ಸರ್ಕಾರ ಈ ಬಗ್ಗೆ ತುರ್ತು ಗಮನ ಹರಿಸಿ ರೈತರ ಸಹಾಯಕ್ಕೆ ಬೆಂಬಲವಾಗಿ ನಿಲ್ಲಬೇಕು

ಕೊಟ್ಟೂರು: ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಳೆ ಸಿಗದೆ ವ್ಯವಸಾಯದಿಂದ ವಿಮುಖರಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ಈ ಬಗ್ಗೆ ತುರ್ತು ಗಮನ ಹರಿಸಿ ರೈತರ ಸಹಾಯಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಹೇಳಿದರು.

ತಾಲೂಕಿನ ಗಾಣಗಟ್ಟೆ ಗ್ರಾಮದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ನಾಮಫಲಕ ಅನಾವರಣಗೊಳಿಸುವ ಮೂಲಕ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದರು.

ರೈತರನ್ನು ಮಾರುಕಟ್ಟೆಯಲ್ಲಿ ವರ್ತಕರು ಮತ್ತು ದಾಲ್ಲಾಳಿಗಳು ವಂಚಿಸುತ್ತ ಬಂದಿದ್ದಾರೆ. ಬ್ಯಾಂಕಿನವರೂ ರೈತರಿಗೆ ಮೋಸ, ಕಿರುಕುಳ ನೀಡುತ್ತಿದ್ದು ಶೋಷಣೆಯಿಂದ ರೈತ ಮತ್ತಷ್ಟು ಸಾಲಗಾರ ಆಗುವಂತಾಗಿದೆ. ಬಹುರಾಷ್ಟ್ರೀಯ ಕಂಪನಿಗಳು ರೈತರ ಬೀಜ ಉತ್ಪಾದನೆ ಹಕ್ಕನ್ನು ಕಿತ್ತುಕೊಂಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಡಂಕಲ್ ಪ್ರಸ್ತಾವಣೆಗೆ ಸಹಿ ಹಾಕುವ ಮೂಲಕ ಅಮೆರಿಕ ದೇಶದ ಕಂಪನಿಗಾಗಿ ದೇಶವನ್ನು ಒತ್ತೆ ಇಡುತ್ತಿದ್ದಾರೆ ಈ ಎಲ್ಲ ಬೆಳವಣಿಗೆ ವಿರುದ್ಧ ರೈತರು ಒಂದಾಗಿ ಹೋರಾಟ ನಡೆಸುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಕಾರ್ಯ ಮಾಡಬೇಕು. ಇದಕ್ಕೆಂದೆ ಪ್ರತಿ ಹಳ್ಳಿಗಳಲ್ಲಿ ರೈತ ಸಂಘಟನೆಗೆ ಶಕ್ತಿ ನೀಡಿ ಹೋರಾಟಕ್ಕೆ ಕರೆ ನೀಡಲಾಗುತ್ತಿದೆ ಎಂದರು.

ಗ್ರಾಮ ಘಟಕದ ಅಧ್ಯಕ್ಷ ಎಂ. ರವಿ, ಕೊಟ್ಟೂರು ತಾಲೂಕು ಅಧ್ಯಕ್ಷ ಮಹಂತೇಶ್, ವಿಜಯನಗರ ಜಿಲ್ಲಾಧ್ಯಕ್ಷ ಬಣಕಾರ ಬಸವರಾಜಪ್ಪ, ಬಳ್ಳಾರಿ ಜಿಲ್ಲಾ ಅಧ್ಯಕ್ಷ ಡಿ. ದೇವೇಂದ್ರಪ್ಪ, ಶಾಂತನಹಳ್ಳಿ ಚಂದ್ರಯ್ಯ ಸ್ವಾಮಿ, ಮಾರಪ್ಪ, ಎ.ಎಂ. ಜಗದೀಶ್, ಬಸವರಾಜ, ಮಾರೇಶ, ಮಹಾಂತೇಶ, ಗುರುಲಿಂಗಪ್ಪ, ಹನುಮಂತಪ್ಪ, ಶಾಂತಪ್ಪ, ವೀರಭದ್ರಪ್ಪ ಮತ್ತಿತರರ ರೈತ ನಾಯಕರು ಮತ್ತು ಕಾರ್ಯಕರ್ತರು ಇದ್ದರು .