ಚಿಕ್ಕಮಗಳೂರುಪಂಚ ಗ್ಯಾರಂಟಿ ಯೋಜನೆಗಳಿಗೆ ಇದುವರೆಗೆ ರಾಜ್ಯ ಸರ್ಕಾರ ₹1956 ಕೋಟಿ ಅನುದಾನ ಒದಗಿಸುವ ಮೂಲಕ ಜಿಲ್ಲೆಯ ಜನತೆಗೆ ಆರ್ಥಿಕ ಶಕ್ತಿ ತುಂಬಿದೆ. ಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿ ಆರ್ಥಿಕ ಸಂಚಲನ ಮೂಡಿಸಿವೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಹೇಳಿದರು.

- ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪಂಚ ಗ್ಯಾರಂಟಿ ಯೋಜನೆಗಳಿಗೆ ಇದುವರೆಗೆ ರಾಜ್ಯ ಸರ್ಕಾರ ₹1956 ಕೋಟಿ ಅನುದಾನ ಒದಗಿಸುವ ಮೂಲಕ ಜಿಲ್ಲೆಯ ಜನತೆಗೆ ಆರ್ಥಿಕ ಶಕ್ತಿ ತುಂಬಿದೆ. ಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿ ಆರ್ಥಿಕ ಸಂಚಲನ ಮೂಡಿಸಿವೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಹೇಳಿದರು.ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೃಹಜ್ಯೋತಿ ಯೋಜನೆಯಡಿ 3,06,735 ಮೀಟರ್‌ಗಳ ಸುಮಾರು 9 ಲಕ್ಷ ಮಂದಿಗೆ ಉಚಿತ ವಿದ್ಯುತ್ ವಿತರಿಸುವ ಮೂಲಕ ಕಳೆದ 27 ತಿಂಗಳಿನಿಂದ ₹304 ಕೋಟಿ ಗಳನ್ನು ಮೆಸ್ಕಾಂ ಇಲಾಖೆಗೆ ಸರ್ಕಾರ ಭರಿಸಿದ್ದು, ಆ ಮೂಲಕ ಜನತೆಗೆ ಉಚಿತವಾಗಿ ಬೆಳಕು ಒದಗಿಸಿದೆ ಎಂದರು.

