ನರಸಿಂಹರಾಜಪುರರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದದೆ, ರಾಷ್ಟ್ರಗೀತೆಗೂ ಗೌರವ ತೋರದೆ ರಾಜ್ಯಪಾಲರು ರಾಜ್ಯದ ಜನರಿಗೆ ಹಾಗೂ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈ.ಸಿ.ಜೋಯಿ ಆರೋಪಿಸಿದರು.
- ಇ.ಸಿ.ಜೋಯಿ ಆರೋಪ । ಕಾಂಗ್ರೆಸ್‌ನಿಂದ ರಾಜ್ಯಪಾಲರ ವಿರುದ್ಧ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದದೆ, ರಾಷ್ಟ್ರಗೀತೆಗೂ ಗೌರವ ತೋರದೆ ರಾಜ್ಯಪಾಲರು ರಾಜ್ಯದ ಜನರಿಗೆ ಹಾಗೂ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈ.ಸಿ.ಜೋಯಿ ಆರೋಪಿಸಿದರು.
ಶುಕ್ರವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬಾಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಹಾಗೂ ಯ್ಯೂತ್ ಕಾಂಗ್ರೆಸ್‌ನಿಂದ ರಾಜ್ಯಪಾಲರ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ರಾಜ್ಯಪಾಲರ ಹುದ್ದೆ ಸಾಂವಿಧಾನಿಕ ಹುದ್ದೆ. ಇಂತಹ ಹುದ್ದೆಯನ್ನು ಅಲಂಕರಿಸಿರುವ ರಾಜ್ಯಪಾಲರು ರಾಜ್ಯ ಸರ್ಕಾರವನ್ನು ಪ್ರತಿನಿಧಿಸಬೇಕೆ ಹೊರತು ಯಾವುದೋ ಒಂದು ಪಕ್ಷದ ಏಜೆಂಟರಂತೆ ವರ್ತಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.ಆಡಳಿತಾರೂಢ ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣ ಓದುವುದು ರಾಜ್ಯಪಾಲರ ಕರ್ತವ್ಯವಾಗಿದೆ. ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ನರೇಗಾ ಯೋಜನೆ ಕೇಂದ್ರ ಸರ್ಕಾರ ರದ್ದುಪಡಿಸಿರುವ ಬಗ್ಗೆ, ಮಹಾತ್ಮಾಗಾಂಧೀಜಿ ಹೆಸರನ್ನು ಕೈಬಿಟ್ಟಿರುವ ಬಗ್ಗೆ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನರಿಗೆ ಆಗುತ್ತಿರುವ ಪ್ರಯೋಜಗಳ ಬಗ್ಗೆ ಉಲ್ಲೇಖಿಸಲಾಗಿತ್ತು. ಆದರೆ, ರಾಜ್ಯಪಾಲರು ಈ ಭಾಷಣ ಓದದೆ ಕೇಂದ್ರ ಸರ್ಕಾರವನ್ನು ತೃಪ್ತಿಪಡಿಸುವ ಕೆಲಸ ಮಾಡಿರುವುದು ನಿಜಕ್ಕೂ ಖಂಡನೀಯ ಎಂದರು.
ಕೇಂದ್ರ ಸರ್ಕಾರ ಇಡಿ, ಐಟಿ, ರಾಜ್ಯಪಾಲರ ಹುದ್ದೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ರಾಜ್ಯಪಾಲರ ಈ ನಡೆಯನ್ನು ತೀವ್ರವಾಗಿ ಖಂಡಿಸುತ್ತದೆ ಎಂದರು.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಜಿತ್ ಗೌಡ ದಂಡಿನಮಕ್ಕಿ ಮಾತನಾಡಿ, ರಾಜ್ಯಪಾಲರ ಈ ವರ್ತನೆಯಿಂದ ಅವರು ಬಿಜೆಪಿ ಕಾರ್ಯಕರ್ತರು ಎಂದು ಸಾಬೀತಾಗಿದೆ. ರಾಷ್ಟ್ರಗೀತೆಗೆ ಅವಮಾನ ಮಾಡಿರುವುದನ್ನು ಕ್ಷಮಿಸಲಾಗುವುದಿಲ್ಲ. ರಾಜ್ಯ ಸರ್ಕಾರದ ಜನಪರ ಹಾಗೂ ಅಭಿವೃದ್ಧಿ ಕೆಲಸ ಕಾರ್ಯ ಗಳನ್ನು ಸಹಿಸಲಾಗದ ಬಿಜೆಪಿ ಅನಾವಶ್ಯಕವಾಗಿ ಹೋರಾಟ ಮಾಡಲು ಹೋಗಿ ವಿಫಲರಾಗಿ ಈ ರೀತಿಯ ಕೆಲಸ ಮಾಡಿಸುತ್ತಿದೆ ಎಂದು ಆರೋಪಿಸಿದರು.ಹೋಬಳಿ ಘಟಕದ ಅಧ್ಯಕ್ಷ ಕೆ.ವಿ.ಸಾಜು ಮಾತನಾಡಿ, ರಾಜ್ಯಪಾಲರು ರಾಜ್ಯ ಸರ್ಕಾರದ ಭಾಷಣವನ್ನೇ ಓದಬೇಕು. ತಾವೇ ಸ್ವತಃ ಸಿದ್ಧಪಡಿಸಿಕೊಂಡು ಬಂದ ಭಾಷಣ ಓದುವಂತಿಲ್ಲ. ಸಾಂವಿಧಾನಿಕ ಹುದ್ದೆಗೆ ರಾಜ್ಯಪಾಲರು ಅಗೌರವ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಜನರಿಗಾಗುತ್ತಿರುವ ಅನುಕೂಲ, ಶಿಕ್ಷಣ, ಆರೋಗ್ಯದ ಬಗೆಗಿನ ಅನೇಕ ವಿಷಯಗಳು ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ಉಲ್ಲೇಖ ವಾಗಿತ್ತು. ಆದ್ದರಿಂದಲೇ ಬಿಜೆಪಿಯವರ ಮಾತು ಕೇಳಿ ರಾಜ್ಯಪಾಲರು ಈ ಭಾಷಣ ಓದಿಲ್ಲ ಎಂದು ದೂರಿದರು.
ಪ್ರತಿಭಟನೆಯಲ್ಲಿ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಧಿಕ್ಕಾರ ಕೂಗಿ ಪ್ರತಿಭಟಿಸಿದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಘಟಕ ಅಧ್ಯಕ್ಷ ಗೇರ್‌ಬೈಲ್‌ನಟರಾಜ್, ಜಿಲ್ಲಾ ಯೂತ್ ಕಾಂಗ್ರೆಸ್ ಕಾರ್ಯದರ್ಶಿಗಳಾದ ಎಂ.ಪಿ.ಅಭಿಲಾಷ್, ಅಕ್ಷಿರಾ, ತಾಲೂಕು ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ರತನ್ ಗೌಡ , ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿಳಾಲ್ ಮನೆ ಉಪೇಂದ್ರ, ಕ್ಷೇತ್ರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವರ್ಕಾಟೆ ಕಿರಣ್, ತಾಲೂಕು ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಎನ್.ಆರ್.ಪುರ ಪಟ್ಟಣ ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯ್, ಮುಖಂಡರಾದ ಮಾಳೂರುದಿಣ್ಣೆ ರಮೇಶ್, ಬೆನ್ನಿ, ಅಭಿಲಾಷ್, ಮಂಜುನಾಥ್, ಮಹೇಶ್ ಮತ್ತಿತರರಿದ್ದರು.