ಸಾರಾಂಶ
ಮದ್ಯ, ಪಾಣಿ, ಸೇರಿದಂತೆಯಿತರ ದರಗಳನ್ನು ದುಪ್ಪಟ್ಟುಗೊಳಿಸಿ ನೇರವಾಗಿ ಗಂಡನ ಜೇಬು ಖಾಲಿ ಮಾಡಿ ಗೃಹಲಕ್ಷ್ಮಿ ಯೋಜನೆಯಲ್ಲಿ 2000 ರು. ಹೆಂಡತಿಗೆ ನೀಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಕುಮಾರಸ್ವಾಮಿ ಕಿಡಿ ಕಾರಿದರು.
ಕನ್ನಡಪ್ರಭ ವಾರ್ತೆ ಕುಣಿಗಲ್
ಮದ್ಯ, ಪಾಣಿ, ಸೇರಿದಂತೆಯಿತರ ದರಗಳನ್ನು ದುಪ್ಪಟ್ಟುಗೊಳಿಸಿ ನೇರವಾಗಿ ಗಂಡನ ಜೇಬು ಖಾಲಿ ಮಾಡಿ ಗೃಹಲಕ್ಷ್ಮಿ ಯೋಜನೆಯಲ್ಲಿ 2000 ರು. ಹೆಂಡತಿಗೆ ನೀಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಕುಮಾರಸ್ವಾಮಿ ಕಿಡಿ ಕಾರಿದರು.ಕುಣಿಗಲ್ ನ ಜಿ.ಕೆ ಬಿಎಮ್ಎಸ್ ಮೈದಾನದಲ್ಲಿ ಬೆಂಗಳೂರು ಗ್ರಾಮಾಂತರ ಮೈತ್ರಿ ಅಭ್ಯರ್ಥಿ ಸಿ.ಎನ್. ಮಂಜುನಾಥ್ ಪರ ಮತಯಾಚಿಸಿ ಮಾತನಾಡಿದರು. ಕೇಂದ್ರ ಸರ್ಕಾರ ಕೊಟ್ಟ ಅಕ್ಕಿಯನ್ನು ನೀಡಿ ಗ್ಯಾರಂಟಿ ಹೆಸರನ್ನು ಬಳಸುತ್ತಿದ್ದಾರೆ. ಹೆಣ್ಣು ಮಕ್ಕಳ ಹೆಸರಿನಲ್ಲಿ ರಾಜಕೀಯ ಆರಂಭಿಸಿದ್ದಾರೆ ಎಂದರು.
ಸಿದ್ದರಾಮಯ್ಯ ಪ್ರತಿ ವರ್ಷ ಒಂದು ಲಕ್ಷ ಕೋಟಿ ಸಾಲ ಮಾಡಿ ಸಾರ್ವಜನಿಕರ ಮೇಲೆ ಹೆಚ್ಚಿನ ಹೊರೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಮಾಡಿದ ಸಾಲ ತೀರಿಸಬೇಕಾಗಿರುವುದು ನಿಮ್ಮ ಮೇಲಿದೆ. 2,000 ಘೋಷಣೆ ಮಾಡಿ ನಿಮ್ಮ ಕುಟುಂಬಗಳು ಬಡವರಾಗುವ ರೀತಿ ಮಾಡುತ್ತಿದ್ದಾರೆ ಎಂದರು. ಕೇಂದ್ರ ಸರ್ಕಾರದ ಖಾಲಿ ಹುದ್ದೆಗಳ ಬಗ್ಗೆ ಮಾತನಾಡುವ ರಾಹುಲ್ ತಮ್ಮದೇ ಆದ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಇದೆ. ಇಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಿ ಎಂದರು. ಡಿಕೆ ಸಹೋದರರು ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಯಾವುದೇ ಶಾಶ್ವತ ಕೊಡುಗೆ ನೀಡಿಲ್ಲ. ಇವರ ಸಾಧನೆ ಎಂದರೆ ಮತದಾರರಿಗೆ ಕುಕ್ಕರ್, ತವಾ, ಸೀರೆ ಹಂಚಿರುವುದು ಮಾತ್ರ. ಕಳೆದ ಬಾರಿ ಅವರು ಕೊಟ್ಟ ಪ್ಲಾಸ್ಟಿಕ್ ಕಾರ್ಡ್ ಆಮಿಷ ಏನಾಗಿದೆ ಆ ರೀತಿಯ ಮೋಸಗಳಿಗೆ ಜನ ಈ ಬಾರಿ ಬಲಿಯಾಗಬಾರದು. ಕೂಲಿ ಕೆಲಸಕ್ಕೆ ಸಂಬಳ ಕೇಳುವ ಅಣ್ಣ- ತಮ್ಮಂದಿರು