ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಕಾಯ್ದೆಗಳ ಹೆಸರಿನಲ್ಲಿ ದಲಿತ ಸಮೂಹಕ್ಕೆ ಸೇರಬೇಕಾದ ಸುಮಾರು 2 ಲಕ್ಷ ಕೋಟಿ ರು.ಗಳನ್ನು ಅನ್ಯ ವಿಷಯಗಳಿಗೆ ಬಳಕೆ ಮಾಡಿ, ಸಿದ್ದರಾಮಯ್ಯ ನೇತೃತ್ವದ ಸರಕಾರ ದೊಡ್ಡ ವಂಚನೆ ಮಾಡಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಕಾಯ್ದೆಗಳ ಹೆಸರಿನಲ್ಲಿ ದಲಿತ ಸಮೂಹಕ್ಕೆ ಸೇರಬೇಕಾದ ಸುಮಾರು 2 ಲಕ್ಷ ಕೋಟಿ ರು.ಗಳನ್ನು ಅನ್ಯ ವಿಷಯಗಳಿಗೆ ಬಳಕೆ ಮಾಡಿ, ಸಿದ್ದರಾಮಯ್ಯ ನೇತೃತ್ವದ ಸರಕಾರ ದೊಡ್ಡ ವಂಚನೆ ಮಾಡಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದಲಿತ ಸಮೂಹದ ನಿರಂತರ ಹೋರಾಟದ ಫಲವಾಗಿ 2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರಕಾರ ನಾನು ದಲಿತ ಎಂದು ತೋರಿಸಿಕೊಳ್ಳಲು ಎಸ್.ಪಿ.ಪಿ ಮತ್ತು ಟಿ.ಎಸ್.ಪಿ ಕಾಯ್ದೆ ಜಾರಿಗೆ ತಂದರೂ,ಕಾಯ್ದೆಯ ಕಲಂ 7 ಸಿ ಮತ್ತು ಡಿ ಸೇರಿಸಿ,ಸರಕಾರಕ್ಕೆ ಅಗತ್ಯ ಎನಿಸಿದಾಗ ಈ ಹಣವನ್ನು ಅನ್ಯ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿ ಒಂದು ಕೈಯಲ್ಲಿ ಕೊಟ್ಟಂತೆ ಮಾಡಿ, ಮತ್ತೊಂದು ಕೈಯಲ್ಲಿ ಕಸಿದುಕೊಳ್ಳುವ ಕೆಲಸ ಮಾಡಿದ್ದಾರೆ. ಇದೊಂದು ಮಹಾ ವಂಚನೆ. 2013 ರಿಂದ 2025 ರವರೆಗೆ ಆಡಳಿತ ನಡೆಸಿದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಸುಮಾರು 2 ಲಕ್ಷ ಕೋಟಿ ರೂಗಳನ್ನು ಅನ್ಯ ಕಾರ್ಯಗಳಿಗೆ ಬಳಕೆ ಮಾಡಿದೆ ಎಂದರು.

ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಕಾಯ್ದೆ ತರಲು ಹೋರಾಟ ನಡೆಸಿದ ಸಮುದಾಯ ಕಾಯ್ದೆಯ ಕಲಂ 7ಸಿ ಮತ್ತು ಡಿ ಗೆ ತಿದ್ದುಪಡಿ ತರಬೇಕೆಂದು ನಿರಂತರ ಹೋರಾಟ ನಡೆಸಿದ್ದ ಫಲವಾಗಿ ಸರಕಾರ 7 ಡಿ ತಿದ್ದುಪಡಿ ತರಲಾಯಿತೇ ವಿನಹಃ 7ಸಿ ಯನ್ನು ಹಾಗೆಯೇ ಉಳಿಸಿಕೊಂಡಿದೆ. ಇದರ ಪರಿಣಾಮ ಪಾವಗಡ ತಾಲೂಕಿನ ಕುಡಿಯುವ ನೀರಿನ ಯೋಜನೆಗೆ 11 ಸಾವಿರ ಕೋಟಿ ರೂಗಳ ಬಳಸಲಾಗಿದೆ.ಸರಕಾರದ ಶಕ್ತಿ ಯೋಜನೆಗೆ ದಲಿತರಿಗೆ ಮೀಸಲಿಟ್ಟ ಅನುದಾನವನ್ನು ಬಳಕೆ ಮಾಡಲಾಗಿದೆ. ಹಾಗಾಗಿ 2026-27ನೇ ಸಾಲಿನ ಬಜೆಟ್ ಮಂಡಿಸುವ ವೇಳೆ ಕಾಯ್ದೆ7 ಸಿ ಗೂ ತಿದ್ದುಪಡಿ ತರಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ವೆಂಕಟಗಿರಿಯಯ್ಯ ತಿಳಿಸಿದರು.

