ಬುಧವಾರದ ಕಲಾಪದ ಪೂರ್ವಾಹ್ನ ರಾಜ್ಯಪಾಲರ ಭಾಷಣ ಖಂಡಿಸಿದ ಸಭಾ ನಾಯಕ ಹಾಗೂ ಸಚಿವರ ಕ್ಷಮೆಯಾಚನೆಗೆ ಪ್ರತಿಪಕ್ಷಗಳು ಹಾಗೂ ಅಪರಾಹ್ನ ವೇಳೆ ನಿಯಮಾವಳಿ ಪುಸ್ತಕ ಹರಿದ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕ್ಷಮೆಗೆ ಆಗ್ರಹಿಸಿ ಆಡಳಿತ ಪಕ್ಷದ ಸದಸ್ಯರು ಪಟ್ಟು ಹಿಡಿದ ಪರಿಣಾಮ ಇಡೀ ದಿನ ದಿನದ ಕಲಾಪ ಗದ್ದಲಕ್ಕೆ ಬಲಿಯಾಯ್ತು.
ಕನ್ನಡಪ್ರಭ ವಾರ್ತೆ ವಿಧಾನ ಪರಿಷತ್
ಬುಧವಾರದ ಕಲಾಪದ ಪೂರ್ವಾಹ್ನ ರಾಜ್ಯಪಾಲರ ಭಾಷಣ ಖಂಡಿಸಿದ ಸಭಾ ನಾಯಕ ಹಾಗೂ ಸಚಿವರ ಕ್ಷಮೆಯಾಚನೆಗೆ ಪ್ರತಿಪಕ್ಷಗಳು ಹಾಗೂ ಅಪರಾಹ್ನ ವೇಳೆ ನಿಯಮಾವಳಿ ಪುಸ್ತಕ ಹರಿದ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕ್ಷಮೆಗೆ ಆಗ್ರಹಿಸಿ ಆಡಳಿತ ಪಕ್ಷದ ಸದಸ್ಯರು ಪಟ್ಟು ಹಿಡಿದ ಪರಿಣಾಮ ಇಡೀ ದಿನ ದಿನದ ಕಲಾಪ ಗದ್ದಲಕ್ಕೆ ಬಲಿಯಾಯ್ತು.ಸದನದ ಆರಂಭದಲ್ಲಿ ರಾಜ್ಯಪಾಲರು ಮಾಡಿರುವ ಜಂಟಿ ಭಾಷಣ ಖಂಡಿಸಿರುವ ಸಭಾ ನಾಯಕರು ಕ್ಷಮೆ ಯಾಚಿಸಬೇಕು, ನಂತರವೇ ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಚರ್ಚಿಸಬೇಕೆಂದು ಪ್ರತಿಪಕ್ಷಗಳಿಂದ ಮಧ್ಯಾಹ್ನದವರೆಗೆ ಧರಣಿ, ಮಾತಿನ ಚಕಮಕಿ, ನಂತರ ಸದನ ಮುಂದೂಡಿಕೆ, ವಾಗ್ವಾದಗಳು ನಡೆದವು.
