ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಬಡತನ ಮತ್ತು ಶೋಷಣೆ ವಿರುದ್ಧ ಹೋರಾಡಿ ಸಾಮಾಜಿಕ ನ್ಯಾಯ ನೀಡಿದವರು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಎಂದು ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್ ಬಣ್ಣಿಸಿದರು.ಡಿ.ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಸಮಿತಿಯು ಜೆಎಸ್ಎಸ್ ಆಸ್ಪತ್ರೆ ಆವರಣದ ರಾಜೇಂದ್ರ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಅರಸು ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಬಡವರು ಮತ್ತು ಶೋಷಿತರು ವಿಧಾನಸೌಧದ ಮೆಟ್ಟಿಲು ಹತ್ತುವ ಕನಸನ್ನು ಕಾಣದಿದ್ದ ಸಂದರ್ಭದಲ್ಲಿ ಜೊತೆಯಾಗಿ ಕೈಹಿಡಿದು ಕರೆದುಕೊಂಡು ಹೋಗಿ, ಸಾಮಾಜಿಕ ನ್ಯಾಯ ನೀಡಿದವರು. ಅವರ ಕಗ್ಗತ್ತಲಿನ ಬದುಕಿಗೆ ಬೆಳಕು ತೋರಿದರು. ಹೀಗಾಗಿ ಅವರನ್ನು ಕನ್ನಡನಾಡು ಯಾವಾಗಲೂ ಸ್ಮರಿಸಬೇಕು ಎಂದರು.
ಅರಸು ಅವರು ಭೂಸುಧಾರಣೆ ಕಾನೂನು ಜಾರಿಗೆ ತಂದರು. ಉಳುವವನೇ ಭೂಮಿಯ ಒಡೆಯ ಎಂದರು. ಆ ಮೂಲಕ ವೃದ್ಧರು, ಅಂಗವಿಕಲರು, ವಿಧವೆಯರ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು.ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಿದ್ದು ಅರಸು ಅವರು. ಈ ಮೀಸಲಾತಿಯಿಂದಾಗಿಯೇ ಹಿಂದುಳಿದ ಲಕ್ಷಾಂತರ ಮಂದಿ ಶಿಕ್ಷಣ ಮತ್ತು ಉದ್ಯೋಗ ಪಡೆದು ಬದುಕು ಕಟ್ಟಿಕೊಂಡಿದ್ದಾರೆ. ಹಿಂದುಳಿದ ವರ್ಗಗಳ ವಸತಿ ನಿಲಯ ಸ್ಥಾಪನೆ ಅರಸು ಅವರ ಕೊಡುಗೆ. ಓದುವ ಶಾಲೆಗಳು ಹಾಗೂ ವಾಸಿಸುವ ವಿದ್ಯಾರ್ಥಿ ನಿಲಯಗಳು ದೇವಸ್ಥಾನಗಳಿದ್ದಂತೆ. ಪ್ರತಿಯೊಬ್ಬ ವಿದ್ಯಾರ್ಥಿಯು ಅರಸು ಅವರ ತತ್ವ ಮತ್ತು ಆದರ್ಶ ಪಾಲಿಸಬೇಕು ಎಂದು ಕರೆ ನೀಡಿದರು.
ತಂದೆ- ತಾಯಿ ಎಲ್ಲ ರೀತಿಯ ನೋವುಗಳನ್ನು ಮರೆಮಾಚಿ ಮಕ್ಕಳಿಗೆ ವಿದ್ಯೆ ಕೊಡಿಸುತ್ತಾರೆ. ಅವರು ಬದುಕು ಹಸನಾಗಿಸಲು ಶ್ರಮಿಸುತ್ತಾರೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.ಅರಸು ಅವರು ಯಾವುದೇ ಜಾತಿಯ ವಿರೋಧಿಗಳಾಗಿರಲಿಲ್ಲ. ಆದರೆ ಜಾತ್ಯತೀತ ಸಿದ್ಧಾಂತದಲ್ಲಿ ನಂಬಿಕೆ ಇದ್ದವರು. ಅಂದಿನ ಮುಖ್ಯಮಂತ್ರಿ ಅರಸು ಹಾಗೂ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಹಲವಾರು ಸಾಮ್ಯತೆಗಳಿವೆ. ಅವುಗಳಲ್ಲಿ ಸಾಮಾಜಿಕ ನ್ಯಾಯವೂ ಒಂದು. ಅರಸು ಅವರಂತೆ ಸಿದ್ದರಾಮಯ್ಯ ಅವರು ಕೂಡ ಪಂಚ ಗ್ಯಾರಂಟಿಗಳನ್ನು ನೀಡಿ, ಬಡವರ ಬದುಕಿಗೆ ಆಧಾರ ಕಲ್ಪಿಸಿದ್ದಾರೆ ಎಂದು ಅವರು ಹೇಳಿದರು.
ಅರಸು ಭವನ ನಿರ್ಮಾಣವಾಗಬೇಕು:ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಅರಸು ಭವನ ನಿರ್ಮಿಸಬೇತು. ಆ ಭವನದಲ್ಲಿ ಸಾಮಾಜಿಕ ಚಿಂತನೆಗಳ ಬಗ್ಗೆ ಅಧ್ಯಯನ ನಡೆಯಬೇಕು ಎಂದರು.
