ಮೈಕ್ರೋ ಫೈನಾನ್ಸ್‌ ಸುಗ್ರೀವಾಜ್ಞೆಗೆ ರಾಜ್ಯಪಾಲರ ಕ್ರಮಕ್ಕೆ ಸ್ವಾಗತ: ಗಿರೀಶ್ ಮಟ್ಟಣ್ಣವರ್

| Published : Feb 14 2025, 12:35 AM IST

ಮೈಕ್ರೋ ಫೈನಾನ್ಸ್‌ ಸುಗ್ರೀವಾಜ್ಞೆಗೆ ರಾಜ್ಯಪಾಲರ ಕ್ರಮಕ್ಕೆ ಸ್ವಾಗತ: ಗಿರೀಶ್ ಮಟ್ಟಣ್ಣವರ್
Share this Article
  • FB
  • TW
  • Linkdin
  • Email

ಸಾರಾಂಶ

ಮಿತಿ ಮೀರಿದ ಅಕ್ರಮ ಬಡ್ಡಿ ದಂಧೆ, ಅದರ ಹಾವಳಿಯಿಂದ ತತ್ತರಿಸಿದ್ದ ಜನರಿಗೆ ಧೈರ್ಯ ತುಂಬಲು ರಾಜ್ಯ ಸರ್ಕಾರದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದು ಸ್ವಾಗತಾರ್ಹವಾಗಿದ್ದು, ಇದಕ್ಕಾಗಿ ರಾಜ್ಯಪಾಲರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಸೌಜನ್ಯ ಹೋರಾಟ ಸಮಿತಿ ಮತ್ತು ಪ್ರಜಾಪ್ರಭುತ್ವ ವೇದಿಕೆಯ ಗಿರೀಶ್ ಮಟ್ಟಣ್ಣವರ್ ಹೇಳಿದರು.

ಗೌರ್ನರ್‌ ಅಂಕಿತಕ್ಕೆ ಸೌಜನ್ಯ ಹೋರಾಟ ಸಮಿತಿಯ ಮಟ್ಟಣ್ಣವರ್‌ ಮೆಚ್ಚುಗೆ । ದೇವರ ಹೆಸರಿನ ಹಣಕಾಸು ಸಂಸ್ಥೆಗಳ ವಿರುದ್ದ ಕ್ರಮಕ್ಕೆ ಒತ್ತಾಯ

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಿತಿ ಮೀರಿದ ಅಕ್ರಮ ಬಡ್ಡಿ ದಂಧೆ, ಅದರ ಹಾವಳಿಯಿಂದ ತತ್ತರಿಸಿದ್ದ ಜನರಿಗೆ ಧೈರ್ಯ ತುಂಬಲು ರಾಜ್ಯ ಸರ್ಕಾರದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದು ಸ್ವಾಗತಾರ್ಹವಾಗಿದ್ದು, ಇದಕ್ಕಾಗಿ ರಾಜ್ಯಪಾಲರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಸೌಜನ್ಯ ಹೋರಾಟ ಸಮಿತಿ ಮತ್ತು ಪ್ರಜಾಪ್ರಭುತ್ವ ವೇದಿಕೆಯ ಗಿರೀಶ್ ಮಟ್ಟಣ್ಣವರ್ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಡವರು, ಮಧ್ಯಮ ವರ್ಗವನ್ನೇ ಗುರಿಯಾಗಿಸಿಕೊಂಡು ಧನದಾಹಿಗಳು ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ಸುಲಭದಲ್ಲಿ ಸಾಲ ನೀಡುವುದಾಗಿ ನಗರ, ಗ್ರಾಮೀಣ ಜನರನ್ನು, ಮುಖ್ಯವಾಗಿ ಅಮಾಯಕ ಮಹಿಳೆಯರನ್ನು ತಮ್ಮತ್ತ ಸೆಳೆದು ಸಂಘ ರಚಿಸಿ, ಬಡ್ಡಿ ದಂಧೆಯ ಚಕ್ರವ್ಯೂಹದೊಳಗೆ ಸಿಲುಕಿಸುತ್ತಿದ್ದುದಕ್ಕೆ ಇನ್ನು ಬ್ರೇಕ್ ಬೀಳುವ ವಿಶ್ವಾಸವಿದೆ ಎಂದರು.

ಸರ್ಕಾರದ ಸುಗ್ರೀವಾಜ್ಞೆ ಪ್ರಕಾರ ಪರವಾನಗಿ ಹೊಂದಿರದ ಸಂಸ್ಥೆಗಳಿಂದ ಪಡೆದ ಸಾಲ ಕಟ್ಟುವಂತಿಲ್ಲ. ಸಾಲ ಕಟ್ಟುವಂತೆ ಬಂದವರಿಗೆ ಪರವಾನಗಿ, ಎನ್ಆರ್‌ಎಲ್‌ಎಂ ಸಹಾಯಧನ ಮಾಹಿತಿಯನ್ನು ಜನರು ಕೇಳಬೇಕು. ಆರ್‌ಬಿಐ ನಿಯಮಾನುಸಾರ ಸಾಲ ನೀಡಲು ಯಾರಿಂದಲೂ ಹೆಬ್ಬೆಟ್ಟಿನ ಗುರುತು ಪಡೆಯುವಂತಿಲ್ಲ. ಆದರೂ, ಕೆಲ ಮೈಕ್ರೋ ಫೈನಾನ್ಸ್‌ಗಳು ಫಲಾನುಭವಿಗಳ ಹೆಬ್ಬೆಟ್ಟು ಪಡೆದ ದಾಖಲೆಗಳ ಆದಾರದಲ್ಲಿ ಇತರೆಡೆ ಸಾಲ ಪಡೆದ ಅನೇಕ ನಿದರ್ಶನಗಳೂ ಇವೆ ಎಂದು ದೂರಿದರು.

ಅತಿಯಾದ ಬಡ್ಡಿ, ವಾರದ ಕಂತುಗಳ ಮಾನಸಿಕ ಹಿಂಸೆ ತಾಳದೇ ಜನರು ಸಾವಿಗೆ ಶರಣಾಗುತ್ತಿರುವುದು ಆತಂಕದ ಸಂಗತಿ. ಮರ್ಯಾದೆಗೆ ಅಂಜಿ ಅನೇಕರು ಊರು ಬಿಟ್ಟು, ಗುಳೇ ಹೊರಟಿರುವುದು ಮತ್ತು ಕಿರುಕುಳ ತಾಳದೇ ಸಾವಿಗೆ ಶರಣಾಗುತ್ತಿರುವುದು ದುರಂತ. ಬಹುರಾಷ್ಟ್ರೀಯ ಅಕ್ರಮ ಮೀಟರ್ ಬಡ್ಡಿ ದಂಧೆಯ ಮೈಕ್ರೋ ಫೈನಾನ್ಸ್‌ಗಳ ಜೊತೆಗೆ ಗ್ರಾಮೀಣಾಭಿವೃದ್ಧಿ ಹೆಸರಿನಲ್ಲಿ ದೇವರ ಫೋಟೋವನ್ನು ಸಾಲದ ಪುಸ್ತಕ ಮೇಲೆ ಮುದ್ರಿಸಿ, ದೇವರ ಹೆಸರಲ್ಲಿ ಭಾವನೆಗಳನ್ನು ಬಿತ್ತು, ಅತೀ ಹೆಚ್ಚು ಸಂಘ ರಚಿಸಿ, ಬಡ್ಡಿ ಲೇವಾದೇವಿ ಮಾಡುತ್ತಿರುವ ಸಂಸ್ಥೆಗಳೂ ಇವೆ ಎಂದು ಆರೋಪಿಸಿದರು.

ಕಳೆದೊಂದು ವರ್ಷದಿಂದ ಮಹೇಶ ಶೆಟ್ಟಿ ತಿಮ್ಮರೋಡಿ ಮಾರ್ಗದರ್ಶನದಲ್ಲಿ ಸೌಜನ್ಯ ಹೋರಾಟ ಸಮಿತಿ ನಿರಂತರ ಜನ ಜಾಗೃತಿ, ಹೋರಾಟ ಹಮ್ಮಿಕೊಂಡು, ಇಂದು ಇಡೀ ರಾಜ್ಯದಲ್ಲಿ ಜಾಗೃತಿ ಮೂಡಿಸುತ್ತಿರುವುದರ ಪ್ರತಿಫಲವಾಗಿ ಅಕ್ರಮ ಮೈಕ್ರೋ ಫೈನಾನ್ಸ್‌ಗಳ ಮುಖವಾಡ ಅನಾವರಣಗೊಂಡಿದೆ ಎಂದುತಿಳಿಸಿದರು.

ವಕೀಲ ಮಹೇಶ ಶೆಟ್ಟಿ ತಿಮ್ಮರೋಡಿ ಮಾತನಾಡಿ, ನಮ್ಮದು ಮೈಕ್ರೋ ಫೈನಾನ್ಸ್ ಅಲ್ಲ, ಅದು ಬಿಸಿಎ ಎಂಬುದಾಗಿ ಹೇಳಿಕೊಳ್ಳುವ ಸಂಸ್ಥೆಗಳವರ ಬಳಿ ಯಾವುದೇ ದಾಖಲೆಗಳೇ ಇಲ್ಲ. ದಾಖಲೆಗಳು ಇದ್ದರೆ ಸರ್ಕಾರದ ಮುಂದೆ ಹಾಜರುಪಡಿಸಬೇಕಾಗಿತ್ತು. ಇದೆಲ್ಲಾ ಡ್ರಾಮಾ ಅಷ್ಟೇ. ಯಾರೇ ಆಗಲಿ ಮಾನಸಿಕ ಹಿಂದೆ, ದೈಹಿಕ ಹಲ್ಲೆಗೆ ಮುಂದಾದರೆ, ನಿಯಮ ಬಾಹಿರವಾಗಿ ವಸೂಲಿ ಮಾಡುವ ಸಿಬ್ಬಂದಿ, ಸಂಸ್ಥೆಗಳ ಮುಖ್ಯಸ್ಥರ ವಿರುದ್ಧವೇ ಎಪ್ಐಆರ್‌ ದಾಖಲಿಸಬೇಕು. ದೇವರ ಹೆಸರಿನಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸುವುದು ಬಿಎನ್‌ಎಸ್‌ 354ರ ಪ್ರಕಾರ ಅಪರಾಧ. ಈ ನಿಟ್ಟಿನಲ್ಲಿ ಸರ್ಕಾರ ಸ್ವಯಂ ಪ್ರೇರಿತ ದೂರು ದಾಖಲಿಸಬೇಕು ಎಂದರು.

ಸ್ವಾಭಿಮಾನಿ ಬಳಗದ ಶಿವಕುಮಾರ ಡಿ.ಶೆಟ್ಟರ್, ರಾಜು ಮೌರ್ಯ, ಸಂಚಾರಿ ಸಂತೋಷ, ಸಮಿತಿಯ ರಮಾ ನಾಗರಾಜ, ವಿರುಪಾಕ್ಷಪ್ಪ ಪಂಡಿತ್‌, ಅಹಿಂದ ಮುಖಂಡರಾದ ಎಸ್.ಎಂ.ಸಿದ್ದಲಿಂಗಪ್ಪ, ಚಂದ್ರು ದೀಟೂರು ಇತರರು ಇದ್ದರು.