ಸಾರಾಂಶ
ಸಾಗರ / ಶಿಕಾರಿಪುರ / ಭದ್ರಾವತಿ : ಮೂಡಾ ಹಗರಣದಲ್ಲಿ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮಕ್ಕೆ ಆದೇಶಿಸಿರುವುದನ್ನು ವಿರೋಧಿಸಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಸಂಜೆ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿಗಳ ಕಚೇರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸಿ ಚಂದ್ರಪ್ಪ ಮಾತನಾಡಿ, ರಾಜ್ಯಪಾಲರು ಬಿಜೆಪಿಯವರ ಕೈಗೊಂಬೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಕಾನೂನು ಕ್ರಮಕ್ಕೆ ಆದೇಶಿಸಿದ್ದಾರೆ. ರಾಜ್ಯಪಾಲರು ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತು ರಾಜಕೀಯ ಮಾಡಬಾರದು. ರಾಜ್ಯಪಾಲರ ತೀರ್ಮಾನವನ್ನು ನಾವೆಲ್ಲ ಒಟ್ಟಾಗಿ ಖಂಡಿಸುತ್ತೇವೆ ಎಂದರು.
ಸಿದ್ದರಾಮಯ್ಯನವರದ್ದು ಮಾದರಿ ವ್ಯಕ್ತಿತ್ವ.ಇಂತಹ ಸಚ್ಛಾರಿತ್ರ್ಯ ಮುಖ್ಯಮಂತ್ರಿ ಬೇರೆ ರಾಜ್ಯದಲ್ಲಿ ಕಾಣಸಿಗುವುದಿಲ್ಲ. ಬ್ಲಾಕ್‌ಮೇಲ್ ತಂತ್ರ ಮಾಡುವ ಟಿ.ಜೆ. ಅಬ್ರಾಹಂ ಎನ್ನುವವರ ದೂರು ಆಧರಿಸಿ ರಾಜ್ಯಪಾಲರು ತೀರ್ಮಾನ ತೆಗೆದುಕೊಳ್ಳುವುದು ತಪ್ಪು. ಯಾವುದೇ ಪಕ್ಷ ಹಣ ನೀಡಿದರೂ ಅದನ್ನು ಪಡೆದು ರಾಜಕಾರಣಿ ಗಳನ್ನು ಹೆದರಿಸುವ ಬ್ಲಾಕ್‌ಮೇಲ್ ತಂತ್ರವನ್ನು ಅಬ್ರಾಹಂ ಮೊದಲಿನಿಂದಲೂ ಮಾಡಿಕೊಂಡು ಬರುತ್ತಿದ್ದಾರೆ. ನಾಡಿಗೆ ಮಾದರಿ ರಾಜಕಾರಣಿಯಾಗಿರುವ ಸಿದ್ದರಾಮಯ್ಯನವರು ಉಳಿಯಬೇಕು, ರಾಜ್ಯಪಾಲರು ತೊಲಗಬೇಕು ಎನ್ನುವುದು ಹೋರಾಟದ ಆಶಯ ಎಂದು ಹೇಳಿದರು.
ನಗರ ಘಟಕದ ಅಧ್ಯಕ್ಷ ಸುರೇಶ್ ಬಾಬು, ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾವತಿ ಚಂದ್ರಕಾಂತ್ ಮೊದಲಾದರು ಮಾತನಾಡಿ, ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ಪಕ್ಷದ ಕಚೇರಿಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಸಾಗಿದ ಕಾರ್ಯಕರ್ತರು ಕೋರ್ಟ್ ವೃತ್ತದಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದರು.
ಪ್ರಮುಖರಾದ ದಿನೇಶ್, ಗಣಪತಿ ಮಂಡಗಳಲೆ, ಹೊಳೆಯಪ್ಪ, ರವಿ ಲಿಂಗನಮಕ್ಕಿ, ಅಶೋಕ್ ಬೇಳೂರು, ಎಲ್.ಚಂದ್ರಪ್ಪ, ರಾಮನಗರ ಚಂದ್ರು, ಕುಗ್ವೆ ಬಸವ ರಾಜ್, ಆರ್ಥರ್ ಗೋಮ್ಸ್, ವಿಲ್ಸನ್ ಗೋನ್ಸಾಲ್ವಿಸ್, ಅದ್ದು, ಮಧುಮಾಲತಿ, ಉಷಾ, ಜ್ಯೋತಿ, ಭವ್ಯ ಕೃಷ್ಣಮೂರ್ತಿ, ಜಯಶೀಲ, ಸಬೀನಾ, ಆಯೇಷಾ, ಮೊದಲಾದವರು ಹಾಜರಿದ್ದರು.
ಶಿಕಾರಿಪುರಕ್ಕೆ ವಿಜಯೇಂದ್ರ ಕಾಲಿಟ್ಟರೆ ಘೇರಾವ್ !