ಮಧ್ಯಾಹ್ನದ ನಂತರ ನಿಯಮಾವಳಿ ಪುಸ್ತಕ ಹರಿದ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕ್ಷಮೆ ಕೋರಬೇಕೆಂದು ಆಗ್ರಹಿಸಿ ಆಡಳಿತಾರೂಢ ಪಕ್ಷದ ಸದಸ್ಯರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ ಪರಿಣಾಮ ಬೇರೆ ಯಾವುದೇ ಕಲಾಪ ನಡೆಸಲು ಆಗದೇ ಸದನವನ್ನು ಗುರುವಾರಕ್ಕೆ ಮುಂದೂಡಲಾಯಿತು.ವಿಷಾದಕ್ಕೆ ಪ್ರತಿಪಕ್ಷ ಪಟ್ಟು:
ಕಲಾಪದ ನಡುವೆ ಸಭಾನಾಯಕ ಎನ್.ಎಸ್. ಬೋಸರಾಜು ಅವರು ರಾಜ್ಯಪಾಲರ ಭಾಷಣವನ್ನು ಖಂಡಿಸುವುದಾಗಿ ಹೇಳಿದ ಶಬ್ದವನ್ನು ಕಡತದಿಂದ ತೆಗೆದು ಹಾಕುವುದಾಗಿ ಹೇಳಿದರೂ ಪ್ರತಿಪಕ್ಷಗಳ ಸದಸ್ಯರು ಈ ಬಗ್ಗೆ ವಿಷಾದ ವ್ಯಕ್ತಪಡಿಸಬೇಕೆಂದು ಪಟ್ಟು ಹಿಡಿದು ಧರಣಿ ಮುಂದುವರೆಸಿದರು. ಇದಕ್ಕೆ ಬೋಸರಾಜು ತಾವು ರಾಜ್ಯಪಾಲರ ಭಾಷಣ ವಿರೋಧಿಸಿಲ್ಲ, ಆದರೆ ರಾಜ್ಯಪಾಲರು ರಾಷ್ಟ್ರಗೀತೆ ನುಡಿಸುವ ಮುನ್ನವೇ ತೆರಳಿದ್ದನ್ನು ಖಂಡಿಸಿದ್ದೇನೆ. ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಮರ್ಥಿಸಿಕೊಂಡರು.ಕಲಾಪ ಸುಗಮವಾಗಿ ನಡೆಯಲು ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಮುಖಂಡರ ಜೊತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ನಡೆಸಿದ ಸಂಧಾನ ಸಭೆಗಳು ಫಲಪ್ರದವಾಗಲಿಲ್ಲ.
ಭೋಜನ ವಿರಾಮದ ನಂತರ ಕಲಾಪ ಆರಂಭಗೊಳ್ಳುತ್ತಿದ್ದಂತೆ ವಿರೋಧ ಪಕ್ಷದ ಸದಸ್ಯರು ಪೀಠದ ಮುಂದೆ ಬಂದು ಪ್ರತಿಭಟನೆ ಮುಂದುವರಿಸಿದರು. ಅದನ್ನು ಪರಿಗಣಿಸದ ಸಭಾಪತಿ ಹೊರಟ್ಟಿ, ಪ್ರಶ್ನೋತ್ತರ ಕಲಾಪ ಆರಂಭಿಸಿದರು. ಅದರಿಂದ ಸಿಟ್ಟಾದ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಪರಿಷತ್ತಿನ ಕಾರ್ಯವಿಧಾನಗಳು ಮತ್ತು ನಡವಳಿಕೆ ನಿಯಮಗಳ ಪ್ರಕಾರ ಕಲಾಪ ನಡೆಯಬೇಕು. ನಿಯಮದಂತೆ ಕಲಾಪ ನಡೆಯದಿದ್ದರೆ, ನಿಯಮದ ಪುಸ್ತಕದ ಅವಶ್ಯಕತೆಯಿಲ್ಲ ಎಂದು ಪುಸ್ತಕ ಹರಿದು ಎಸೆದರು.ಅದರಿಂದ ಸಿಟ್ಟಾದ ಕಾಂಗ್ರೆಸ್ ಸದಸ್ಯರು, ಸಭಾನಾಯಕರ ಆಸನದ ಬಳಿ ಬಂದು ವಿಪಕ್ಷ ನಾಯಕರ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಆಗ ಸಭಾಪತಿಗಳು ನಿಯಮಾವಳಿ ಕ್ಷಮೆ ಕೋರುವಂತೆ ಛಲವಾದಿ ಅವರಿಗೆ ಸೂಚಿಸಿದರು. ಆಗ ಮಾತನಾಡಲು ಛಲವಾದಿ ಮುಂದಾದಾಗ ಪ್ರತಿಪಕ್ಷಗಳ ಸದಸ್ಯರು ಘೋಷಣೆ ಕೂಗತೊಡಗಿದ್ದರಿಂದ ಮಾತನಾಡಲು ಆಗಲಿಲ್ಲ. ಎರಡೂ ಕಡೆಯ ಸದಸ್ಯರು ಸಂವಿಧಾನ ವಿರೋಧಿಗಳು, ಸದನಕ್ಕೆ ಅಪಮಾನ ಮಾಡಿದ್ದಾರೆ ಎಂದೆಲ್ಲ ಪರಸ್ಪರ ಧಿಕ್ಕಾರ ಕೂಗಿದರು. ಅಂತಿಮವಾಗಿ ಸಭಾಪತಿಗಳು ಕಲಾಪವನ್ನು ಗುರುವಾರಕ್ಕೆ ಮುಂದೂಡಿದರು. ಬೆಳಗ್ಗೆ ಕಲಾಪ ಶುರುವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಸಭಾನಾಯಕರು ರಾಜ್ಯಪಾಲರು ಭಾಷಣ ಓದಿಲ್ಲ, ಖಂಡಿಸುವುದಾಗಿ ಎಂದು ಹೇಳಿದ್ದಾರೆ. ರಾಜ್ಯಪಾಲರಿಗೆ ನಿಂದನೆ ಮಾಡಲಾಗಿದೆ. ಹೀಗಾಗಿ ಒಂದು ಕಡೆ ನಿಂದನೆ ಮಾಡಿ ಮತ್ತೊಂದು ಕಡೆ ವಂದನೆ ಮಾಡಲು ಹೊರಟಿರುವುದು ಸರಿಯಲ್ಲ, ನಿಂದನೆಯೋ, ವಂದನೆಯೋ ಎಂಬುದು ಮೊದಲು ತೀರ್ಮಾನವಾಗಲಿ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯ ಸಚೇತಕ ಸಲೀಂ ಅಹಮದ್ ಅವರು ವಂದನಾ ನಿರ್ಣಯ ಪ್ರಸ್ತಾವನೆ ಹಾಗೂ ಅನುಮೋದನೆ ನಂತರ ಚರ್ಚೆ ಆರಂಭವಾಗಿದೆ. ಚರ್ಚೆ ಮುಂದುವರೆಸಲು ಅವಕಾಶ ನೀಡಬೇಕು ಎಂದರು.
ಈ ಮಾತು ಒಪ್ಪದ ಜೆಡಿಎಸ್ ಸದಸ್ಯ ಬೋಜೇಗೌಡ ಅವರು, ಸದನದಲ್ಲಿ ರಾಜ್ಯಪಾಲರ ಭಾಷಣ ಮಂಡಿಸಿದ್ದಕ್ಕೆ ಸಭಾನಾಯಕರು ವಿರೋಧ ವ್ಯಕ್ತಪಡಿಸಿ ಖಂಡಿಸಿದ್ದಾರೆ. ಈಗಲೂ ತಮ್ಮ ಹೇಳಿಕೆಯನ್ನು ಸಭಾನಾಯಕರು ಸಮರ್ಥಿಸಿಕೊಂಡಿದ್ದಾರೆ. ಅವರಾಡಿರುವ ಮಾತು ಕಡತದಲ್ಲಿ ದಾಖಲಾಗಿದೆ. ರಾಜ್ಯಪಾಲರು ರಾಜ್ಯದ ಜನತೆಗೆ ಅಪಮಾನ ಮಾಡಿದ್ದಾರೆ ಎಂದು ಹೇಳಿರುವುದನ್ನು ಸಭಾನಾಯಕರು ಸಮರ್ಥಿಸಿಕೊಳ್ಳಲಿ, ನಂತರ ಮುಂದಿನ ತೀರ್ಮಾನವಾಗಲಿ ಎಂದು ಹೇಳಿದರು.ಎರಡೂ ಕಡೆ ತಮ್ಮ ವಾದಕ್ಕೆ ಬಿಗಿಯಾಗಿ ಅಂಟಿಕೊಂಡ ಕಾರಣ ಸಭಾಪತಿಗಳು ಸಂಧಾನ ಸಭೆ ನಡೆಸಲು ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು.ಸಂಧಾನ ವಿಫಲ:
