ಸಾರಾಂಶ
ಫೈನಾನ್ಸ್ ಸುಗ್ರೀವಾಜ್ಞೆ ವಾಪಸ್ ಮಾಡಿರುವುದು ರಾಜ್ಯಪಾಲರಿಗೆ ತಪ್ಪು ಗ್ರಹಿಕೆ ಹಾಗೂ ಮಾಹಿತಿ ಕೊರತೆಯಿಂದಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಗದಗ: ಫೈನಾನ್ಸ್ ಸುಗ್ರೀವಾಜ್ಞೆ ವಾಪಸ್ ಮಾಡಿರುವುದು ರಾಜ್ಯಪಾಲರಿಗೆ ತಪ್ಪು ಗ್ರಹಿಕೆ ಹಾಗೂ ಮಾಹಿತಿ ಕೊರತೆಯಿಂದಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ₹ 3 ಲಕ್ಷದವರೆಗೆ ಸಾಲದ ಮಿತಿ, ₹ 5 ಲಕ್ಷಕ್ಕೆ ಹೇಗೆ ದಂಡ ಹಾಕುತ್ತೀರಿ ಅನ್ನೋದು ಅವರ ಪ್ರಶ್ನೆಯಾಗಿದೆ. ಸಾಲ ಎಷ್ಟು ಕೊಟ್ಟಿದ್ದಾರೆ ಎನ್ನುವುದು ಪ್ರಶ್ನೆ ಅಲ್ಲ, ಸಾಲಗಾರರ ಮೇಲೆ ಹೇಗೆ ಹಿಂಸೆ ಮಾಡಿದ್ದೀರಿ, ಇದು ಆ ಹಿಂಸೆಗೆ ಹಾಕುವ ದಂಡವೇ ಹೊರತು ಸಾಲದ ಪ್ರಮಾಣಕ್ಕೆ ಅಲ್ಲ ಎಂದು ಸ್ಪಷ್ಟ ಪಡಿಸಿದ ಅವರು, ಈ ವಿಷಯವಾಗಿ ರಾಜ್ಯದಲ್ಲಿ ಸಾಕಷ್ಟು ಆತ್ಮಹತ್ಯೆ ಪ್ರಕರಣಗಳು ನಡೆದಿವೆ. ಇನ್ನು ಕೆಲವು ಪ್ರಕರಣಗಳಲ್ಲಿ ಸಾಯುವ ರೀತಿಯಲ್ಲಿ ಹಲ್ಲೆ ಮಾಡಿದ್ದಾರೆ. ಬಡವರು ಮಧ್ಯಮ ವರ್ಗದವರು ಸೇರಿದಂತೆ ಸಾಮಾನ್ಯ ಜನರ ಮನೆಗಳು ನಾಶವಾಗುತ್ತಿರುವುದನ್ನು ಗಮನಿಸಿ ಸರ್ಕಾರ ಈ ನಿರ್ಣಯ ಮಾಡಿದೆ. ಸಾಲ ಕೊಡುವುದು ಒಂದು ರೀತಿ ಮೂಲಭೂತ ಹಕ್ಕು ಎನ್ನುವ ತಪ್ಪು ಗ್ರಹಿಕೆ ಸಾಲ ನೀಡುವವರಲ್ಲಿ ಮೂಡಿದೆ ಇದು ಹೋಗಬೇಕಿದೆ ಎಂದರು.
ಮನಿ ಲಾಡ್ರಿಂಗ್ ಮಾಡುವುದು, ನೋಂದಣಿ ಇಲ್ಲದೇ, ಕಾನೂನು ಬಾಹಿರವಾಗಿ ಹಣ ವ್ಯವಹಾರ ಮಾಡುವುದು, ಸಾಲ ಕೊಟ್ಟು ಹಿಂಸಾತ್ಮಕವಾಗಿ ವಸೂಲಿ ಮಾಡುವುದು ಮೂಲಭೂತ ಹಕ್ಕು ಎನ್ನಲಾಗುತ್ತದೆಯೆ..? ಎಂದು ಪ್ರಶ್ನಿಸಿದ ಅವರು, ಹೀಗಾಗಿ ಈ ಆರು ಅಂಶಗಳ ಬಗ್ಗೆ ರಾಜ್ಯಪಾಲರಿಗೆ ತಕ್ಷಣವೇ ಕಡತಗಳೊಂದಿಗೆ ನಮ್ಮ ವಿವರಣೆ ಕಳಿಸಲಾಗಿತ್ತು. ಸಾರ್ವಜನಿಕರ ಮತ್ತು ಸಮಾಜದ ಹಿತದೃಷ್ಟಿಯಿಂದ ಅಂಗೀಕಾರ ಮಾಡಬೇಕು ಎಂದು ಆಗ್ರಹ ಮಾಡುತ್ತೇವೆ ಎಂದರು.
ರಾಜ್ಯಪಾಲರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎನ್ನುವ ಆರೋಪಗಳಿವೆಯಲ್ಲಾ ಎಂದಾಗ, ನಾನು ದ್ವೇಷದ ಟಿಪ್ಪಣಿ ಮಾಡಲ್ಲ. ಆದರೆ ರಾಜ್ಯದಲ್ಲಿ ದಿನವೂ ಎರಡು, ಮೂರು ಆತ್ಮಹತ್ಯೆ ನೋಡಿಕೊಂಡು ಸುಮ್ಮನ್ನೇ ಕೂರಲು ಆಗಲ್ಲ. ಆ ಕಾರಣಕ್ಕಾಗಿ ಸುಗ್ರೀವಾಜ್ಞೆ ತರಲು ಸಾಕಷ್ಟು ಚಿಂತನೆ ಮಾಡಿ ಈ ಹೆಜ್ಜೆ ಇಟ್ಟಿದ್ದೇವೆ. ಸಹಜವಾಗಿ ನಮ್ಮ ಸುಗ್ರಿವಾಜ್ಞೆ ಬಗ್ಗೆ ಅವರು ತಮ್ಮ ಆಕ್ಷೇಪ ಎತ್ತಿದ್ದಾರೆ. ಅವರ ಆಕ್ಷೇಪಣೆಗೆ ಸಮಂಜಸ ಉತ್ತರ ಕೊಡುತ್ತೇವೆ. ಸಂವಿಧಾನಾತ್ಮಕವಾಗಿ ಏನು ಮಾಡಬೇಕು ಅದರ ವ್ಯಾಪ್ತಿಯಲ್ಲಿ ಸುಗ್ರಿವಾಜ್ಞೆ ಮಾಡುತ್ತೇವೆ ಎಂದರು.
ದೆಹಲಿ ಚುನಾವಣೆ ಫಲಿತಾಂಶ ವಿಚಾರವಾಗಿ ಆಪ್ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜನರ ನಿರೀಕ್ಷೆಯಿಂದ ಆಮ್ ಆದ್ಮಿ ಪಾರ್ಟಿ ಈ ಹಿಂದೆ ಅಧಿಕಾರಕ್ಕೆ ಬಂದಿತ್ತು. ಅವರ ನೀತಿ, ಭರವಸೆಗಳಿಗೆ ಬಹಳಷ್ಟು ಜನರ ಆಕರ್ಷಣೆಗೆ ಕಾರಣವಾಗಿತ್ತು. ಈಗಿನ ಜನಾದೇಶ ನೋಡಿದರೆ ಮತ್ತೆ ನಾವು ಮರು ಪರಿಶೀಲನೆ ಮಾಡಬೇಕು. ಮಹಾರಾಷ್ಟ್ರದಲ್ಲಿ 39 ಲಕ್ಷ ಮತದಾರರ ಸೇರ್ಪಡೆ ವಿಚಾರವಾಗಿ ನಮ್ಮ ನಾಯಕ ರಾಹುಲ್ ಗಾಂಧಿ ಎತ್ತಿರುವ ವಿಷಯ ಪ್ರಮುಖವಾಗಿದೆ. ಇದು ರಾಷ್ಟ್ರೀಯ ವಿಷಯವಾಗಿ ಚರ್ಚೆಯಾಗಬೇಕು.
ಅಕ್ರಮ ವಲಸಿಲಿಗರನ್ನು ಅಮೇರಿಕಾ ಗಡಿಪಾರು ಮಾಡುತ್ತಿರುವ ವಿಷಯವಾಗಿ ಮಾತನಾಡಿ, ಟ್ರಂಪ್ ಅವರು ಸುಸಂಸ್ಕೃತರಾಗಿ ನಡೆದುಕೊಳ್ಳಬೇಕು. ಸುಸಂಸ್ಕೃತ ಸಮುದಾಯ ಅಂತಾ ಕರೆಸಿಕೊಳ್ಳುವ ಅಮೇರಿಕಾ ಭಾರತೀಯರನ್ನು ಈ ರೀತಿ ನಡೆಸಿಕೊಂಡಿದ್ದು ದುರ್ದೈವದ ಸಂಗತಿ. ಅಮೇರಿಕಾ ಇಷ್ಟೊಂದು ಬೆಳೆಯಲು ಭಾರತೀಯರ ಕೊಡುಗೆಯನ್ನು ಟ್ರಂಪ್ ಅರ್ಥ ಮಾಡಿಕೊಳ್ಳಬೇಕು ಎಂದರು.