ಶಿಕಾರಿಪುರ: ಸಾವಿರಾರು ಕೋಟಿ ಆಸ್ತಿ ಮಾಡಿರುವ ಬಿ.ಎಸ್ ಯಡಿಯೂರಪ್ಪ ಹಾಗೂ ಅವರ ಕುಟುಂಬದ ತನಿಖೆಯಾಗಬೇಕು, ವಿಜಯೇಂದ್ರ ಶಿಕಾರಿಪುರಕ್ಕೆ ಬಂದರೆ ಘೇರಾವ್ ಹಾಕಲಾಗುವುದು ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಯದರ್ಶಿ ನಾಗರಾಜ್ ಗೌಡ ಹೇಳಿದರು.
ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಭಾನುವಾರ ನಡೆದ ಪ್ರತಿಭಟನೆ ಸಭೆಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ಅಧಿಕಾರ ದುರುಪಯೋಗಪಡಿಸಿಕೊಂಡು ರಾಜ್ಯಪಾಲರ ಮೂಲಕ ಪ್ರಾಸಿಕ್ಯೂಷನ್ ಕೊಡಿಸಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಮತ್ತು ಅವರ ಕುಟುಂಬದ ಸಮಗ್ರ ಆಸ್ತಿಗಳ ತನಿಖೆ ನಡೆಸುವ ಬಗ್ಗೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ಕಾಂಗ್ರೆಸ್ ಪಕ್ಷದಲ್ಲಿರುವ ಕಾರ್ಯಕರ್ತರು ಅಂಜುವ ಮಕ್ಕಳ್ಳಲ್ಲ, ಇನ್ನು ಮುಂದೆ ನಿಮ್ಮ ಆಟ ಹೇಗಿರುತ್ತೆ ನೋಡಿ ಎಂದು ಎಚ್ಚರಿಕೆ ನೀಡಿದ ಅವರು ಶಿಕಾರಿಪುರ ದಲ್ಲಿ ನಿಮ್ಮ ದಬ್ಬಾಳಿಕೆಯ ವಿರುದ್ಧ ಕಾಂಗ್ರೆಸ್ ಪಕ್ಷಕ್ಕೆ 75,000 ಮತಗಳನ್ನು ತಾಲೂಕಿನ ಜನತೆ ನೀಡಿ ಆಶೀರ್ವದಿಸಿದ್ದಾರೆ ಮರೆಯಬೇಡಿ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಮ್ ಪಾರಿವಾಳ ಮಾತನಾಡಿ ,136 ಸ್ಥಾನ ಗೆದ್ದಿರುವ ನಮ್ಮ ಸರ್ಕಾರವನ್ನು ಅತಂತ್ರ ಮಾಡಲು ಸಾಧ್ಯವಿಲ್ಲ, ರಾಜ್ಯಪಾಲರ ಹಾಗೂ ಬಿಜೆಪಿ ಕುತಂತ್ರದಿಂದ ಸಿದ್ದರಾಮಯ್ಯನವರ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದಾರೆ ಇದಕ್ಕೆ ಕಾಲವೇ ಉತ್ತರಿಸಲಿದೆ ಎಂದ ಅವರು ನಿಮ್ಮ ಹಡಬೆ ದುಡ್ಡಿನ ವಿವರವನ್ನು ಅಂಕಿ, ಅಂಶದ ಮೂಲಕ ಜನತೆ ಮುಂದೆ ತೆರೆದಿಡುತ್ತೇವೆ ಎಂದರು.
ಜಿಲ್ಲಾಧ್ಯಕ್ಷ ಆರ್.ಪ್ರಸನ್ನ ಕುಮಾರ್ ಮಾತನಾಡಿ, 2006ರಿಂದಲೂ ಬಿಜೆಪಿ ಎಂದು ನೇರವಾಗಿ ಸರ್ಕಾರ ರಚನೆ ಮಾಡಿಲ್ಲ, ಕೇವಲ ಹಿಂಬಾಗಿಲಿನಿಂದ ಸರ್ಕಾರ ರಚನೆ ಮಾಡಿದ್ದಾರೆ ಈ ಬಾರಿ ಅವರ ಪ್ರಯತ್ನ ವಿಫಲವಾಗಲಿದೆ, ಮುಂದೆ ನೀವು ಪಶ್ಚಾತ್ತಾಪ ಪಡುತ್ತೀರ ಎಂದರು.ಈ ಸಂದರ್ಭ ಬಿಎಸ್ವೈ ಮನೆಗೆ ಮುತ್ತಿಗೆ ಹಾಕಲು ಬಂದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು. ಈ ಸಂದರ್ಭ ಪಕ್ಷದ ಮುಖಂಡರಾದ ನಗರದ ಮಹದೇವಪ್ಪ, ಶಿರಾಳಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರನಗೌಡ ಮುಖಂಡರಾದ ಉಳ್ಳಿ ದರ್ಶನ್, ಭಂಡಾರಿ ಮಾಲತೇಶ್, ರಾಘವೇಂದ್ರ ನಾಯಕ್, ಶಿವುನಾಯಕ್, ಶಿವು ಹುಲ್ಮಾರ್, ಮಂಜು ಹುಣಸೆ ಕೊಪ್ಪ, ಎಚ್. ಎಸ್. ರವೀಂದ್ರ ಮಾರವಳ್ಳಿ ಉಮೇಶ್, ನಗರದ ರವಿ, ಸುರೇಶ್ ಧಾರವಾಡ ಹಾಗೂ ತಾಲೂಕಿನ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.ಸಿಎಂ ವಿರುದ್ಧ ತನಿಖೆಗೆ ಸಮ್ಮತಿ ಹಿಂದೆ ಷಡ್ಯಂತ್ರ
