ಸರ್ಕಾರಗಳಿಂದ ದುಡಿಯುವ ಜನರ ಬದುಕು ಛಿದ್ರ

| Published : May 21 2025, 12:25 AM IST

ಸಾರಾಂಶ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ದುಡಿಯುವ ಜನರ ಬದುಕು ಛಿದ್ರಗೊಳಿಸುವ, ಕಾರ್ಪೋರೇಟ್‌ ಕಂಪನಿಗಳ ಲೂಟಿಗೆ ರತ್ನಗಂಬಳಿ ಹಾಸುವ ಶ್ರಮ ವಿರೋಧಿ ಕಾಯ್ದೆಗಳನ್ನು ತರಲು ಹೊರಟಿವೆ.

ಕೊಪ್ಪಳ:

ದೇಶಾದ್ಯಂತ ಜಾರಿಗೊಳಿಸುತ್ತಿರುವ ನಾಲ್ಕು ಕಾರ್ಮಿಕ ಕಾನೂನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ ಹಿನ್ನೆಲೆಯಲ್ಲಿ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಂಟಿ ಕಾರ್ಮಿಕ ಸಂಘಟನೆಗಳ ಸಮನ್ವಯ ಸಮಿತಿ (ಜೆಸಿಟಿಯು) ಹಾಗೂ ಸಂಯುಕ್ತ ಕಿಸಾನ್‌ ಮೋರ್ಚಾ ಜಂಟಿಯಾಗಿ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಗವಿಸಿದ್ದಪ್ಪ ಮಣ್ಣೂರ ಮತ್ತು ಮಹಾವೀರ ಅಳ್ಳಳ್ಳಿ ಮೂಲಕ ರಾಷ್ಟ್ರಪತಿಗೆ ಸಲ್ಲಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ದುಡಿಯುವ ಜನರ ಬದುಕು ಛಿದ್ರಗೊಳಿಸುವ, ಕಾರ್ಪೋರೇಟ್‌ ಕಂಪನಿಗಳ ಲೂಟಿಗೆ ರತ್ನಗಂಬಳಿ ಹಾಸುವ ಶ್ರಮ ವಿರೋಧಿ ಕಾಯ್ದೆಗಳನ್ನು ತರಲು ಹೊರಟಿವೆ. ದುಡಿಯುವ ಜನರ ಬದುಕಿನ ಮೇಲೆ ನಡೆಯಲಿರುವ ಈ ಪ್ರಹಾರವನ್ನು ವಿರೋಧಿಸಿ ಜೆಸಿಟಿಯು (ಜಾಯಿಂಟ್‌ ಕಮಿಟಿ ಆಫ್‌ ಟ್ರೇಡ್‌ ಯೂನಿಯನ್) ಮತ್ತು ಎಸ್‌ಕೆಎಂ (ಸಂಯುಕ್ತ ಕಿಸಾನ್‌ ಮೋರ್ಚಾ) ಜಂಟಿ ನೇತೃತ್ವದಲ್ಲಿ ದೇಶವ್ಯಾಪಿ ಬೃಹತ್ ಹೋರಾಟಕ್ಕೆ ಕರೆ ನೀಡಲಾಗಿದೆ. ರೈತರು ಮತ್ತು ಕಾರ್ಮಿಕರು ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಹೋರಾಟಕ್ಕಿಳಿದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವೂ ಬಿಜೆಪಿ ತಂದಿದ್ದ ನೀತಿಗಳನ್ನೇ ಮುಂದುವರಿಸಿದ್ದು ಮತ್ತು ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಕೊಟ್ಟ ಮಾತು ಮರೆತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಕಾರ್ಮಿಕರಿಗೆ ಭದ್ರತೆ ಇಲ್ಲ. ಮಾಲೀಕರಿಗೆ ಯಾವುದೇ ಹೊಣೆಗಾರಿಕೆ ಇಲ್ಲದೆ ಅಗ್ಗದ ಕೂಲಿಯಲ್ಲಿ ಅತಿ ಹೆಚ್ಚು ಗಂಟೆ ದುಡಿಯುವ, ಅಪಾಯಕಾರಿ ಪರಿಸ್ಥಿತಿಗಳಲ್ಲೂ ಕೆಲಸ ಮಾಡುವುದು, ಬೇಡವಾದರೆ ಬಿಸಾಕುವ ಸಂಪೂರ್ಣ ಸ್ವಾತಂತ್ರ್ಯ ಮಾಲೀಕರಿಗೆ ನೀಡುವುದು, ಅಗ್ಗದ ದರದಲ್ಲಿ ಭೂಮಿ, ಉಚಿತ ವಿದ್ಯುತ್‌-ನೀರು ಒದಗಿಸುವುದು, ತೆರಿಗೆಯಲ್ಲಿ ಸಬ್ಸಿಡಿ, ಬ್ಯಾಂಕ್‌ ಸಾಲ ಮನ್ನಾ, ಹೊಸ ಕಂಪನಿಗಳಿಗೆ ₹ 20 ಲಕ್ಷ ಕೋಟಿ ವರೆಗೆ ಉತ್ತೇಜನ ನಿಧಿ ಕೊಟ್ಟು ಪ್ರೋತ್ಸಾಹಿಸಲಾಗುತ್ತದೆ. ಸರ್ಕಾರದ ಒಡೆತನದಲ್ಲಿದ್ದ ರಸ್ತೆ, ವಿದ್ಯುಚ್ಛಕ್ತಿ, ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌, ಮಿಲಿಟರಿ ಉತ್ಪಾದನೆ, ವಿಮಾನ, ರೈಲ್ವೆ, ಸ್ಟೀಲ್‌, ಉಕ್ಕು, ಕಲ್ಲಿದ್ದಲನ್ನು ತಯಾರಿಸುವ ಕೈಗಾರಿಕೆಗಳು, ಬ್ಯಾಂಕ್‌, ಎಲ್‌ಐಸಿ ಖಾಸಗೀಕರಣಗೊಳಿಸುವುದನ್ನು ನಿಲ್ಲಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಜಿಲ್ಲಾ ಜಂಟಿ ಕಾರ್ಮಿಕ ಸಂಘಟನೆಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಮುಖಂಡರಾದ ಎಐಯುಟಿಯುಸಿ ಶರಣು ಗಡ್ಡಿ ,ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಸಿಂ ಸರ್ದಾರ್, ಎಐಟಿಯುಸಿ ಜಿಲ್ಲಾಧ್ಯಕ್ಷ ಬಸವರಾಜ್ ಶೀಲವಂತರ, ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ. ಗಫಾರ, ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ, ಆಶಾ ಸಂಘದ ಕೊಪ್ಪಳ ತಾಲೂಕಾಧ್ಯಕ್ಷೆ ಸುನೀತಾ ಆಚಾರ, ಮುಖಂಡ ಗಾಳೆಪ್ಪ ಮುಂಗೋಲಿ, ಮುದುಕಪ್ಪ, ಈರಪ್ಪ, ವೇಕಟೇಶ ರೆಡ್ಡಿ, ಅಂಬರೀಶ ಗಾಣಿಗ, ಸ್ವಚ್ಛ ವಾಹಿನಿಯ ಸಂಚಾಲಕಿ ರತ್ನ ಕೇಸ್ಲಾಪುರ, ರಂಗಮ್ಮ, ತಾಜುದ್ದೀನ್ ಬೆಳಗಟ್ಟಿ. ಮಂಜುನಾಥ. ಶಾಂತಮ್ಮ ಎಲಿಗಾರ, ಪ್ರದೀಪ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.