ಮುಖ್ಯ ಅತಿಥಿಯಾಗಿದ್ದ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಮಾತನಾಡಿ, ಈಗ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ರಷ್ಟು ಮೀಸಲಾತಿ ಬಗ್ಗೆ ಮಾತನಾಡಲಾಗುತ್ತದೆ. ಆದರೆ ಅರಸು ಅವರು ತಮ್ಮ ಅಧಿಕಾರವಧಿಯಲ್ಲಿಯೇ ಮೀಸಲಾತಿ ನೀಡಿದ್ದರು ಎಂದರು.ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಅರಸು ಅವರನ್ನು ಆದರ್ಶವಾಗಿಟ್ಟುಕೊಂಡು ವಿದ್ಯಾರ್ಥಿಗಳು ಅಧ್ಯಯನ ನಡೆಸಬೇಕು. ಪ್ರಪಂಚದ ಕೆಲವೆಡೆ ನಡೆಯುತ್ತಿರುವ ಯುದ್ಧ ವಿರೋಧಿಸಿ, ಶಾಂತಿ ನೆಲೆಸುವಂತೆ ಮಾಡಬೇಕು ಎಂದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ, ಪ್ರತಿಷ್ಠಾಪನಾ ಸಮಿತಿಯ ಗೌರವ ಸಲಹೆಗಾರ ಡಾ.ವೈ.ಡಿ. ರಾಜಣ್ಣ ಮಾತನಾಡಿ, ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿರುವ ಗ್ರಂಥಾಲಯ ಬಳಕೆ ಮಾಡಬೇಕು. ಅರಸು ಅವರಂಥ ಸಾಧಕರ ಆತ್ಮಚರಿತ್ರೆ ಓದಬೇಕು ಎಂದರು.ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ, ಪ್ರತಿಷ್ಠಾಪನಾ ಸಮಿತಿಯ ಗೌರವಾಧ್ಯಕ್ಷ ಎಂ. ಚಂದ್ರಶೇಖರ್ ಮಾತನಾಡಿ, 92 ಲಕ್ಷ ರು. ವೆಚ್ಟದಲ್ಲಿ ಅರಸು ಅವರ ಪ್ರತಿಮೆ ಸಿದ್ಧವಾಗುತ್ತಿತ್ತು, ಮುಂದಿನ ಜನ್ಮದಿನದಂದು ಅನಾವರಣ ಮಾಡಲಾಗುತ್ತದೆ. ಇದಕ್ಕೆ ಹಿಂದಿನ ಸಿಎಂಗಳಾದ ಬಿ.ಎಸ್.ಯಡಿಯೂರಪ್ಸ, ಬಸವರಾಜ ಬೊಮ್ಮಾಯಿ, ಈಗಿನ ಸಿಎಂ ಸಿದ್ದರಾಮಯ್ಯ, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಶಾಸಕರಾದ ತನ್ವೀರ್ ಸೇಠ್, ಎಚ್. ವಿಶ್ವನಾಥ್ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ ಎಂದರು.
ಅರಸು ಅವರ ಸಾಮಾಜಿಕ ಸುಧಾರಣೆಗಳು ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಕುವೆಂಪುನಗರ ಬಿಸಿಎಂ ಹಾಸ್ಟೆಲ್ನ ಕೆ.ವಿ. ಪ್ರಣತಿ, ರಾಜರಾಜೇಶ್ವರಿ ನಗರ ಬಿಸಿಎಂ ಹಾಸ್ಟೆಲ್ನ ಎಸ್. ರಮ್ಯಾ ಹಾಗೂ ದಟ್ಟಗಳ್ಳಿ ಬಿಸಿಎಂ ಹಾಸ್ಟೆಲ್ನ ಕೆ.ಎಸ್. ಪಾರ್ವತಮ್ಮ ಅವರಿಗೆ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕ್ರಮವಾಗಿ ಮೊದಲ ಮೂರು ಬಹುಮಾನಗಳನ್ನು ವಿತರಿಸಿದರು. ಭಾಗವಹಿಸಿದ್ದ ಎಲ್ಲಾ 210 ವಿದ್ಯಾರ್ಥಿನಿಯರಿಗೂ ಪ್ರಶಸ್ತಿ ಪತ್ರ ನೀಡಲಾಯಿತು.ಸಮಿತಿಯ ಅಧ್ಯಕ್ಷ ಜಾಕೀರ್ ಹುಸೇನ್ ಸ್ವಾಗತಿಸಿದರು. ಪ್ರಧಾನ ಸಂಚಾಲಕ ಡೇರಿ ವೆಂಕಟೇಶ್ ನಿರೂಪಿಸಿದರು. ಸಂಚಾಲಕ ರದಿವುಲ್ಲಾಖಾನ್, ಮೈಸೂರು ಬಸವಣ್ಣ, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಜಿ. ಪ್ರಕಾಶ್, ವಸಂತಕುಮಾರಯ್ಯ, ನಾರಾಯಣರಾವ್, ಸತೀಶ್, ಭಾನು ಮೋಹನ್ ಇದ್ದರು.