ಭದ್ರಾವತಿ: ಮುಖ್ಯಮಂತ್ರಿ ಸಿದ್ದರಾಮಯ್ಯರವರ ವಿರುದ್ಧ ತನಿಖೆಗೆ ಆದೇಶ ನೀಡಿರುವ ರಾಜ್ಯಪಾಲರ ಸೇವೆಯನ್ನು ಹಿಂಪಡೆಯಬೇಕೆಂದು ಭಾನುವಾರ ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕನಕ ಯುವ ಪಡೆ ಸೇರಿದಂತೆ ಕುರುಬ ಸಮಾಜದ ವಿವಿಧ ಸಂಘಟನೆಗಳು, ಅಹಿಂದ ಒಕ್ಕೂಟ, ಕಾಂಗ್ರೆಸ್ ಪಕ್ಷ ಮತ್ತು ಇನ್ನಿತರ ಸಂಘಟನೆಗಳ ಮುಖಂಡರು ಮಾತನಾಡಿ, ಸಿದ್ದರಾಮಯ್ಯರವರ ವಿರುದ್ಧ ತನಿಖೆಗೆ ಆದೇಶಿಸಿರುವುದನ್ನು ಖಂಡಿಸಿದರು.ರಾಜ್ಯಪಾಲರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಜೊತೆಗೆ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ ಎಲ್ಲಾ ಧರ್ಮದವರ, ವರ್ಗದವರ ಏಳಿಗಾಗಿ ಶ್ರಮಿಸುತ್ತಿರುವ ಸಿದ್ದರಾಮಯ್ಯರವರ ವಿರುದ್ಧ ತನಿಖೆಗೆ ಆದೇಶ ನೀಡಿರುವುದರ ಹಿಂದೆ ಷಡ್ಯಂತ್ರ ಅಡಗಿದೆ. ಅವರ ಜನಪ್ರಿಯತೆ ಸಹಿಸದ ಬಿಜೆಪಿ ಮತ್ತು ಜೆಡಿಎಸ್ ವಿರೋಧ ಪಕ್ಷಗಳು ಅವರನ್ನು ಅಧಿಕಾರದಿಂದ ಕೆಳಗಿಸಲು ಹುನ್ನಾರ ನಡೆಸುತ್ತಿರುವುದು ಖಂಡನೀಯ. ತಕ್ಷಣ ಅವರ ವಿರುದ್ಧ ತನಿಖೆಗೆ ನೀಡಿರುವ ಆದೇಶ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ನಗರಸಭೆ ಮಾಜಿ ಅಧ್ಯಕ್ಷೆ ವೈ. ರೇಣುಕಮ್ಮ, ಅಹಿಂದ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಬಿ. ಗಂಗಾಧರ್, ನಗರ ಅಧ್ಯಕ್ಷ ಕಾಂತರಾಜ್, ಕುರುಬ ಸಮಾಜದ ಕರಿಯಪ್ಪ, ಅಭಿಲಾಷ್, ಮಂಜುನಾಥ್ ಕೊಹ್ಲಿ, ಹುಚ್ಚಪ್ಪ, ಹೇಮಾವತಿ ಶಿವಾನಂದ್, ಶ್ರೀನಿವಾಸ್, ಗೋಪಿ, ವಕೀಲರ ಸಂಘದ ಅಧ್ಯಕ್ಷ ಉಮೇಶ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಹನುಮಮ್ಮ, ಕಾರ್ಮಿಕ ಮುಖಂಡ ವಿ. ವಿನೋದ್, ಬಂಜಾರ ಯುವ ವೇದಿಕೆ ಅಧ್ಯಕ್ಷ ಕೃಷ್ಣನಾಯ್ಕ, ಛಲವಾದಿ ಸಮಾಜದ ಅಧ್ಯಕ್ಷ ಚನ್ನಪ್ಪ, ಕಾಂಗ್ರೆಸ್ ಮುಖಂಡರಾದ ಜಹೀರ್ ಜಾನ್, ಅಂತೋಣಿ ವಿಲ್ಸನ್, ಲಕ್ಷ್ಮೀಕಾಂತ್, ವಿಲ್ಸನ್ ಬಾಬು, ಮೋಹನ್ ಪಳನಿ, ಎಂ. ಶಿವಕುಮಾರ್, ಎಸ್.ಕೆ ಸುಧೀಂದ್ರ, ರೂಪಾನಾರಾಯಣ, ಶೋಭಾ ರವಿಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.