ಗಂಗಾವತಿ: ಕೊಪ್ಪಳ ಜಿಲ್ಲಾ ಕೇಂದ್ರದ ಬಳಿ ನಿರ್ಮಾಣವಾಗುತ್ತಿರುವ ಬಲ್ಡೋಟ ಕಂಪನಿ ನಿರ್ಮಾಣ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ 100 ದಿನಗಳು ಪೂರೈಸಿದೆ. ಅಷ್ಟೇ ಅಲ್ಲದೆ ಕೊಪ್ಪಳ ಬಂದ್ ಕೂಡ ನಡೆಸಲಾಗಿದೆ. ಆದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿಸುವುದು ನೋಡಿದರೆ, ಕಂಪನಿಗೆ ಸರ್ಕಾರ ಸಂಪೂರ್ಣ ಬೆಂಬಲ ಇದ್ದಂತಿದೆ ಎನ್ನುವ ಅನುಮಾನ ಜನರಲ್ಲಿ ಮೂಡುತ್ತಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ಮಾಧ್ಯಮದವರ ಜತೆ ಮಾತನಾಡಿದ ಅವರು, ಬಲ್ಡೋಟ ಕಂಪನಿಯನ್ನು ಬಂದ್ ಮಾಡಬೇಕು ಎಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಪ್ರತಿಭಟನೆ ನಡೆಸಿ, ಕಣ್ಣೀರು ಹಾಕಿದರು. ಆದರೆ ಇದುವರೆಗೂ ಕಂಪನಿ ನಿರ್ಮಾಣದ ಕಾಮಗಾರಿ ನಿಲ್ಲಿಸಲು ಸರ್ಕಾರ ಮುಂದಾಗಿಲ್ಲ. ನಾನು ಕೂಡ ಈ ವಿಚಾರ ಕುರಿತು ವಿಧಾನಸೌಧದಲ್ಲಿ ಗಂಭೀರ ಆರೋಪ ಮಾಡಿರುವೆ. ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ರಾಜಶೇಖರ ಹಿಟ್ನಾಳ ಅವರು ಮುಖ್ಯಮಂತ್ರಿಗೆ ಬಹಳ ಆಪ್ತರು. ಆದರೂ ಕಂಪನಿಯ ನಿರ್ಮಾಣದ ಕೆಲಸವನ್ನು ನಿಲ್ಲಿಸಲು ಮುಂದಾಗುತ್ತಿಲ್ಲ. ಕೇವಲ ಜನರು ನಡೆಸುವ ಪ್ರತಿಭಟನೆಯಲ್ಲಿ ಭಾಗವಹಿಸಿ, ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ. ಇನ್ನು ಅಧಿಕಾರದಲ್ಲಿ ಇರುವ ಸರ್ಕಾರದ ಕಡೆಯವರೇ ಪ್ರತಿಭಟನೆಯಲ್ಲಿ ಭಾಗವಹಿಸುವುದು ಎಷ್ಟರ ಮಟ್ಟಿಗೆ ಸರಿ? ಕೂಡಲೇ ರಾಜ್ಯ ಸರ್ಕಾರ ಜನರ ಆರೋಗ್ಯದ ದೃಷ್ಟಿಯಿಂದ ಕಂಪನಿ ನಿರ್ಮಾಣ ಮಾಡುತ್ತಿರುವ ಕೆಲಸವನ್ನು ಬಂದ್ ಮಾಡಬೇಕು ಎಂದು ಆಗ್ರಹಿಸಿದರು.ಮುಂದಿನ ತಿಂಗಳು ಆನೆಗೊಂದಿ ಉತ್ಸವ: ಪ್ರತಿ ವರ್ಷದಂತೆ ಈ ಬಾರಿ ಕೂಡ ಆನೆಗೊಂದಿ ಉತ್ಸವ ಆಚರಿಸಲಾಗುವುದು. ಅದಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರಕ್ಕೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಜತೆಗೆ ಆನೆಗೊಂದಿ ಉತ್ಸವ ಕುರಿತು ಚರ್ಚೆ ನಡೆಸಿ, ಮುಂದಿನ ತಿಂಗಳಲ್ಲಿ ಉತ್ಸವದ ದಿನಾಂಕ ನಿಗದಿ ಮಾಡಲಾಗುವುದು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.