ಗೃಹಲಕ್ಷ್ಮೀ ಯೋಜನೆಯಲ್ಲಿ 2,62,973 ಕುಟುಂಬದ ಯಜಮಾನಿಯರಿಗೆ 23 ಕಂತುಗಳ ಮೂಲಕ ತಲಾ ಎರಡು ಸಾವಿರ ಹಣವನ್ನು ಮಧ್ಯವರ್ತಿಗಳಿಲ್ಲದೆ ನೇರ ಖಾತೆಗೆ ಜಮೆ ಮಾಡಲಾಗಿದೆ. ಒಟ್ಟಾರೆ ಜಿಲ್ಲಾ ಕೇಂದ್ರದಲ್ಲಿ ₹1110 ಕೋಟಿ ಗಳನ್ನು ಗೃಹಲಕ್ಷ್ಮೀ ಯೋಜನೆಗೆ ಮಧ್ಯ ವರ್ತಿಗಳಿಲ್ಲದೇ ಜಮೆ ಮಾಡಲಾಗಿದೆ ಎಂದು ತಿಳಿಸಿದರು.ಅನ್ನಭಾಗ್ಯ ಯೋಜನೆಯಲ್ಲಿ 2,44,353 ಪಡಿತರ ಚೀಟಿದಾರರ ಪೈಕಿ 8.50 ಲಕ್ಷ ಜನರಿಗೆ ಉಚಿತ ಅಕ್ಕಿ ನೀಡಲಾಗುತ್ತಿದ್ದು ಕಳೆದ 29 ತಿಂಗಳಿನಿಂದ ಸರ್ಕಾರ ₹316 ಕೋಟಿಗಳನ್ನು ವ್ಯಯಿಸಿದೆ. ಯುವ ನಿಧಿ ಯೋಜನೆಯಲ್ಲಿ 41,242 ಫಲಾನುಭವಿಗಳಿಗೆ ಒಟ್ಟು ₹12 ಕೋಟಿ ಯನ್ನು ಖಾತೆಗೆ ಜಮೆ ಮಾಡಿ ನಿರುದ್ಯೋಗದಿಂದ ಬಳಲುವವರಿಗೆ ಆಸರೆಯಾಗಿದೆ ಎಂದು ಹೇಳಿದರು.ಶಕ್ತಿ ಯೋಜನೆಯಡಿ 5.56 ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಬಸ್‌ನಲ್ಲಿ ಪ್ರಯಾಣಿಸಿದ್ದು ಇದಕ್ಕಾಗಿ ರಾಜ್ಯ ಸರ್ಕಾರ ₹214 ಕೋಟಿ ಗಳನ್ನು ಸಾರಿಗೆ ಇಲಾಖೆಗೆ ಒದಗಿಸಿದೆ. ಒಟ್ಟಾರೆ ಪಂಚ ಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿ ಅಭೂತಪೂರ್ವವಾಗಿ ಕಾರ್ಯ ನಿರ್ವಹಿಸುವ ಮೂಲಕ ರಾಜ್ಯ ಸರ್ಕಾರದ ಕೆಲಸಕ್ಕೆ ಜನತೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ ಎಂದರು.ಶಕ್ತಿ ಯೋಜನೆಯನ್ನು ಇನ್ನಷ್ಟು ಮಹಿಳೆಯರು ಬಳಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಹೋಬಳಿಗಳಿಂದ ತಾಲೂಕು ಕೇಂದ್ರದ ಮುಖಾಂತರ ಜಿಲ್ಲಾ ಕೇಂದ್ರಕ್ಕೆ ಬಸ್ ಸಂಚಾರ ಮಾಡುವುದರಿಂದ ಶಕ್ತಿ ಯೋಜನೆ ಹೆಚ್ಚು ಬಲಗೊಳ್ಳಲಿದ್ದು, ಆ ಹಿನ್ನೆಲೆಯಲ್ಲಿ ಸಭೆಯಲ್ಲಿ ಅಭಿಪ್ರಾಯಿಸಿ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.ಬೆಳಿಗ್ಗೆ ಸಮಯದಲ್ಲಿ ಹೋಬಳಿ ಕೇಂದ್ರದಿಂದ ತಾಲೂಕು, ಜಿಲ್ಲಾ ಕೇಂದ್ರಕ್ಕೆ ಬರಲು ಶಾಲಾ, ಕಾಲೇಜು ವಿದ್ಯಾರ್ಥಿಗಳು, ಕಚೇರಿಗಳಿಗೆ ತೆರಳುವ ಉದ್ಯೋಗಿಗಳಿಗೆ ಉಪಯೋಗವಾಗಲಿದೆ. ಅಲ್ಲದೇ ಇಡೀ ಜಿಲ್ಲೆಯನ್ನು ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೆ ಒಂದು ಸಂಪರ್ಕ ಸಾಧನವಾಗಲಿದೆ ಎಂದು ಹೇಳಿದರು.ಸಭೆಯಲ್ಲಿ ಸಿಪಿಒ ರಾಜಗೋಪಾಲ್, ಜಿಲ್ಲಾ ಗ್ಯಾರಂಟಿ ಉಪಾಧ್ಯಕ್ಷರಾದ ಮಂಜುನಾಥ್, ಶಫೀವುಲ್ಲಾ, ಕೃಷ್ಣೇಗೌಡ, ಹೇಮಾವತಿ, ಚಂದ್ರಮೌಳಿ ಹಾಗೂ ವಿವಿಧ ತಾಲೂಕು ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

10 ಕೆಸಿಕೆಎಂ 4ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಿತು.