ದ್ವೇಷ ಭಾಷಣ ಕಾಯ್ದೆ ರಾಜ್ಯದಲ್ಲಿ ಆಪತ್ತಾಗಬಹುದು ಎಂಬ ದೂರದೃಷ್ಟಿಯಿಂದ ರಾಜ್ಯಪಾಲರು ಮಸೂದೆಗೆ ಸಹಿ ಹಾಕಿಲ್ಲದಿರಬಹುದು ಎಂದು ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರು: ರಾಜ್ಯ ಸರ್ಕಾರ ಕಳುಹಿಸಿದ ಎಲ್ಲದಕ್ಕೂ ರಾಜ್ಯಪಾಲರು ಸಹಿ ಹಾಕಬೇಕು ಎಂದೇನಿಲ್ಲ. ಅದು ಅವರ ತೀರ್ಮಾನಕ್ಕೆ ಬಿಟ್ಟ ವಿಚಾರ. ಆದರೂ ಮುಂದಿನ ದಿನಗಳಲ್ಲಿ ದ್ವೇಷ ಭಾಷಣ ಕಾಯ್ದೆ ರಾಜ್ಯದಲ್ಲಿ ಆಪತ್ತಾಗಬಹುದು ಎಂಬ ದೂರದೃಷ್ಟಿಯಿಂದ ರಾಜ್ಯಪಾಲರು ಮಸೂದೆಗೆ ಸಹಿ ಹಾಕಿಲ್ಲದಿರಬಹುದು ಎಂದು ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಇಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾನೂನು ಜಾರಿಯಾದರೆ ಅದನ್ನು ರಾಜಕೀಯ ದುರುಪಯೋಗಪಡಿಸಬಹುದು. ವಿರೋಧಿಗಳ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಿದೆ. ದ್ವೇಷಭಾಷಣದ ಅಡಿಯಲ್ಲಿ ಯಾರನ್ನಾದರೂ ಜೈಲಿಗೆ ಕಳುಹಿಸಬಹುದು. ರಾಜಕಾರಣಿಗಳಿಗಿಂತ ಪತ್ರಕರ್ತರಿಗೂ ಇದು ಸಮಸ್ಯೆಯಾಗುತ್ತದೆ. ಈ ಎಲ್ಲ ಹತ್ತಾರು ಕಾರಣಗಳಿಂದ ರಾಜ್ಯಪಾಲರು ಮಸೂದೆಯನ್ನು ತಿರಸ್ಕರಿಸಿ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ ಎಂದರು.ಉದ್ಯಮಿ ಸಿ.ಜೆ.ರಾಯ್ ಸಾವಿಗೆ ಐಟಿ ಇಲಾಖೆ ಕಿರುಕುಳ ಎಂದು ಯಾರು ಬೇಕಾದರೂ ಆರೋಪ ಮಾಡಬಹುದು. ಆದರೆ ಅದು ತನಿಖೆಯಿಂದ ಸತ್ಯ ಗೊತ್ತಾಗುತ್ತದೆ. ಈಗ ತನಿಖಾ ಹಂತದಲ್ಲಿ ಇರುವುದರಿಂದ ಈ ಬಗ್ಗೆ ಹೆಚ್ಚಿನ ಚರ್ಚೆ ಅನಗತ್ಯ. ತನಿಖೆಯಿಂದ ಎಲ್ಲ ವಿಚಾರಗಳೂ ಹೊರ ಬರುತ್ತದೆ ಎಂದರು.
ಐಟಿಯಿಂದ ತೆರಿಗೆ ಪಾವತಿದಾರರನ್ನು ಉಳಿಸಿ ಎಂದು ಉದ್ಯಮಿ ಮೋಹನದಾಸ್ ಪೈ ಅವರು ಪ್ರಧಾನಿಗೆ ಪತ್ರ ಬರೆದ ವಿಚಾರಕ್ಕೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್, ಯಾವ ಪರಿಕಲ್ಪನೆಯಲ್ಲಿ ಅವರು ಪತ್ರ ಬರೆದಿದ್ದಾರೆ ಗೊತ್ತಿಲ್ಲ. ರಾಜ್ಯದಲ್ಲಿ ಹಿಂದಿನಂತೆ ಐಟಿ ದಾಳಿಗಳು ಆಗುತ್ತಿಲ್ಲ. ರಾಜಕೀಯ ಕಾರಣಕ್ಕೆ ಐಟಿ ದಾಳಿ ನಡೆಯುತ್ತದೆ ಎನ್ನುವುದು ಸರಿಯಲ್ಲ. ಬಿಜೆಪಿ ನಾಯಕರ ಮೇಲೂ ಐಟಿ ದಾಳಿ ನಡೆದಿದೆ. ಬಿಜೆಪಿಗರು ಕೂಡ ಐಟಿ ದಾಳಿಯಲ್ಲಿ ಸಿಲುಕಿಕೊಂಡದ್ದಿದೆ, ಹಾಗಾಗಿ ಮೋಹನದಾಸ ಪೈ ಯಾವ ಅರ್ಥದಲ್ಲಿ ಐಟಿ ದಾಳಿ ಬಗ್ಗೆ ಹೇಳಿದ್ದಾರೆ ಎಂದು ಗೊತ್ತಿಲ್ಲ ಎಂದರು.