ಸ್ವಾತಂತ್ರ್ಯ ಸಿಕ್ಕು 79 ವರ್ಷ ಕಳೆದರೂ ಇನ್ನೂ ಅಸಮಾನತೆ ತಾಂಡವವಾಡುತ್ತಿರುವುದು ನೋವಿನ ಸಂಗತಿ. ವಿವೇಕಾನಂದ ದೊಡ್ಡಮನಿ ಅವರ ಕುಟುಂಬದವರು ಬಸವಣ್ಣ ಹಾಗೂ ಅಂಬೇಡ್ಕರ್ ಸಿದ್ಧಾಂತ, ತತ್ವ ನೆಚ್ಚಿ ಜೀವಿಸುತ್ತಿದ್ದಾರೆ. ಆದರೂ ಈ ಕೃತ್ಯ ನಡೆದಿರುವುದು ಮನಸ್ಸಿಗೆ ಖೇದವನ್ನುಂಟು ಮಾಡಿದೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ಹುಬ್ಬಳ್ಳಿ:
ಮರ್ಯಾದೆಗೇಡು ಹತ್ಯೆ ಪ್ರಕರಣದಲ್ಲಿ ದೌರ್ಜನ್ಯಕ್ಕೆ ಒಳಗಾಗಿರುವ ಕುಟುಂಬದ ಬೆನ್ನೆಲುಬಾಗಿ ಸರ್ಕಾರ ಸದಾಕಾಲ ಇರುತ್ತದೆ. ದೊಡ್ಡಮನಿ ಕುಟುಂಬ ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.ಮರ್ಯಾದೆ ಹತ್ಯೆ ಪ್ರಕರಣದಲ್ಲಿ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿರುವ ಯುವಕನ ತಂದೆ-ತಾಯಿ ಸೇರಿದಂತೆ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಬಳಿಕ ಇನಾಂವೀರಾಪುರ ಗ್ರಾಮದಲ್ಲಿ ಘಟನೆ ನಡೆದಿರುವ ಬಗ್ಗೆ ಮಾಹಿತಿ ಪಡೆದು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಸ್ವಾತಂತ್ರ್ಯ ಸಿಕ್ಕು 79 ವರ್ಷ ಕಳೆದರೂ ಇನ್ನೂ ಅಸಮಾನತೆ ತಾಂಡವವಾಡುತ್ತಿರುವುದು ನೋವಿನ ಸಂಗತಿ. ವಿವೇಕಾನಂದ ದೊಡ್ಡಮನಿ ಅವರ ಕುಟುಂಬದವರು ಬಸವಣ್ಣ ಹಾಗೂ ಅಂಬೇಡ್ಕರ್ ಸಿದ್ಧಾಂತ, ತತ್ವ ನೆಚ್ಚಿ ಜೀವಿಸುತ್ತಿದ್ದಾರೆ. ಆದರೂ ಈ ಕೃತ್ಯ ನಡೆದಿರುವುದು ಮನಸ್ಸಿಗೆ ಖೇದವನ್ನುಂಟು ಮಾಡಿದೆ ಎಂದರು.ಸಮಾಜದಲ್ಲಿ ಇಂಥ ಅಮಾನವೀಯ ಘಟನೆಗಳು ನಡೆಯಬಾರದು. ನಡೆದಿರುವುದು ಬೇಸರದ ಸಂಗತಿ. ಮಗಳ ಜೀವ ತೆಗೆದ ತಂದೆಯ ಕೃತ್ಯ ಖಂಡನೀಯ. ಸಂತ್ರಸ್ತ ಯುವಕ ಹಾಗೂ ಕುಟುಂಬದವರ ಪರವಾಗಿ ಸರ್ಕಾರ, ಜಿಲ್ಲಾಡಳಿತವು ದೃಢವಾಗಿ ನಿಲ್ಲಲಿದೆ. ಘಟನೆ ನೋಡಿದಲ್ಲಿ ಈ ಕುಟುಂಬ ಸಾಮಾಜಿಕ ಬಹಿಷ್ಕಾರಕ್ಕೆ ತುತ್ತಾದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈಗಲೂ ದೊಡ್ಡಮನಿ ಕುಟುಂಬ ತಮ್ಮ ಗ್ರಾಮಕ್ಕೆ ತೆರಳಲು ಭಯಪಡುತ್ತಿದ್ದಾರೆ. ಆದಷ್ಟು ಶೀಘ್ರದಲ್ಲಿ ಗ್ರಾಮದಲ್ಲಿ ಸೌಹಾರ್ದ ಸಭೆ ನಡೆಸಿ ಕುಟುಂಬದವರಿಗೆ ಹಾಗೂ ಗ್ರಾಮಸ್ಥರಿಗೆ ಧೈರ್ಯ ತುಂಬಲಾಗುವುದು ಎಂದು ಲಾಡ್ ಹೇಳಿದರು.ಕರ್ತವ್ಯ ಲೋಪ; ಕ್ರಮ
ಇನಾಂವೀರಾಪೂರ ಗ್ರಾಮದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಪೊಲೀಸರು ಹಾಗೂ ಬೆಳಗಲಿ ಪಿಡಿಒ ಅವರನ್ನು ಅಮಾನತು ಮಾಡಲಾಗಿದೆ. ಇನ್ನೂ ಕೆಲ ಇಲಾಖೆ ಅಧಿಕಾರಿಗಳು ನಿಯಮಾನುಸಾರ ಕರ್ತವ್ಯ ನಿರ್ವಹಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಈ ಕುರಿತು ತನಿಖೆ ನಡೆಸಿ ವರದಿ ಕೊಡಲು ಜಿಲ್ಲಾಧಿಕಾರಿ, ತನಿಖಾಧಿಕಾರಿಯನ್ನು ನೇಮಿಸಿ ಆದೇಶಿಸಿದ್ದಾರೆ. ಸಲ್ಲಿಸುವ ತನಿಖಾ ವರದಿಯನ್ವಯ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಸಮಾಜ ಕಲ್ಯಾಣ ಸಚಿವರೊಂದಿಗೂ ಚರ್ಚಿಸುವೆ ಎಂದರು.ಇದೇ ವೇಳೆ ಗಾಯಾಳು ಕುಟುಂಬಕ್ಕೆ ಸಚಿವ ಸಂತೋಷ ಲಾಡ್ ಅವರು ವೈಯಕ್ತಿಕವಾಗಿ ₹2.50 ಲಕ್ಷ ಸಹಾಯಧನ ನೀಡಿದರು.
ಈ ವೇಳೆ ಶಾಸಕ ಎನ್.ಎಚ್. ಕೋನರಡ್ಡಿ, ಎಸ್‌ಪಿ ಗುಂಜನ್ ಆರ್ಯ, ಜಿಪಂ ಸಿಇಒ ಭುವನೇಶ ಪಾಟೀಲ, ಪ್ರಮುಖರಾದ ಅನಿಲಕುಮಾರ ಪಾಟೀಲ, ಪ್ರೇಮನಾಥ ಚಿಕ್ಕತುಂಬಳ, ಶ್ರೀಧರ ಕಂದಗಲ್ ಸೇರಿದಂತೆ ಹಲವರಿದ್ದರು.ಕೆಲ ದಿನಗಳಿಂದ ನನ್ನ ಆರೋಗ್ಯ ಸರಿ ಇರಲಿಲ್ಲ. ಹಾಗಾಗಿ ಗಾಯಾಳುಗಳು ಹಾಗೂ ಘಟನಾ ಸ್ಥಳಕ್ಕೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ಆದರೆ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಮಾಹಿತಿ ಪಡೆದುಕೊಂಡಿದ್ದೇನೆ. ರಾಜ್ಯ ಸರ್ಕಾರದಿಂದ ಮಾಡಬೇಕಾದ ಎಲ್ಲ ಸಹಾಯ, ಸಹಕಾರ ಮಾಡಲಾಗುತ್ತಿದೆ. ಇಡೀ ಸರ್ಕಾರವೇ ಆ ಕುಟುಂಬದ ಜತೆ ನಿಲ್ಲಲಿದೆ ಎಂದು ಸಚಿವ ಸಂತೋಷ ಲಾಡ್ ಭರವಸೆ ನೀಡಿದರು.