ಏನು ಕೆಲಸ ಮಾಡಿದ್ದೇವೆ ಎಂಬುದನ್ನು ತೋರಿಸಬೇಕಿದೆ, ಅವರ ದುರಾಡಳಿತಕ್ಕೆ ಭ್ರಷ್ಟಾಚಾರಗಳೇ ಸಾಕ್ಷಿ ಎಂದರು. ಮಾಜಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಮಾತನಾಡಿ, ಕುಣಿಗಲ್ ಮಣ್ಣಿನ ಶಕ್ತಿ ಬಗ್ಗೆ ನನಗೆ ತುಂಬಾ ಪರಿಚಯ ಇದೆ. ಹೊರಗಿನಿಂದ ಬಂದವರು ಇಲ್ಲಿನ ಜನರನ್ನು ಇಲ್ಲಿಯವರ ಮೇಲೆ ಎತ್ತಿ ಕಟ್ಟುವ ಕೆಲಸ ಮಾಡುತ್ತಾರೆ. ಎಚ್.ಡಿ ದೇವೇಗೌಡರಿಗೆ ಪುನರ್ಜನ್ಮ ಕೊಟ್ಟಂತಹ ಈ ಮಣ್ಣು ಇಂದಿನ ರಾಜಕೀಯದಲ್ಲಿ ಬಂದೂಕಿನ ಗುಂಡಿಗೂ ಕೂಡ ಹೆದರಿಲ್ಲ ಎಂದರು. ಇಲ್ಲಿ ನಾಗರಾಜಯ್ಯ ಮತ್ತು ಕೃಷ್ಣಕುಮಾರ್ ಒಂದಾಗಿದ್ದಾರೆ. ಇದರಿಂದ ಮಂಜುನಾಥ್ ಅವರಿಗೆ ಇನ್ನಷ್ಟು ಶಕ್ತಿ ಬಂದಿದೆ. ಈ ಬಾರಿ ಸಂಸದ ಸ್ಥಾನಕ್ಕೆ ಮಂಜುನಾಥ್ ಆಯ್ಕೆಯಾಗಿ ಮೋದಿ ಸರ್ಕಾರದಲ್ಲಿ ಸಚಿವರಾಗುವುದು ಗ್ಯಾರಂಟಿ ಎಂದರು. ಕಾಂಗ್ರೆಸ್ ಗೆ ಮುಂದಿನ ಬಾರಿ ಪ್ರತಿಪಕ್ಷ ಸ್ಥಾನವು ಕೂಡ ಸಿಗುವುದಿಲ್ಲ ಎಂದರು.ಪತಿಯ ಪರ ಮತಯಾಚಿಸಿದ ಪತ್ನಿ: ಡಾ ಸಿ.ಎನ್. ಮಂಜುನಾಥ್ ಅವರ ಪತ್ನಿ ಅನುಸೂಯ ವೇದಿಕೆಗೆ ಆಗಮಿಸಿ ಪತಿಗೆ ಮತ ನೀಡಬೇಕು. ಲಕ್ಷಾಂತರ ಜನರ ಮನಸ್ಸನ್ನು ಸಂತಸಪಡಿಸಿರುವ ಮಂಜುನಾಥ್ ಅವರ ಮನಸ್ಸಿಗೆ ನೋವಾಗಬಾರದು. ಅವರ ಒಳ್ಳೆಯತನಕ್ಕೆ ಬೆಲೆ ಸಿಗಬೇಕಾಗಿದೆ. ಅಂತಹ ಹೃದಯವಂತರಿಗೆ ಪ್ರತಿಯೊಬ್ಬರೂ ಮತ ನೀಡಬೇಕೆಂದು ಮನವಿ ಮಾಡಿದರು.
ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಡಾ. ಮಂಜುನಾಥ್ ಮುಂದಿನ ದಿನಗಳಲ್ಲಿ ಮೋದಿ ಸರ್ಕಾರದಲ್ಲಿ ಅವರು ಸಚಿವರಾಗುವುದು ಗ್ಯಾರಂಟಿ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಅವರಿಗೆ ಮತ ನೀಡಿ ಎಂದರು.ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್, ಹಾಗೂ ಡಿ,ನಾಗರಾಜಯ್ಯ, ಮಾಜಿ ಶಾಸಕ ಲಿಂಗಪ್ಪ ಮಾತನಾಡಿದರು. ಈ ಸಂದರ್ಭ ದಲ್ಲಿ ಜೆಡಿಎಸ್ ಮುಖಂಡ ಬಿಎ ಜಗದೀಶ್, ಲೋಕೇಶ್, ಡಾ. ರವಿ ಬಾಬು ಬಿಜೆಪಿ ಮುಖಂಡ ವೈಎಚ್ ಹುಚ್ಚಯ್ಯ, ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ್ ಸೇರಿದಂತೆ ಹಲವಾರು ಮುಖಂಡರು ಇದ್ದರು.