ಹೆಂಡ ಹಣ ಹಂಚಿ ಅಧಿಕಾರಕ್ಕೆ ಬರುವ ಸರ್ಕಾರ ಕಿತ್ತೊಗೆಯಿರಿ: ಕೆಆರ್‌ಎಸ್ ರಾಜ್ಯಾಧ್ಯಕ್ಷ ರವಿ ಕೃಷ್ಣಾರಡ್ಡಿ

| Published : Jan 13 2024, 01:30 AM IST

ಹೆಂಡ ಹಣ ಹಂಚಿ ಅಧಿಕಾರಕ್ಕೆ ಬರುವ ಸರ್ಕಾರ ಕಿತ್ತೊಗೆಯಿರಿ: ಕೆಆರ್‌ಎಸ್ ರಾಜ್ಯಾಧ್ಯಕ್ಷ ರವಿ ಕೃಷ್ಣಾರಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಒಳಗೊಂಡ ಜೆಸಿಪಿ ಪಕ್ಷಗಳು ಎಲ್ಲವೂ ಒಂದೇ ನೀತಿ ಅನುಸರಿಸುತ್ತಿವೆ. ಜಾತಿ, ಧರ್ಮ ಮತ್ತು ದೇವರ ಹೆಸರಿನಲ್ಲಿ ಅಧಿಕಾರ ನಡೆಸುತ್ತಿವೆ. ಇಂತಹವರಿಂದ ರಾಜ್ಯದ ಉದ್ಧಾರ ಸಾಧ್ಯವಿಲ್ಲ. ಜನರು ಸಹ ಉದ್ಧಾರವಾಗುವುದು ಇವರಿಗೆ ಬೇಕಾಗಿಲ್ಲ. ಈ ಕಾರಣಕ್ಕಾಗಿಯೆ ಕೆಟ್ಟ ಯೋಜನೆ ಜಾರಿ ಮಾಡುವುದು ಮತ್ತು ಬಡವರು ಬಡವರಾಗಿಯೇ ಇರುವಂತೆ ಮಾಡುತ್ತಾರೆ.

