ಸಾರಾಂಶ
ಅಧಿಕಾರದ ಸಲುವಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಡುವೆ ಕಿತ್ತಾಟ ನಡೆದಿದೆ. ಎರಡೂವರೆ ವರ್ಷದ ಬಳಿಕ ಸಿಎಂ ಬದಲಾವಣೆಗೆ ಅವರವರೇ ಕಚ್ಚಾಡುತ್ತಿದ್ದಾರೆ.
ಹುಬ್ಬಳ್ಳಿ:
ಕಾಂಗ್ರೆಸ್ಸಿನಲ್ಲಿ ಒಳಬೇಗುದಿ ಹೆಚ್ಚಾಗಿದೆ. ಆ ಒಳಬೇಗುದಿಯಿಂದಲೇ ಕಾಂಗ್ರೆಸ್ ಸರ್ಕಾರ ಬೀಳುತ್ತದೆ. ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಬೀಳಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭವಿಷ್ಯ ನುಡಿದರು.ಲೋಕಸಭೆ ಚುನಾವಣೆ ಬಳಿಕ ರಾಜ್ಯದ ಕಾಂಗ್ರೆಸ್ ಸರ್ಕಾರ ಬೀಳುತ್ತದೆ ಎಂಬ ಮಹಾರಾಷ್ಟ್ರದ ಸಿಎಂ ಏಕನಾಥ ಶಿಂಧೆ ಹೇಳಿಕೆ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಬಿಜೆಪಿ ಏನೂ ಮಾಡುವುದು ಬೇಡವೇ ಬೇಡ. ಅವರ ಪಕ್ಷದ ಶಾಸಕರೇ ಸರ್ಕಾರವನ್ನು ಬೀಳಿಸುತ್ತಾರೆ. ಅಧಿಕಾರದ ಸಲುವಾಗಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಡುವೆ ಕಿತ್ತಾಟ ನಡೆದಿದೆ. ಎರಡೂವರೆ ವರ್ಷದ ಬಳಿಕ ಸಿಎಂ ಬದಲಾವಣೆಗೆ ಅವರವರೇ ಕಚ್ಚಾಡುತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಗಟ್ಟಿಯಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಈ ಹಿಂದೆ 17 ಶಾಸಕರು ಪಕ್ಷ ಬಿಟ್ಟು ಹೋಗಿದ್ದರು. ಈ ಸರ್ಕಾರವೂ ಯಾವಾಗ ಬೇಕಾದರೂ ಪತನವಾಗಬಹುದು ಎಂದರು.ಟಿಕೆಟ್ ಸಿಗಬೇಕಿತ್ತು:
ಮಾಜಿ ಶಾಸಕ ರಘುಪತಿಭಟ್‌ಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ಸಿಗಬೇಕಿತ್ತು. ಅವರಿಗೆ ಅನ್ಯಾಯವಾಗುವುದು ಸರಿಯಲ್ಲ. ಎಂಎಲ್‌ಎ ಚುನಾವಣೆಯಲ್ಲಿ ಅವರಿಗೆ ಹಿನ್ನಡೆಯಾಗಿದೆ. ನಾನು ಅವರೊಂದಿಗೆ ಮಾತನಾಡುವೆ ಎಂದರು.ಸಿಬಿಐಗೆ ಕೊಡಬೇಕು:
ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಕೇಳಿದ ಪ್ರಶ್ನೆಗೆ ಅದು ವೈಯಕ್ತಿಕ ವಿಚಾರ. ಎಸ್‌ಐಟಿ ತನಿಖೆ ನಡೆಸುತ್ತಿದೆ. ಆದರೆ ಪ್ರಕರಣವನ್ನು ಸಿಬಿಐಗೆ ಕೊಡಬೇಕಿತ್ತು ಎಂದಷ್ಟೇ ಹೇಳಿದರು.ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಣದ ಹೊಳೆಯನ್ನೇ ಹರಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಶೆಟ್ಟರ್ ಪ್ರತಿಕ್ರಿಯಿಸಿದರು.