ದಲಿತ ಸಂಘಟನೆಗಳ ಹೋರಾಟಕ್ಕೆ ಮಣಿದು ಸರಕಾರ ಚಳಿಗಾಲದ ಅಧಿವೇಶನದಲ್ಲಿ ಸಾಮಾಜಿಕ ಬಹಿಷ್ಕಾರ ತಡೆ ಕಾಯ್ದೆಯನ್ನು ಜಾರಿಗೆ ತಂದಿದೆ. ಆದರೆ ಶಿಕ್ಷೆಯ ಪ್ರಮಾಣವನ್ನು ಮೂರು ವರ್ಷಕ್ಕೆ ಸಿಮೀತಗೊಳಿಸಿದೆ. ಸುಪ್ರಿಂಕೋರ್ಟಿನ ಗೈಡ್‌ಲೈನ್ ಪ್ರಕಾರ ಮೂರು ವರ್ಷಕ್ಕಿಂತ ಕಡಿಮೆ ಶಿಕ್ಷೆ ಇರುವ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂದಿಸಲೇಬೇಕೆಂದಿಲ್ಲ. ಈ ನಿಯಮದ ಅಡಿಯಲ್ಲಿಯೇ ಅಟ್ರಾಸಿಟಿ ಕೇಸಿನಲ್ಲಿಯೂ ಆರೋಪಿಗಳ ವಿರುದ್ದ ಎಫ್.ಐ.ಆರ್.ಆದ ತಕ್ಷಣ ಬಂಧವಿಲ್ಲ. ಸಾಮಾಜಿಕ ಬಹಿಷ್ಕಾರ ತಡೆ ಕಾಯ್ದೆಯೂ ಅದೇ ರೀತಿ ಹಲ್ಲು ಕಿತ್ತ ಹಾವಿನಂತಾಗುತ್ತದೆ. ಹಾಗಾಗಿ ಶಿಕ್ಷೆಯ ಪ್ರಮಾಣವನ್ನು 3 ವರ್ಷಕ್ಕೆ ಬದಲಾಗಿ 7 ವರ್ಷಗಳಿಗೆ ಹೆಚ್ಚಿಸಬೇಕೆಂಬುದು ಎಲ್ಲಾ ಶೋಷಿತರ ಒತ್ತಾಯವಾಗಿದೆ ಎಂದು ವೆಂಕಟಗಿರಿಯಯ್ಯ ನುಡಿದರು.

ವೇತನ ಸಹಿತ ಋತುಚಕ್ರ ರಜೆ ಸಿಗಬೇಕಿರುವುದು ಕೃಷಿ,ಕೂಲಿ ಕಾರ್ಮಿಕ ಮಹಿಳೆಯರಿಗೆ. ಋತುಚಕ್ರದ ದಿನಗಳಲ್ಲಿ ಮಹಿಳೆಯರು ಎಷ್ಟು ನೋವು ಅನುಭವಿಸುತ್ತಾರೆ ಎಂಬುದನ್ನು ಅವರಿಂದಲೇ ಕೇಳಿ ತಿಳಿಯಬೇಕಿದೆ. ಸರಕಾರಿ ಹುದ್ದೆಗಳಲ್ಲಿ ಇರುವ ಹೆಂಗಸರಿಗಿಂತ ಹೊಲ, ಗದ್ದೆಗಳಲ್ಲಿ ಕೆಲಸ ಮಾಡುವ ಕೃಷಿ, ಕೂಲಿ ಕಾರ್ಮಿಕ ಮಹಿಳೆಯರು ಸಾಕಷ್ಟು ನೋವು ಅನುಭವಿಸುತ್ತಾರೆ. ಸರಕಾರ ಇಂತಹವರಿಗೆ ವೇತನ ಸಹಿತ ರಜೆ ನೀಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸರಕಾರವನ್ನು ಒತ್ತಾಯಿಸುತ್ತದೆ ಎಂದರು.

ಸರಕಾರ ಮೇಲಿನ ಈ ನಾಲ್ಕು ವಿಚಾರಗಳ ಬಗ್ಗೆ ಸೂಕ್ತ ನಿರ್ಧಾರವನ್ನು ಕೈಗೊಂಡು, ಮುಂಬರುವ 2026-27 ರ ಬಜೆಟ್‌ನಲ್ಲಿ ಅನುಷ್ಠಾನಕ್ಕೆ ತರದಿಂದ್ದರೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ಮಂತ್ರಿಗಳಿಗೆ ಕಂಡ ಕಂಡಲ್ಲಿ ಘೇರಾವ್ ಹಾಕುವ ಪ್ರತಿರೋಧದ ಪ್ರತಿಭಟನೆಯನ್ನು ದಸಂಸ ಕೈಗೊಳ್ಳಲಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಬೆಲ್ಲದಮಡು ಕೃಷ್ಣಪ್ಪ,ತುಮಕೂರು ಜಿಲ್ಲಾಧ್ಯಕ್ಷ ಟೈರ್ ರಂಗನಾಥ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಡಿ.ಹನುಮಂತರಾಯಪ್ಪ, ಮಹಿಳಾ ಮುಖಂಡರಾದ ಲಾವಣ್ಯ, ಮಂಡ್ಯ ಮಹಿಳಾ ಮುಖಂಡರಾದ ಸುಶ್ಮೀತ, ಮಧುಗಿರಿ ರವಿಕುಮಾರ್, ವಕೀಲರಾದ ಧನಂಜಯ್ಯ ಬ್ಯಾಡರಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

----------------

ಪೋಟೋ: ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಮಾತನಾಡಿದರು.