ಕಟ್ಟಡ ನಿರ್ಮಾಣ, ಶಿಲ್ಪಕಲೆ, ಮರಗೆಲಸ, ಲೋಹಕಲೆ ಸೇರಿದಂತೆ ವಿವಿಧ ಕಲೆ ಮತ್ತು ವೃತ್ತಿಗಳಲ್ಲಿ ವಿಶ್ವಕರ್ಮ ಸಮುದಾಯದವರು ಪರಿಣತಿ ಹೊಂದಿದ್ದಾರೆ

ಕಂಪ್ಲಿ: ವಿಶ್ವಕರ್ಮ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಯೋಜನೆ ರೂಪಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ವಿಶ್ವಕರ್ಮ ಸಮಾಜದ ತಾಲೂಕು ಕಾರ್ಯದರ್ಶಿ ಡಿ.ಮೌನೇಶ್ ಒತ್ತಾಯಿಸಿದರು.

ಪಟ್ಟಣದ ತಹಸೀಲ್ದಾರ್ ಸಭಾಂಗಣದಲ್ಲಿ ಗುರುವಾರ ತಾಲೂಕಾಡಳಿತ ಹಾಗೂ ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವಕರ್ಮ ಸಮುದಾಯದ ಜನರು ತಮ್ಮ ವಿಶಿಷ್ಟ ಕಲೆ, ಕೌಶಲ ಮತ್ತು ಸೃಜನಶೀಲತೆಯ ಮೂಲಕ ಶತಮಾನಗಳಿಂದಲೂ ಸಮಾಜದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಾ ಬಂದಿದ್ದಾರೆ ಎಂದರು.

ಕಟ್ಟಡ ನಿರ್ಮಾಣ, ಶಿಲ್ಪಕಲೆ, ಮರಗೆಲಸ, ಲೋಹಕಲೆ ಸೇರಿದಂತೆ ವಿವಿಧ ಕಲೆ ಮತ್ತು ವೃತ್ತಿಗಳಲ್ಲಿ ವಿಶ್ವಕರ್ಮ ಸಮುದಾಯದವರು ಪರಿಣತಿ ಹೊಂದಿದ್ದಾರೆ. ದೇವಾಲಯ, ವಿಗ್ರಹಗಳು, ಕಲಾಕೃತಿಗಳು ಹಾಗೂ ವಿವಿಧ ಸ್ಮಾರಕಗಳ ನಿರ್ಮಾಣದಲ್ಲಿ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ. ಕಾಷ್ಟ, ಶಿಲ್ಪ ಮತ್ತು ಲೋಹ ಕ್ಷೇತ್ರಗಳಲ್ಲಿ ಅತ್ಯುತ್ತಮ ಕಲಾಕೃತಿ ನಿರ್ಮಿಸುವ ಅಪೂರ್ವ ಕೌಶಲ ಹೊಂದಿದ್ದರೂ ಸಮುದಾಯದ ಅನೇಕ ಕುಟುಂಬಗಳು ಇಂದಿಗೂ ಆರ್ಥಿಕವಾಗಿ ಹಿಂದುಳಿದಿವೆ ಎಂದು ಹೇಳಿದರು.

ಆಧುನಿಕ ತಂತ್ರಜ್ಞಾನ ಹಾಗೂ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸಾಂಪ್ರದಾಯಿಕ ವೃತ್ತಿ ಉಳಿಸಿಕೊಂಡು ಮುನ್ನಡೆಯಲು ವಿಶ್ವಕರ್ಮ ಸಮುದಾಯದ ಯುವಜನರಿಗೆ ತರಬೇತಿ, ಆರ್ಥಿಕ ನೆರವು, ಸಾಲ ಸೌಲಭ್ಯ, ಮಾರುಕಟ್ಟೆ ವ್ಯವಸ್ಥೆ ಹಾಗೂ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುವಂತಹ ಯೋಜನೆಗಳ ಅಗತ್ಯವಿದೆ. ಸರ್ಕಾರ ರೂಪಿಸುವ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ತಲುಪುವಂತಾಗಬೇಕು ಎಂದು ಒತ್ತಾಯಿಸಿದರು.