ಕೊಪ್ಪಳ: ಹೆಂಡ, ಹಣ ಹಂಚಿ ಅಧಿಕಾರಕ್ಕೆ ಬರುವ ಸರ್ಕಾರ ಕಿತ್ತೊಗೆಯಲು ಯುವಕರು ಸಂಕಲ್ಪ ಮಾಡಬೇಕಾಗಿದೆ. ಇಲ್ಲದಿದ್ದರೆ ರಾಜ್ಯ ಸೇರಿದಂತೆ ದೇಶಕ್ಕೆ ವಿಪತ್ತು ನಿಶ್ಚಿತ ಎಂದು ಕೆಆರ್‌ಎಸ್ ರಾಜ್ಯಾಧ್ಯಕ್ಷ ರವಿ ಕೃಷ್ಣಾರಡ್ಡಿ ಹೇಳಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಯುವ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಒಳಗೊಂಡ ಜೆಸಿಪಿ ಪಕ್ಷಗಳು ಎಲ್ಲವೂ ಒಂದೇ ನೀತಿ ಅನುಸರಿಸುತ್ತಿವೆ. ಜಾತಿ, ಧರ್ಮ ಮತ್ತು ದೇವರ ಹೆಸರಿನಲ್ಲಿ ಅಧಿಕಾರ ನಡೆಸುತ್ತಿವೆ. ಇಂತಹವರಿಂದ ರಾಜ್ಯದ ಉದ್ಧಾರ ಸಾಧ್ಯವಿಲ್ಲ. ಜನರು ಸಹ ಉದ್ಧಾರವಾಗುವುದು ಇವರಿಗೆ ಬೇಕಾಗಿಲ್ಲ. ಈ ಕಾರಣಕ್ಕಾಗಿಯೆ ಕೆಟ್ಟ ಯೋಜನೆ ಜಾರಿ ಮಾಡುವುದು ಮತ್ತು ಬಡವರು ಬಡವರಾಗಿಯೇ ಇರುವಂತೆ ಮಾಡುತ್ತಾರೆ ಎಂದು ದೂರಿದರು.ಶೈಕ್ಷಣಿಕ ಯೋಜನೆಗಳಿಗೆ ಆದ್ಯತೆ ನೀಡುತ್ತಿಲ್ಲ. ಹಾಸ್ಟೆಲ್‌ಗಳಲ್ಲಿ ಸೀಟ್ ಸಂಖ್ಯೆ ಹೆಚ್ಚಿಸಿದ್ದರೆ ಅದೆಷ್ಟೋ ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿತ್ತು. ಶ್ರೀಮಂತರ ಮಕ್ಕಳು ಮಾತ್ರ ತಮ್ಮ ಮಕ್ಕಳನ್ನು ಖಾಸಗಿಯಾಗಿ ಉತ್ತಮ ಶಾಲೆಗಳಲ್ಲಿ ಓದಿಸುತ್ತಾರೆ. ಆದರೆ, ಬಡವರು ಮಾತ್ರ ಅಂಥ ಅವಕಾಶ ಪಡೆಯುವಂತೆ ಇಲ್ಲ ಎಂದು ಕಿಡಿಕಾರಿದರು. ಇಂತಹ ದುಷ್ಟ ಶಕ್ತಿ ಕಿತ್ತೊಗೆಯಬೇಕಾಗಿದೆ. ಇದರ ವಿರುದ್ಧ ಹೋರಾಟಕ್ಕೆ ಯುವಕರು ಸಂಕಲ್ಪ ಮಾಡಬೇಕಾಗಿದೆ ಎಂದರು.ಮುಖಂಡ ರಘು ಜಾಣಗೆರೆ ಮಾತನಾಡಿ, ಹಗಲಿರುಳು ಭ್ರಷ್ಟ ವ್ಯವಸ್ಥೆ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಕಳೆದ ವರ್ಷದಿಂದ ಯುವ ದಿನ ಆಚರಣೆ ಮಾಡಲಾಗುತ್ತಿದೆ. ಯುವ ಜನರಿಗೆ ಪ್ರೇರಣೆ ನೀಡಲಾಗುತ್ತಿದೆ ಎಂದರು.

ಸರ್ಕಾರಿ ಆಸ್ಪತ್ರೆಯಲ್ಲಿ‌ ಸರಿಯಾದ ಚಿಕಿತ್ಸೆ ನೀಡದ್ದನ್ನು ಖಂಡಿಸಿ ಹೋರಾಟ ಮಾಡಿದರೆ ದಮನಿಸುವ ಯತ್ನ ನಡೆದಿದೆ. ಈಗ ನಿಮ್ಮ ಕಾಲ. ಮುಂದೆ ನಮಗೂ ಕಾಲ ಬರುತ್ತದೆ ಎಂದು ಗುಡುಗಿದರು.ಮುಖಂಡ ಕೃಷ್ಣ ವಿ.ಬಿ., ಯುವ ಘಟಕದ ರಾಜ್ಯಾಧ್ಯಕ್ಷೆ ಜನನಿ ವತ್ಸಲಾ, ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ, ವೆಂಕಟೇಶ, ಆಶಾ ವಿರೇಶ, ನಿಖಿಲ್, ರಘು ಜಾಣಗೆರೆ, ಜ್ಞಾನಸಿಂಧು ಸ್ವಾಮಿ, ಸೋಮಸುಂದರ್, ರವಿಕುಮಾರ್, ಆರೋಗ್ಯ ಸಗವಾಮಿ, ಕೃಷ್ಣಾ ವಿ.ಬಿ., ಚಂದ್ರಶೇಖರ ಇದ್ದರು.