ಮೂಲತಃ ಕೊಪ್ಪಳ ಜಿಲ್ಲೆಯ ಬಿನ್ನಾಳ ಗ್ರಾಮದವರೇ ಆದ ಸಿ.ಎಚ್. ವಿಜಯಶಂಕರ ಅವರಿಗೆ ಗವಿಸಿದ್ದೇಶ್ವರ ಜಾತ್ರೆಯ ರಥೋತ್ಸವದ ಉದ್ಘಾಟನೆ ಭಾಗ್ಯ ಒಲಿದು ಬಂದಿದೆ

ಕೊಪ್ಪಳ: 2026ರ ಜ. 5ರಂದು ಜರುಗಲಿರುವ ರಾಜ್ಯದಲ್ಲಿಯೇ ಹೆಸರು ಆಗಿರುವ ಕೊಪ್ಪಳದ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವವನ್ನು ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯಶಂಕರ ಉದ್ಘಾಟಿಸಲಿದ್ದಾರೆ.

ಈ ಸಲ ಗವಿಸಿದ್ದೇಶ್ವರ ರಥೋತ್ಸವ ಮೇಘಾಲಯದ ರಾಜ್ಯಪಾಲರಿಂದ ಉದ್ಘಾಟನೆ ಆಗಲಿದ್ದು, ಇನ್ನೊಂದು ವಿಶೇಷ ಹಾಗೂ ಹೆಮ್ಮೆ ಸಂಗತಿ ಅಂದರೆ ವಿಜಯಶಂಕರ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದವರು ಎಂಬುದು. ವಿಜಯಶಂಕರ್ ಅವರು ವ್ಯವಸಾಯ ಮಾಡುತ್ತಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡರು. ಅವರ ಕುಟುಂಬದ ಹಿರಿಯರು ಬಿನ್ನಾಳ ಗ್ರಾಮದಿಂದ ಹಾವೇರಿಯ ಬ್ಯಾಡಗಿಯಲ್ಲಿ ನೆಲೆಸಿದ್ದರಿಂದ ವಿಜಯಶಂಕರ ಅವರ ಜನನ ಹಾಗೂ ವಿದ್ಯಾಭ್ಯಾಸ ಅಲ್ಲಿಯೇ ಆಯಿತು. ಆನಂತರ ಅವರ ಕುಟುಂಬ ಬ್ಯಾಡಗಿಯಿಂದ ಮೈಸೂರಿಗೆ ವಲಸೆ ಹೋಯಿತು. ವಿಜಯಶಂಕರ ಅವರು ಅಕ್ಟೋಬರ್ 21 1956ರಲ್ಲಿ ಜನಿಸಿದರು. ಬಿಎ, ಎಲ್ಎಲ್‌ಬಿ ಪದವಿ ಪಡೆದ ಅವರು ಬಾಲ್ಯ ಸ್ವಯಂ ಸೇವಕ್ ಅಭ್ಯಾಸ ಸಹ ಗೈದಿದ್ದಾರೆ. ಸಮಾಜ ಸೇವೆ ಮಾಡುವ ಹಂಬಲದಿಂದ ರಾಜಕೀಯ ಪ್ರವೇಶ ಮಾಡಿದ ಅವರು, 1992ರಿಂದ 94ರ ವರೆಗೆ ಮೈಸೂರು (ಮೈಸೂರು ಮತ್ತು ಚಾಮರಾಜನಗರ ಅಖಂಡ ಜಿಲ್ಲೆ) ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದರು. 1994ರಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಸಹ ಆಯ್ಕೆಯಾಗಿ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡರು. 1998ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಿ ಲೋಕಸಭಾ ಸದಸ್ಯರಾಗಿ ಸಹ ಆಯ್ಕೆಯಾದರು. 1998-2000ರ ವರೆಗೆ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. 1999ರಲ್ಲಿ ನಡೆದ ಮಧ್ಯಂತರ ಲೋಕಸಭಾ ಚುನಾವಣೆಯಲ್ಲಿ ಅಲ್ಪಮತದಿಂದ ಹಿನ್ನಡೆಯಾಯಿತು. ಅವರಿಗೆ 2000ರಿಂದ 2003ರ ವರೆಗೆ (3 ವರ್ಷಗಳ ಕಾಲ) ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದರು.

2004ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಎರಡನೇ ಬಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. 2004-2008ರ ಅವಧಿ ವರೆಗೆ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯರಾದರು. 2004-2006ರ ವರೆಗೆ ಬಿಜೆಪಿ ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ಎರಡನೇ ಬಾರಿಗೆ ಜವಾಬ್ದಾರಿ ನಿರ್ವಹಿಸಿದರು. 2008-2010ರ ವರೆಗೆ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರಾದರು. 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅತ್ಯಲ್ಪ ಮತದಿಂದ ಹಿನ್ನಡೆ ಅನುಭವಿಸಿದರು. 2010ರ ಮೇ ತಿಂಗಳಲ್ಲಿ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು. 2010-2013ರ ವರೆಗೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದರು. 2010ರಿಂದ 2011ರ ವರೆಗೆ ರಾಜ್ಯ ಸರ್ಕಾರದಲ್ಲಿ ಅರಣ್ಯ ಮತ್ತು ಸಣ್ಣ ಕೈಗಾರಿಕಾ ಸಚಿವರಾದರು. ಆನಂತರ 2016ರ ವರೆಗೆ ವಿಪ ಸದಸ್ಯರಾಗಿದ್ದರು. ಸದ್ಯ ಮೇಘಾಲಯದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜಾತ್ರೆಯ ಉದ್ಘಾಟನೆ ಭಾಗ್ಯ:

ಮೂಲತಃ ಕೊಪ್ಪಳ ಜಿಲ್ಲೆಯ ಬಿನ್ನಾಳ ಗ್ರಾಮದವರೇ ಆದ ಸಿ.ಎಚ್. ವಿಜಯಶಂಕರ ಅವರಿಗೆ ಗವಿಸಿದ್ದೇಶ್ವರ ಜಾತ್ರೆಯ ರಥೋತ್ಸವದ ಉದ್ಘಾಟನೆ ಭಾಗ್ಯ ಒಲಿದು ಬಂದಿದೆ. ಸರಳ ಸಜ್ಜನಿಕೆ ಹಾಗೂ ಅವಿರತ ಸೇವೆಯಿಂದ ರಾಜ್ಯಪಾಲ ಹುದ್ದೆ ಅಲಂಕರಿಸಿದ ಜಿಲ್ಲೆಯ ಹೆಮ್ಮೆ ಪುತ್ರ ವಿಜಯಶಂಕರ ಅವರಾಗಿದ್ದಾರೆ.