ಶಿಕ್ಷಣ ಕ್ಷೇತ್ರ ಸದ್ಯ ಗೊಂದಲಮಯವಾಗಿದೆ. ಪಠ್ಯಪುಸ್ತಕಗಳ ಕೊರತೆ, ಶಾಲೆಗಳಲ್ಲಿ ಶಿಕ್ಷಕರ ಕೊರತೆ ಮತ್ತೊಂದೆಡೆ ವಿದ್ಯಾರ್ಥಿಗಳ ಕೊರತೆ ಹಾಗೂ ತರಬೇತಿ ಇಲ್ಲದ ಶಿಕ್ಷಕರು ಹೆಚ್ಚಾಗಿದ್ದಾರೆ.

ಧಾರವಾಡ: ಸರ್ಕಾರ ಶಿಕ್ಷಕರನ್ನು ವಿವಿಧ ಯೋಜನೆಗಳ ಅನ್ಯ ಕೆಲಸ ಕಾರ್ಯಗಳಿಗೆ ನಿಯೋಜಿಸುತ್ತಿದ್ದು, ಶಿಕ್ಷಕರ ಮೇಲೆ ಒತ್ತಡ ಹೆಚ್ಚಾಗಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಶಿಕ್ಷಕ ವೃತ್ತಿ ಪವಿತ್ರವಾದದ್ದು, ಸರ್ಕಾರವು ಶಿಕ್ಷಕರನ್ನು ಗುಲಾಮರನ್ನಾಗಿ ಮಾಡಿಕೊಳ್ಳುತ್ತಿದೆ. ಇದನ್ನು ಶಿಕ್ಷಕರು ಏತಕ್ಕೆ ಪ್ರತಿಭಟಿಸುತ್ತಿಲ್ಲ ಎಂದು ಹಿರಿಯ ಸಾಹಿತಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಪ್ರಶ್ನಿಸಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಶಿವಗಂಗಾ ಮತ್ತು ವೀರಪ್ಪ ರಾಮಾಪೂರ ದತ್ತಿ ಅಂಗವಾಗಿ ಮಾಲತೇಶ ನಿಂಬಕ್ಕನವರ ಮತ್ತು ರೂಪಾ ಪುರಮಕರಗೆ `ಆದರ್ಶ ಶಿಕ್ಷಕ ದಂಪತಿ ಪುರಸ್ಕಾರ ಪ್ರದಾನ ಮಾಡಿದ ಅವರು, ಸರ್ಕಾರ ಚುನಾವಣೆ ಮತ್ತಿತರ ಕಾರ್ಯಗಳಿಗೆ ಶಿಕ್ಷಕರನ್ನು ಯಥೇಚ್ಚವಾಗಿ ಬಳಸಿಕೊಳ್ಳುತ್ತಿರುವುದು ಖಂಡನೀಯ. ಮಕ್ಕಳಿಗೆ ಪಾಠ ಕಲಿಸುತ್ತಿರುವ ಸಮಯ ವ್ಯರ್ಥವಾಗುತ್ತಿದೆ. ಶಿಕ್ಷಕರನ್ನು ಶಿಕ್ಷಕರಾಗಿ ಇರಲು ಸರ್ಕಾರಗಳು ಬಿಡಬೇಕು. ಅಂದಾಗ ಶಿಕ್ಷಣದ ಗುಣಮಟ್ಟದ ಏರಿಕೆಯಾಗುತ್ತದೆ ಎಂದರು.

ಶಿಕ್ಷಣ ಕ್ಷೇತ್ರ ಸದ್ಯ ಗೊಂದಲಮಯವಾಗಿದೆ. ಪಠ್ಯಪುಸ್ತಕಗಳ ಕೊರತೆ, ಶಾಲೆಗಳಲ್ಲಿ ಶಿಕ್ಷಕರ ಕೊರತೆ ಮತ್ತೊಂದೆಡೆ ವಿದ್ಯಾರ್ಥಿಗಳ ಕೊರತೆ ಹಾಗೂ ತರಬೇತಿ ಇಲ್ಲದ ಶಿಕ್ಷಕರು ಹೆಚ್ಚಾಗಿದ್ದಾರೆ. ಇಂಥ ಜ್ವಲಂತ ಸಮಸ್ಯೆಗಳನ್ನು ಸರ್ಕಾರ ಬಗೆಹರಿಸಬೇಕೆಂದರು. ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಜಯಶ್ರೀ ಕಾರೇಕಾರ ಮಾತನಾಡಿದರು.

ಆದರ್ಶ ಶಿಕ್ಷಕ ದಂಪತಿ ಪುರಸ್ಕಾರ ಸ್ವೀಕರಿಸಿದ ಮಾಲತೇಶ ನಿಂಬಕ್ಕನವರ ಮತ್ತು ರೂಪಾ ಬಿ. ಪುರಮಕರ ತಮ್ಮ ಅನುಭವ ಹಂಚಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಡಾ. ಸಂಜೀವ ಕುಲಕರ್ಣಿ, ಶಿಕ್ಷಣ ಗುಣಮಟ್ಟ ಕುಸಿತ, ಶಿಕ್ಷಣ ವ್ಯವಸ್ಥೆಯಲ್ಲಿಯ ಲೋಪದೋಷ, ಇತ್ತೀಚೆಗೆ ನಡೆದ ಜೆನ್‌ ಜೀ ಅಭಿಯಾನ, ಭಾರೀ ಪ್ರತಿಭಟನೆ ಬಗ್ಗೆ ಆಗಾಗ ವರದಿಗಳು ಆಗುತ್ತಿವೆ. ದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಶಾಲೆಗಳು ಮುಚ್ಚಿ ಹೋಗಿವೆ. ಬರುವ ಹತ್ತು ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರ ಸಂಪೂರ್ಣ ಬದಲಾವಣೆಯಾಗುವ ಸ್ಥಿತಿಯಲ್ಲಿದೆ. ಇಂಥ ಸಂದಿಗ್ಧ ಸಂದರ್ಭದಲ್ಲಿ ನಾವುಗಳು ಆತ್ಮಾವಲೋಕನ ಮಾಡಿಕೊಂಡು ಪರಿಹಾರ ಕಂಡುಕೊಳ್ಳಲು ಕರ್ನಾಟಕ ವಿದ್ಯಾವರ್ಧಕ ಸಂಘವು ಶಿಕ್ಷಕರ ಜೊತೆ ಸದಾ ಹೋರಾಟಕ್ಕೆ ಸಿದ್ಧವಾಗಿದೆ ಎಂದರು.

ಮೊರಬದ ಕೃಷಿ ಸಮೃದ್ಧಿ ರೈತ ಉತ್ಪಾದಕರ ಸಂಘದ ಸಿಇಓ ಯೋಗಪ್ಪ ಧಾರವಾಡ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮಂಜುನಾಥ ಈ. ಕಾಲವಾಡ ಅತಿಥಿಯಾಗಿ ಆಗಮಿಸಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ದತ್ತಿದಾನಿ ಡಾ. ಲಿಂಗರಾಜ ರಾಮಾಪೂರ ಇದ್ದರು. ವಿಶ್ವೇಶ್ವರಿ ಹಿರೇಮಠ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.