ತಹಸೀಲ್ದಾರ್ ಜೂಗಲ ಮಂಜುನಾಯಕ ಮಾತನಾಡಿ, ವಿಶ್ವಕರ್ಮ ಸಮುದಾಯವು ಕಲೆ ಮತ್ತು ಕೌಶಲ್ಯದ ಮೂಲಕ ಸಮಾಜದ ಪ್ರಗತಿಗೆ ನಿರಂತರವಾಗಿ ಕೊಡುಗೆ ನೀಡುತ್ತಿದೆ. ಶಿಲ್ಪ ನಿರ್ಮಾಣದ ಪರಂಪರೆ ಆರಂಭಿಸಿ ಅದನ್ನು ತಲೆತಲಾಂತರಗಳಿಂದ ಮುಂದುವರಿಸಿಕೊಂಡು ಬಂದಿರುವ ವಿಶ್ವಕರ್ಮರ ಕಲೆ ಮತ್ತು ಕೌಶಲ್ಯ ಶ್ಲಾಘನೀಯವಾಗಿದೆ ಎಂದರು.

ವಿಶ್ವಕರ್ಮ ಸಮುದಾಯದವರು ಎದುರಿಸುತ್ತಿರುವ ಸಮಸ್ಯೆ ಹಾಗೂ ಅವರ ಆಶೋತ್ತರ ಸರ್ಕಾರದ ಗಮನಕ್ಕೆ ತಂದು, ಅಗತ್ಯ ಸೌಲಭ್ಯಗಳು ದೊರೆಯುವಂತೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಚರ್ಚಿಸಲಾಗುವುದು. ಯುವಜನತೆ ತಮ್ಮ ಸಾಂಪ್ರದಾಯಿಕ ಕೌಶಲ್ಯದ ಜತೆಗೆ ಆಧುನಿಕ ತಂತ್ರಜ್ಞಾನ ಮತ್ತು ಹೊಸ ಕೌಶಲ್ಯ ಅಳವಡಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಸಲಹೆ ನೀಡಿದರು.

ವಿವಿಧೆಡೆ ಜಯಂತಿ ಆಚರಣೆ

ಶ್ರೀವಿಶ್ವಕರ್ಮ ಜಯಂತಿ ಅಂಗವಾಗಿ ಪಟ್ಟಣದ ಕಾಳಿಕಾಭವನದಲ್ಲಿರುವ ಕಾಳಿಕಮಠೇಶ್ವರ ದೇವಸ್ಥಾನದ ಆವರಣದಲ್ಲಿ ವಿಶ್ವಕರ್ಮ ಧ್ವಜಾರೋಹಣ ನೆರವೇರಿಸಲಾಯಿತು. ಬಳಿಕ ಜಕಣಾಚಾರಿ ವೃತ್ತದಲ್ಲಿ ವಿಶ್ವಕರ್ಮರ ಪ್ರತಿಮೆಗೆ ಪೂಜೆ ಸಲ್ಲಿಸಿ ಗೌರವ ಅರ್ಪಿಸಲಾಯಿತು. ಪುರಸಭೆ ಕಚೇರಿಯಲ್ಲಿಯೂ ವಿಶ್ವಕರ್ಮ ಜಯಂತಿ ಅಂಗವಾಗಿ ವಿಶೇಷ ಪೂಜೆ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ಡಿ.ಎ.ರುದ್ರಪ್ಪಾಚಾರ್, ಮಹಿಳಾ ಅಧ್ಯಕ್ಷೆ ಡಿ. ವೀಣಾ, ರಾಮಚಂದ್ರಾಚಾರ್, ಚಂದ್ರಶೇಖರಾಚಾರ್, ಎಂ. ಮಂಜುನಾಥಾಚಾರ್, ಡಿ. ಕಾಳಾಚಾರ್, ಸವಿತಾ, ಡಿ. ರಾಘವೇಂದ್ರ, ಕೆ.ರಾಘವೇಂದ್ರ, ಎ.ಮೌನೇಶ್, ಡಿ. ವಿಜಯಕುಮಾರ್, ಗುರುರಾಜಾಚಾರ್, ಡಿ.ನಾರಾಯಣಾಚಾರ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು.