ಪ್ರಾಕೃತಿಕ ಆಪತ್ತುಗಳು ಅನ್ನದಾತರನ್ನು ಪದೇ ಪದೇ ಸಂಕಷ್ಟಕ್ಕೆ ಸಿಲುಕಿಸುತ್ತಿವೆ. ಅತಿವೃಷ್ಟಿ, ಅನಾವೃಷ್ಟಿಗಳಿಂದ ತೊಂದರೆಗೊಳಗಾದ ರೈತರು ತಾವು ಬೆಳೆದ ಅಲ್ಪಸ್ವಲ್ಪ ಬೆಳೆಗೆ ಯೋಗ್ಯ ಬೆಲೆಯನ್ನು ಪಡೆಯದಿದ್ದರೆ ಅವರು ಬದುಕುವುದಾದರೂ ಹೇಗೆ?
ಗದಗ: ಕಳೆದ ಹಲವಾರು ದಿನಗಳಿಂದ ನಾಡಿನ ರೈತರು ಕಬ್ಬಿಗೆ ಯೋಗ್ಯ ಬೆಲೆಯನ್ನು ನೀಡಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಸರ್ಕಾರಗಳು ಕೂಡಲೇ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಡಂಬಳ- ಗದಗ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಆಗ್ರಹಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಕ್ಕರೆ ಕಾರ್ಖಾನೆಗಳ ಮಾಲೀಕರು ರೈತರು ಕೇಳಿದ ಬೆಲೆಯನ್ನು ನೀಡಲು ಸಾಧ್ಯವಾಗುವುದಿಲ್ಲವೆಂದು ನಿರಾಕರಿಸಿದ ಹಿನ್ನೆಲೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪರಸ್ಪರ ಸಹಯೋಗದೊಂದಿಗೆ ರೈತರ ಸಮಸ್ಯೆಯನ್ನು ನೀಗಿಸುವುದು ಕಷ್ಟದ ಮಾತೇನೂ ಅಲ್ಲ.
ಪ್ರಾಕೃತಿಕ ಆಪತ್ತುಗಳು ಅನ್ನದಾತರನ್ನು ಪದೇ ಪದೇ ಸಂಕಷ್ಟಕ್ಕೆ ಸಿಲುಕಿಸುತ್ತಿವೆ. ಅತಿವೃಷ್ಟಿ, ಅನಾವೃಷ್ಟಿಗಳಿಂದ ತೊಂದರೆಗೊಳಗಾದ ರೈತರು ತಾವು ಬೆಳೆದ ಅಲ್ಪಸ್ವಲ್ಪ ಬೆಳೆಗೆ ಯೋಗ್ಯ ಬೆಲೆಯನ್ನು ಪಡೆಯದಿದ್ದರೆ ಅವರು ಬದುಕುವುದಾದರೂ ಹೇಗೆ? ಅಗತ್ಯ ವಸ್ತುಗಳ ಬೆಲೆ ಏರಿಕೆ, ಮಕ್ಕಳ ದುಬಾರಿ ಶಿಕ್ಷಣ, ಹಾಗೆಯೇ ಮದುವೆ- ಮುಂಜಿವೆ, ಆರೋಗ್ಯ ಮುಂತಾದವುಗಳ ಖರ್ಚು-ವೆಚ್ಚಗಳನ್ನು ನೀಗಿಸುವುದು ರೈತರಿಗೆ ಸವಾಲಾಗಿ ಪರಿಣಮಿಸಿವೆ.ಇಂಥ ಸಂದರ್ಭದಲ್ಲಿ ಸರ್ಕಾರಗಳು ಮೀನಮೇಷ ಮಾಡದೇ ತತ್‌ಕ್ಷಣವೇ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕಾದುದು ಕರ್ತವ್ಯ. ಆಳುವ ಸರ್ಕಾರಗಳೇ ರೈತರ ಗೋಳನ್ನು ಕೇಳದಿದ್ದರೆ ರೈತರು ಯಾರ ಮೊರೆ ಹೋಗಬೇಕು. ರೈತರು ಸರ್ಕಾರಗಳಿಗೆ ಯೋಗ್ಯ ಬೆಲೆ ನೀಡಬೇಕೆಂದು ಕೇಳುವುದು ನ್ಯಾಯೋಚಿತವಾಗಿದೆ. ಕರ್ನಾಟಕದ ಎಲ್ಲ ಲಿಂಗಾಯತ ಮಠಾಧಿಪತಿಗಳು ರೈತ ಹೋರಾಟದ ಸಂದರ್ಭಗಳಲ್ಲಿ ಸದಾ ಅನ್ನದಾತರನ್ನು ಬೆಂಬಲಿಸುತ್ತಾ ಬಂದಿದ್ದಾರೆ.
ಈಗಲೂ ಅನ್ನದಾತರ ಬೆನ್ನಿಗೆ ನಿಂತಿದ್ದಾರೆ. ಸರ್ಕಾರಗಳು ಜನಪ್ರತಿನಿಧಿಗಳು ಪರಸ್ಪರ ದೋಷಾರೋಪಣೆ ನಿಲ್ಲಿಸಿ ತುರ್ತಾಗಿ ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ನಿಲ್ಲಿಸಬೇಕು. ಅನ್ಯಥಾ ಸಂಭವನೀಯ ಅನಾಹುತಕ್ಕೆ ಸರ್ಕಾರಗಳೇ ಹೊಣೆಯಾಗಬೇಕಾಗುವುದು ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಪರವಾಗಿ ಶ್ರೀಗಳು ಎಚ್ಚರಿಸಿದ್ದಾರೆ.