ಸಾರಾಂಶ
ಬಳ್ಳಾರಿ: ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ನಾಯಕರ ಅವಹೇಳನಕಾರಿ ಹೇಳಿಕೆಗಳನ್ನು ಖಂಡಿಸಿ ಹಾಗೂ ಮುಡಾ ಪ್ರಕರಣದ ಆರೋಪಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿಯ ನೂರಾರು ಕಾರ್ಯಕರ್ತರು ನಗರದ ಗಡಗಿಚನ್ನಪ್ಪ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ನಾಯಕರು ಹಗುರವಾಗಿ ಮಾತನಾಡುತ್ತಿದ್ದಾರೆ. ಈ ಮೂಲಕ ಧಮ್ಕಿ ಹಾಕುವ ಪ್ರವೃತ್ತಿ ತೋರಿಸಿದ್ದಾರೆ. ದಲಿತ ಎಂಬ ಕಾರಣಕ್ಕಾಗಿಯೇ ರಾಜ್ಯಪಾಲರನ್ನು ಅಗೌರವದಿಂದ ಕಾಣಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಕಾಂಗ್ರೆಸ್ ಪ್ರತಿಭಟನೆ ವೇಳೆ ರಾಜ್ಯಪಾಲರ ಭಾವಚಿತ್ರಕ್ಕೆ ಅಪಮಾನ ಮಾಡಲಾಗಿದೆ. ಭಾವಚಿತ್ರಗಳನ್ನು ದಹಿಸಲಾಗಿದೆ. ಕಾಂಗ್ರೆಸ್‌ನ ಎಂಎಲ್ಸಿ ಐವನ್ ಡಿಸೋಜಾ ರಾಜ್ಯಪಾಲರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಅದೇ ರೀತಿ ಕಾಂಗ್ರೆಸ್ ನ ಅನೇಕ ನಾಯಕರು ಸಹ ರಾಜ್ಯಪಾಲರಿಗೆ ಗೌರವ ನೀಡದೇ ಮಾತನಾಡಿದ್ದಾರೆ. ರಾಜ್ಯಪಾಲರಿಗೆ ಏಕವಚನದಿಂದ ಸಂಬೋಧಿಸಿದ ಎಲ್ಲರನ್ನೂ ಬಂಧಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಕ್ಷದ ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಒಂದೇ ಒಂದು ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಬದಲಿಗೆ, ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿದೆ. ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದ ಬೆನ್ನಲ್ಲೇ ಮುಡಾ ಹಗರಣ ಹೊರ ಬಂದಿದೆ. ಕಾಂಗ್ರೆಸ್ ನಾಯಕರು ಅಧಿಕಾರ ದುರುಪಯೋಗ ಮಾಡಿಕೊಂಡು ನಾನಾ ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿದರು.ಕೂಡಲೇ ಮುಖ್ಯಮಂತ್ರಿ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಒತ್ತಾಯಿಸಿದರು.
ಗಡಗಿಚನ್ನಪ್ಪ ವೃತ್ತದಲ್ಲಿ ಕೆಲ ಹೊತ್ತು ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಳಿಕ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ಹೊರಟು ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗಳಿಗೆ ಮನವಿಪತ್ರ ಕಳಿಸಿಕೊಟ್ಟರು.ಸಿರುಗುಪ್ಪ ಮಾಜಿ ಶಾಸಕ ಸೋಮಲಿಂಗಪ್ಪ, ಪಕ್ಷದ ಜಿಲ್ಲಾ ಪ್ರಮುಖರಾದ ಡಾ.ಅರುಣಾ ಕಾಮಿನೇನಿ, ಗಣಪಾಲ್ ಐನಾಥ ರೆಡ್ಡಿ, ಸುಗುಣ, ಪುಷ್ಪಾ ಚಂದ್ರಶೇಖರ್, ಸಾಧನಾ ಹಿರೇಮಠ್, ವಿಜಯಲಕ್ಷ್ಮಿ, ಕೆ.ಎ.ರಾಮಲಿಂಗಪ್ಪ, ಎಸ್.ಮಲ್ಲನಗೌಡ, ಪಾಲಿಕೆ ಸದಸ್ಯರಾದ ಶ್ರೀನಿವಾಸ ಮೋತ್ಕರ್, ಸುರೇಖಾ ಗೌಡ, ಇಬ್ರಾಹಿಂ ಬಾಬು, ಸುರೇಶ್ ತೋರಣಗಲ್, ಮಲ್ಲೇಶ್ ಕುಮಾರ್ ಸೇರಿದಂತೆ ಪಕ್ಷದ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.