ.ರಾ.ಪುರ-5 ಅಂಗನವಾಡಿಯಲ್ಲಿ ಪೋಷಣ್ ಅಭಿಯಾನ ಉದ್ಘಾಟಿಸಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಈ ವರ್ಷ 50 ವರ್ಷ ತುಂಬಲಿದ್ದು ಸಿದ್ದ ರಾಮಯ್ಯ ಸರ್ಕಾರ ಈ ಸವಿ ನೆನಪಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ಜಾಸ್ತಿ ಮಾಡಬೇಕು. ಹಿತ್ತಲ ಗಿಡ ಮದ್ದಲ್ಲ ಎಂಬಂತೆ ನಮ್ಮ ಮನೆ, ತೋಟದ ಆವರಣದಲ್ಲಿ ಸಿಗುವ ಹಣ್ಣುಗಳಲ್ಲಿ ಇರುವ ಪೌಷ್ಟಿಕಾಂಶ ಉಪಯೋಗಿಸಿಕೊಳ್ಳಬೇಕು.ಈ ಅಂಗನವಾಡಿ ಮುಂಭಾಗದಲ್ಲಿ ಸೀಟು ಹಾಕಿಸಬೇಕು ಎಂದು ಬೇಡಿಕೆ ಇಟ್ಟಿದ್ದು ಮುಂದಿನ ದಿನಗಳಲ್ಲಿ ಗಮನ ಹರಿಸಲಾಗುವುದು. ಈಗಾಗಲೇ ಹಲವಾರು ಅಂಗನವಾಡಿ ಕಟ್ಟಡಗಳ ಅಭಿವೃದ್ಧಿ ಮಾಡಿದ್ದು, ಮುಂದೆ ದುರಸ್ಥಿ ಮಾಡಬೇಕಾದ ಅಂಗನವಾಡಿಗಳ ಪಟ್ಟಿ ಮಾಡಲಾಗಿದೆ ಎಂದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ನ.ರಾ.ಪುರ ವಲಯ ಮೇಲ್ವೀಚಾರಕಿ ಸಾವಿತ್ರಿ ಮಾತನಾಡಿ, 2018-19 ನೇ ಸಾಲಿನಿಂದ ಕೇಂದ್ರ ಸರ್ಕಾರ ಪ್ರತಿ ವರ್ಷ ಸೆ.1 ರಿಂದ 30 ರ ವರೆಗೆ ಪೋಷಣ್ ಅಭಿಯಾನ ಹಮ್ಮಿಕೊಳ್ಳುತ್ತಿದೆ. ಈ ವರ್ಷ ಸೆ.12 ರಿಂದ ಅ.12 ರವರೆಗೆ ಅಭಿಯಾನ ಹಮ್ಮಿಕೊಳ್ಳುಗುತ್ತಿದೆ. ಗರ್ಬಿಣಿ, ಬಾಣಂತಿಯರು ಮತ್ತು ಮಕ್ಕಳು ಪೌಷ್ಠಿಕ ಆಹಾರ ಸೇವಿಸಿ ಆರೋಗ್ಯವಂತರಾಗಿರಬೇಕು ಎಂಬುದೇ ಇದರ ಉದ್ದೇಶ. ನಮ್ಮ ಮನೆಗಳ ಹಿತ್ತಲು, ತೋಟಗಳಲ್ಲಿ ಪಪ್ಪಾಯಿ, ಬಸಲೆ ಸೊಪ್ಪು,ನುಗ್ಗೆ ಸೊಪ್ಪು ಸಿಗಲಿದೆ. ನುಗ್ಗೆ ಸೊಪ್ಪಿನಲ್ಲಿ ಕಬ್ಬಿಣದ ಅಂಶ ಇದೆ. ವಾರದಲ್ಲಿ 5 ದಿನ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತದೆ ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದರ್ಶನ್ ಮಾಹಿತಿ ನೀಡಿ, ದೇಶದಲ್ಲಿ ಅಪೌಷ್ಠಿಕತೆ ಮುಕ್ತ ದೇಶವನ್ನಾಗಿ ಮಾಡಬೇಕು ಎಂಬುದೇ ಪೋಷಣ್ ಅಭಿಯಾನದ ಗುರಿ. ತಾಯಿ, ಶಿಶು ಮರಣ ಶೂನ್ಯಕ್ಕೆ ಇಳಿಸಬೇಕಾಗಿದೆ. ನಮ್ಮ ಸುತ್ತ ಮುತ್ತ ಇರುವ ವಸ್ತು ಬಳಸಿ ಪೌಷ್ಠಿಕ ಆಹಾರ ತಯಾರಿಸಬಹುದು. ಕಂಚಿ ಕಾಯಿಯಲ್ಲಿ ವಿಟವಿನ್ ಸಿ ಅಂಶ ಇದೆ. ಮಗುವಿಗೆ ಬಿಸಿಲು ತಾಗಿಸಿದರೆ ವಿಟವಿನ್ ಡಿ ಅಂಶ ಸಿಗಲಿದೆ.ಹಳದಿ ಬಣ್ಣ ಇರುವ ಪಪ್ಪಾಯಿ, ಕ್ಯಾರೆಟ್, ಮಾವಿನ ಹಣ್ಣಿನಲ್ಲಿ ಎ ವಿಟವಿನ್ ಸಿಗಲಿದೆ ಎಂದರು.ಪಪಂ ಸದಸ್ಯೆ ಸುರೈಯಾಭಾನು, ಸಿಡಿಪಿಓ ಇಲಾಖೆ ಮುತ್ತಿನಕೊಪ್ಪ ವಲಯದ ಮೇಲ್ವಿಚಾರಕಿ ಕಾವ್ಯ, ಪೋಷಣ್ ಅಭಿಯಾನ ಸಂಯೋಜಕ ಪ್ರದೀಪ್, ಹಿರಿಯ ಕ್ಷಯ ರೋಗ ಚಿಕಿತ್ಸಾ ಮೇಲ್ವೀಚಾರಕ ಪವನ್ ಕರ್, ಆರೋಗ್ಯ ಇಲಾಖೆ ಸುಹಾಸ್, ಸಿಸ್ಟರ್ ಸುಪ್ರೀತ, ಹೌಸಿಂಗ್ ಬೋರ್ಡು ಕಾಲೋನಿಯ ಅಂಗನವಾಡಿ ಕಾರ್ಯಕರ್ತೆ ಮಂಜುಳಾ, ಸಹಾಯಕಿ ನಿರ್ಮಲ, ಅಂಗನವಾಡಿ ಕಾರ್ಯಕರ್ತೆಯರಾದ ರಮ, ಶಿವರತ್ನ, ಅನಿತಾ, ಶೈಲಾ,ಕವಿತ,ಲಕ್ಷ್ಮೀದೇವಿ, ಆಶಾ, ಮಧು ಮಾಲತಿ, ಉಷಾ,ಸೌಮ್ಯ,ಶಾಂತ, ಪೂರ್ಣಿಮ, ಆಶಾ ಕಾರ್ಯಕರ್ತೆ ಶಿಲ್ಪ ಹಾಗೂ ಗರ್ಣಿಣಿಯರು, ಬಾಣಂತಿಯರು,ಪೋಷಕರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಿಂದ ಪೌಷ್ಠಿಕ ಆಹಾರ ಸೇವನೆಯ ಪರಿಣಾಮದ ಬಗ್ಗೆ ಸಾಕ್ಷ ಚಿತ್ರವನ್ನು ಪ್ರದರ್ಶಿಸಲಾಯಿತು. ಪೌಷ್ಠಿಕ ಆಹಾರದ ಪ್ರದರ್ಶನ ಏರ್ಪಡಿಸಲಾಗಿತ್ತು.