ಪುನಃ ಸದನ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸದನ ನಡೆಯಬೇಕು ಎಂಬುದು ತಮ್ಮ ಉದ್ದೇಶ. ಆದರೆ ಅತಿಯಾದ ದುಂಡಾವರ್ತನೆ ಸರಿಯಲ್ಲ. ಅಚಾತುರ್ಯ ನಡೆದಾಗ ಸರ್ಕಾರ ಬಗ್ಗಬೇಕು. ಸಂವಿಧಾನಕ್ಕೆ ಅಪಪ್ರಚಾರ ಆದಾಗ ಅದನ್ನು ನಾವು ಕೇಳಬಾರದೇ ಎಂದು ಪ್ರಶ್ನಿಸಿದರು.ಜೆಡಿಎಸ್‌ನ ಬೋಜೇಗೌಡ ಅವರು, ರಾಜ್ಯಪಾಲರ ಭಾಷಣವನ್ನು ಸದನದಲ್ಲಿ ಮಂಡಿಸಿದ ನಂತರ ಸಭಾನಾಯಕ ಬೋಸರಾಜು ಅವರು ರಾಜ್ಯಪಾಲರ ಭಾಷಣ ಖಂಡಿಸಿರುವುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಾಗಿ ಕಡತದಲ್ಲಿ ದಾಖಲಾಗಿರುವ ಆ ಶಬ್ದ ತೆಗೆದು ಹಾಕಬೇಕು. ಬಳಸಿರುವ ಮಾತು ತೆಗೆದು ಹಾಕದೆ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಇದಕ್ಕೆ ಛಲವಾದಿ ಅವರು ಸಭಾನಾಯಕರು ವಿಷಾದ ವ್ಯಕ್ತಪಡಿಸಬೇಕು ಎಂದರೆ, ಬಿಜೆಪಿಯ ಪ್ರತಾಪ್‌ಸಿಂಹ ನಾಯಕ್ ಅವರು ವಿಷಾದ ವ್ಯಕ್ತಪಡಿಸಿದರೆ ದೊಡ್ಡವರಾಗುತ್ತಾರೆ. ತಾವಾಡಿರುವ ಮಾತು ಸರಿ ಎಂದು ಮಾಡುವುದು ಅಹಂ ಆಗುತ್ತದೆ ಎಂದರು.ಕಡತದಿಂದ ಖಂಡನೆ ಶಬ್ದ ರದ್ದು:ಪ್ರತಿಪಕ್ಷಗಳ ಒತ್ತಾಯಕ್ಕೆ ಮಣಿದ ಸಭಾಪತಿ ಹೊರಟ್ಟಿ ಅವರು ಸಭಾನಾಯಕರು ರಾಜ್ಯಪಾಲರ ಭಾಷಣವನ್ನು ಖಂಡಿಸಿದ ಶಬ್ದವನ್ನು ತೆಗೆದು ಹಾಕುವುದಾಗಿ ರೂಲಿಂಗ್ ನೀಡಿದರು. ಆದರೆ ಇಷ್ಟಕ್ಕೆ ಸಮಾಧಾನ ಆಗದ ಪ್ರತಿಪಕ್ಷಗಳ ಸದಸ್ಯರು ಬೋಸರಾಜು ಅವರು ವಿಷಾದ ವ್ಯಕ್ತಪಡಿಸಬೇಕೆಂದು ಪಟ್ಟು ಹಿಡಿದಾಗ ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.ನಿಯಮದ ಪುಸ್ತಕ ಹರಿದ ಛಲವಾದಿಈ ನಡುವೆ ಆಡಳಿತ ಮತ್ತು ವಿಪಕ್ಷ ಸದಸ್ಯರು ಪರಸ್ಪರ ಧಿಕ್ಕಾರದ ಘೋಷಣೆ ಕೂಗಿದರು. ಹೊರಟ್ಟಿ ಅವರು ಎರಡೂ ಕಡೆಯ ಸದಸ್ಯರಿಗೆ ತಮ್ಮ ಆಸನಕ್ಕೆ ಹೋಗಿ ಮಾತನಾಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸದನ ಹತೋಟಿಗೆ ತರಲಾಗಲಿಲ್ಲ. ಹೀಗಾಗಿ ಕಲಾಪವನ್ನು 15 ನಿಮಿಷಗಳವರೆಗೆ ಮುಂದೂಡಲಾಯಿತು.ಮತ್ತೆ ಸದನ ಸಮಾವೇಶಗೊಂಡರೂ ಆಡಳಿತ ಮತ್ತು ವಿಪಕ್ಷ ಸದಸ್ಯರು ಪ್ರತಿಭಟನೆ ಮುಂದುವರಿಸಿದರು.