ಸಂವಿಧಾನಾತ್ಮಕ ಸಂಪ್ರದಾಯದಂತೆ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸರ್ಕಾರದ ಅಭಿವೃದ್ಧಿ ಕಾರ್ಯ, ನೀತಿ ಮತ್ತು ಮುಂದಿನ ಯೋಜನೆಗಳ ಬಗ್ಗೆ ಭಾಷಣ ಮಾಡಬೇಕು. ಆದರೆ, ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಈ ಸಂಪ್ರದಾಯವನ್ನು ಬದಿಗೊತ್ತಿ ಬೇರೆ ರೀತಿಯಲ್ಲಿ ವರ್ತಿಸಿದ್ದಾರೆ.
ಹುಬ್ಬಳ್ಳಿ:
ರಾಜ್ಯಪಾಲರು ಸಂವಿಧಾನದ ಮಿತಿ ಮೀರಿ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಸರ್ಕಾರದ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂಅಹ್ಮದ್ ಆರೋಪಿಸಿದ್ದಾರೆ.ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನಸಭೆ- ವಿಧಾನ ಪರಿಷತ್ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ನಡೆದುಕೊಂಡ ರೀತಿಯೇ ಸಂವಿಧಾನ ಬಾಹಿರವಾಗಿದೆ ಎಂದು ಆರೋಪಿಸಿದರು.
ಸಂವಿಧಾನಾತ್ಮಕ ಸಂಪ್ರದಾಯದಂತೆ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸರ್ಕಾರದ ಅಭಿವೃದ್ಧಿ ಕಾರ್ಯ, ನೀತಿ ಮತ್ತು ಮುಂದಿನ ಯೋಜನೆಗಳ ಬಗ್ಗೆ ಭಾಷಣ ಮಾಡಬೇಕು. ಆದರೆ, ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಈ ಸಂಪ್ರದಾಯವನ್ನು ಬದಿಗೊತ್ತಿ ಬೇರೆ ರೀತಿಯಲ್ಲಿ ವರ್ತಿಸಿದ್ದಾರೆ. ರಾಜ್ಯಪಾಲರ ಈ ನಡೆ ರಾಜ್ಯದ ಜನತೆಗೆ ಅನ್ಯಾಯವಾಗಿದೆ. ಇಲ್ಲಿ ಭಾವನೆಗಳಿಗೆ ಅವಕಾಶವಿಲ್ಲ. ರಾಜ್ಯಪಾಲರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಬಿಟ್ಟು ಸಂವಿಧಾನಾತ್ಮಕ ಕರ್ತವ್ಯವನ್ನು ಮಾತ್ರ ನಿಭಾಯಿಸಬೇಕು ಎಂದರು.ಈ ವಿಷಯವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ಈಗಾಗಲೇ ಸರ್ಕಾರ ರಾಜ್ಯಪಾಲರ ನಡೆ ಖಂಡಿಸಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿದ್ದಾರೆ. ಇಂತಹ ಘಟನೆ ರಾಜ್ಯದಲ್ಲಿ ಹಿಂದೆಂದೂ ನಡೆದಿಲ್ಲ. ಇದು ಅಪಾಯಕಾರಿ ಪರಂಪರೆಯ ಆರಂಭವಾಗಬಹುದು. ಮುಂದಿನ ದಿನಗಳಲ್ಲಿ ಇಂತಹ ನಡೆಗಳಿಗೆ ಅವಕಾಶ ನೀಡಬಾರದು ಎಂದು ಸಲೀಂಅಹ್ಮದ ಆಗ್ರಹಿಸಿದರು.