ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ರಾಜ್ಯಪಾಲರು ಬಿಜೆಪಿ ಪಕ್ಷದ ಕೈಗೊಂಬೆ ಎಂಬುದನ್ನು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದೇ ಸಾಕ್ಷಿ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ದೂರಿದರು.ಪತ್ರಿಕಾಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಪರ ಕಾಳಜಿಯುಳ್ಳ ಸರ್ಕಾರದ ವಿರುದ್ಧ ಕಾನೂನು ಬಾಹಿರವಾಗಿ ತಡೆ ಮಾಡಲು ಬಿಡುವುದಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಾಜ್ಯಪಾಲರ ಇಂತಹ ನಡೆ ಸರಿಯಲ್ಲ ಎಂದರು.
ಸಿಎಂ ಸಿದ್ದರಾಮಯ್ಯರ ಪತ್ನಿ ಪಾರ್ವತಮ್ಮನವರ ಹೆಸರಿನಲ್ಲಿ ಮೈಸೂರು ಮೂಡಾದಲ್ಲಿ ಅಕ್ರಮವಾಗಿ ನಿವೇಶನ ಪಡೆದಿದೆ ಎಂದು ಹೇಳುವ ಬಿಜೆಪಿಗರು ಹಿಂದಿನ ವಾಸ್ತವವನ್ನು ತಿಳಿದುಕೊಳ್ಳದೆ ರಾಜ್ಯಪಾಲರ ಮೂಲಕ ಏಕಾಏಕಿ ಪ್ರಾಸಿಕ್ಯೂಷನ್ ಅನುಮತಿ ತಂದಿದ್ದಾರೆ ಎಂದು ಕಿಡಿಕಾರಿದರು.ಪಾರ್ವತಮ್ಮ ಅವರ ಸಹೋದರ ನೀಡಿರುವ ಜಮೀನು ಅಕ್ವೈರ್ ಮಾಡಿಕೊಂಡ ಮೂಡಾದವರು ಅದಕ್ಕೆ ಸರಿ ಸಮನಾಗಿ ಬೇರೆಡೆ ಜಮೀನು ನೀಡಿದೆ. ಮೂಡಾದ 50-50 ಅನುಪಾತದ ದಾಖಲೆಯಲ್ಲಿಲ್ಲವೇ ಅದನ್ನು ನೋಡದೇ ಸಿದ್ದರಾಮಯ್ಯರನ್ನು ಇಕ್ಕಟ್ಟಿಗೆ ಸಿಲುಕಲು ಪ್ರಾಸಿಕ್ಯೂಷನ್ ಎನ್ನುವ ಅಸ್ತ್ರ ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಪ್ರಕಾಶ್, ಜಿಲ್ಲಾ ಮಾಧ್ಯಮ ಸಂಚಾಲಕ ಎಂ.ಪುಟ್ಟೇಗೌಡ, ಕೆಪಿಸಿಸಿ ಸದಸ್ಯ ಎನ್. ಗಂಗಾಧರ್, ಮುಖಂಡ ನಾರಾಯಣಸ್ವಾಮಿ, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಸುರೇಶ್ ಇತರರು ಇದ್ದರು.ನಾಳೆ ಪ್ರತಿಭಟನಾ ಮೆರವಣಿಗೆಮದ್ದೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಖಂಡಿಸಿ ಹಾಗೂ ರಾಜ್ಯಪಾಲರನ್ನು ದುರುಪಯೋಗಪಡಿಸಿಕೊಂಡು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ನಡೆಸುತ್ತಿರುವ ದ್ವೇಷ ರಾಜಕಾರಣದ ವಿರುದ್ಧ ಆ.20 ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಕೊಲ್ಲಿ ಸರ್ಕಲ್ ನಿಂದ ತಾಲೂಕು ದಂಡಾಧಿಕಾರಿಗಳ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು, ಹಿರಿಯ ನಾಯಕರು, ಮುಖಂಡರು, ಯುವಕ-ಮಿತ್ರರು, ಮಹಿಳೆಯರು ಭಾಗವಹಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಬೆಂಬಲಿಸಬೇಕೆಂದು ಶಾಸಕ ಕೆ.ಎಂ.ಉದಯ್ ಮನವಿ ಮಾಡಿದ್ದಾರೆ.