ರೈತರಿಗೆ ಇಂದು ಅನೇಕ ಸಂಕಷ್ಟಗಳು ಎದುರಾಗುತ್ತಿವೆ. ರೈತರಿಗೆ ಭದ್ರತೆ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಮತ್ತು ಸಮಾಜ ರೈತರ ಬೆಂಬಲಕ್ಕೆ ನಿಂತರೆ ಮಾತ್ರ ರೈತರ ಬಾಳು ಹಸನಾಗಲು ಸಾಧ್ಯ.

ಸಿದ್ದಾಪುರ: ಭೂಮಿಯ ಮೇಲೆ ವಾಸಿಸುವ ನಿಜವಾದ ದೇವರು ರೈತರು. ರೈತರು ಬೆಳೆ ಬೆಳೆಯುವುದನ್ನು ನಿಲ್ಲಿಸಿದರೆ ನಾವು ಯಾವುದೇ ಚಟುವಟಿಕೆ ನಡೆಸಲು ಸಾಧ್ಯವಿಲ್ಲ ಎಂದು ಹೊಸನಗರ ನಾರಾಯಣಗುರು ಮಹಾ ಸಂಸ್ಥಾನ ಗರ್ತಿಗೆರೆಯ ರೇಣುಕಾನಂದ ಸ್ವಾಮೀಜಿ ಹೇಳಿದರು.ಪಟ್ಟಣದ ನೆಹರು ಮೈದಾನದಲ್ಲಿ ಕೃಷಿಕ ಸಮಾಜ ಸಿದ್ದಾಪುರ, ರಾಜರತ್ನ ಇವೆಂಟ್ಸ್ ಸಾಗರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಿದ್ದಾಪುರ, ಅಮರ ಪುನೀತ ಕನ್ನಡ ಕಲಾ ವೇದಿಕೆ ಸಿದ್ದಾಪುರ, ನಿವೃತ್ತ ನೌಕರರ ಸಂಘ ಸಿದ್ದಾಪುರ ಮತ್ತು ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡ ಸಿದ್ದಾಪುರ ಸುಗ್ಗಿ ಸಂಭ್ರಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ರೈತರಿಗೆ ಇಂದು ಅನೇಕ ಸಂಕಷ್ಟಗಳು ಎದುರಾಗುತ್ತಿವೆ. ರೈತರಿಗೆ ಭದ್ರತೆ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಮತ್ತು ಸಮಾಜ ರೈತರ ಬೆಂಬಲಕ್ಕೆ ನಿಂತರೆ ಮಾತ್ರ ರೈತರ ಬಾಳು ಹಸನಾಗಲು ಸಾಧ್ಯ. ಎಲ್ಲ ಚುನಾಯಿತ ಪ್ರತಿನಿಧಿಗಳು ಉಳಿದ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಾರೆ. ಆದರೆ ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಹಿಂದೇಟು ಹಾಕುತ್ತಾರೆ. ಸರ್ಕಾರ ಹೆಚ್ಚೆಚ್ಚು ರೈತರ ಬೆಂಬಲಕ್ಕೆ ನಿಲ್ಲುವಂತಾಗಬೇಕು. ಕಸ್ತೂರಿರಂಗನ್ ವರದಿಯ ಸಮಸ್ಯೆಗೆ ಭೀಮಣ್ಣ ನಾಯ್ಕ ಅವರ ಕಾಲದಲ್ಲಿ ಸೂಕ್ತ ಪರಿಹಾರ ಸಿಗುವಂತಾಗಲಿ ಎಂದರು.

ಶಾಸಕ ಭೀಮಣ್ಣ ನಾಯ್ಕ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ರೈತರಿಗೆ ಇನ್ನೂ ಹೆಚ್ಚಿನ ಸಹಾಯ ಮಾಡುವ ಅನಿವಾರ್ಯತೆ ಇದೆ. ರೈತರು ಹಲವು ಸಂಕಷ್ಟಗಳನ್ನು ಎದುರಿಸಿ ಬೆಳೆ ಬೆಳೆದರೂ ಸರಿಯಾದ ಬೆಲೆ ಸಿಗುತ್ತಿಲ್ಲ. ಹೊರರಾಷ್ಟ್ರಗಳಿಂದ ಅಡಕೆ ಆಮದನ್ನು ಸಂಪೂರ್ಣವಾಗಿ ನಿಲ್ಲಿಸಿದರೆ ಮಾತ್ರ ಅಡಕೆಗೆ ಸ್ಥಿರವಾದ ಧಾರಣೆ ಸಿಗಲು ಸಾಧ್ಯ ಎಂದರು.

ಅತಿಕ್ರಮಣ ಇನ್ನೊಂದು ಸಮಸ್ಯೆಯಾಗಿದೆ. ರೈತರು ತಮ್ಮ ಮೋಜಿಗಾಗಿ ಅತಿಕ್ರಮಣ ಮಾಡುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಕಾಡುಪ್ರಾಣಿಗಳ ಹಾವಳಿಂದ ರೈತರು ಬೆಳೆ ಉಳಿಸಿಕೊಳ್ಳುವುದೇ ಸವಾಲಾಗಿದೆ. ಹಾನಿಗೊಳಗಾದ ಬೆಳೆಗೆ ಸರಿಯಾದ ಪರಿಹಾರವೂ ಸಿಗುತ್ತಿಲ್ಲ. ಜನಸಂಖ್ಯೆ ಕಡಿಮೆ ಇದ್ದಾಗ ಇದ್ದ ಕೃಷಿ ಜಮೀನಿನಲ್ಲಿಯೇ 100 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಈಗಲೂ ಬೆಳೆ ಬೆಳೆಯಲು ಸಾಧ್ಯವೇ? ಕಾರಣ ಅರಣ್ಯ ಇಲಾಖೆಯ ಕೃಷಿಗೆ ಯೋಗ್ಯವಾದ ಜಮೀನನ್ನು ರೈತರಿಗೆ ನೀಡುವ ಕೆಲಸವಾಗಬೇಕು ಎಂದರು.ಮುಖ್ಯ ಅತಿಥಿಗಳಾಗಿ ಭಾಗಿಯಾದ ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಶಶಿಭೂಷಣ ಹೆಗಡೆ, ಶಿರಸಿ ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಸ್ಥಳೀಯ ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಮಾತನಾಡಿದರು. ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವೀರಭದ್ರ ನಾಯ್ಕ ಅವರು ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿನಾಯಕ ಕೊಂಡ್ಲಿ ಸ್ವಾಗತಿಸಿದರು. ಶಿಕ್ಷಕರಾದ ವೆಂಕಟೇಶ ಮಡಿವಾಳ, ಸುಧಾರಾಣಿ ನಾಯ್ಕ ನಿರೂಪಿಸಿದರು.